ಮೈಸೂರು ದಸರಾ 2026: ದಕ್ಷಿಣ ಭಾರತದ ಸಿಎಂಗಳಿಗೆ ಆಹ್ವಾನ, ಅದ್ಧೂರಿ ಆಚರಣೆಗೆ ಸಿದ್ಧತೆ

ಪಶ್ಚಾತ್ತಾಪ (9)

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿ ಇನ್ನಷ್ಟು ಅದ್ಧೂರಿ ಹಾಗೂ ವೈವಿಧ್ಯಮಯವಾಗಿ ಆಚರಿಸಲು ರಾಜ್ಯ ಸರ್ಕಾರ ಸಿದ್ಧತೆಗಳನ್ನು ಚುರುಕುಗೊಳಿಸಿದೆ. ದಸರಾ ಉತ್ಸವಕ್ಕೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯ ಶಕ್ತಿ ಭವನದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಹಲವು ಪ್ರಮುಖ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಲಾಗಿದೆ.

ದಸರಾ ಮಹೋತ್ಸವವನ್ನು ಕೇವಲ ಕರ್ನಾಟಕದ ಉತ್ಸವವಾಗಿ ಸೀಮಿತಗೊಳಿಸದೆ, ದೇಶದ ವಿವಿಧ ರಾಜ್ಯಗಳ ಸಾಂಸ್ಕೃತಿಕ ವೈವಿಧ್ಯತೆಯನ್ನು ಪರಿಚಯಿಸುವ ವೇದಿಕೆಯನ್ನಾಗಿ ರೂಪಿಸಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳ ಕಲಾತಂಡಗಳನ್ನು ಮೈಸೂರಿಗೆ ಆಹ್ವಾನಿಸಿ, ಅವರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ದಸರಾ ವೇದಿಕೆಯಲ್ಲಿ ಅವಕಾಶ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಸೇನಾ ಪಡೆಗಳು, ಇಸ್ರೋ, ಡಿಆರ್‌ಡಿಒಗೆ ಆಹ್ವಾನ

ಈ ಬಾರಿಯ ದಸರಾ ಕಾರ್ಯಕ್ರಮಗಳಲ್ಲಿ ಭಾರತೀಯ ಸೇನಾಪಡೆಗಳ ಭಾಗವಹಿಸುವಿಕೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆಯ ತಂಡಗಳನ್ನು ಕವಾಯತು ಮತ್ತು ಸ್ತಬ್ಧಚಿತ್ರ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಆಹ್ವಾನಿಸಲು ತೀರ್ಮಾನಿಸಲಾಗಿದೆ.

ಇದರ ಜೊತೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ವಿವಿಧ ರಾಷ್ಟ್ರೀಯ ಸಂಸ್ಥೆಗಳನ್ನು ದಸರಾಗೆ ಆಹ್ವಾನಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಏರ್‌ಶೋ, ಡ್ರೋನ್ ಶೋಗೆ ಚಿಂತನೆ

ಮೈಸೂರು ದಸರಾ ಸಂದರ್ಭದಲ್ಲಿ ವಿಶೇಷ ಆಕರ್ಷಣೆಯಾಗಿ ಏರ್‌ಶೋ ಆಯೋಜಿಸುವ ಕುರಿತು ಕೇಂದ್ರ ರಕ್ಷಣಾ ಸಚಿವರೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ಸೂಚಿಸಿದ್ದಾರೆ. ಇದರೊಂದಿಗೆ ಬೃಹತ್ ಡ್ರೋನ್ ಶೋ ನಡೆಸುವ ಬಗ್ಗೆಯೂ ಸಭೆಯಲ್ಲಿ ಸಮಾಲೋಚನೆ ನಡೆದಿದೆ. ಈ ಕಾರ್ಯಕ್ರಮಗಳು ಕಾರ್ಯರೂಪಕ್ಕೆ ಬಂದರೆ ದಸರಾ ಮಹೋತ್ಸವಕ್ಕೆ ಮತ್ತಷ್ಟು ಆಕರ್ಷಣೆ ದೊರೆಯುವ ನಿರೀಕ್ಷೆಯಿದೆ.

ವಿವಿಧ ದೇಶಗಳ ರಾಯಭಾರಿಗಳು ಹಾಗೂ ಉನ್ನತಾಧಿಕಾರಿಗಳನ್ನು ದಸರಾ ವೀಕ್ಷಣೆಗೆ ಆಹ್ವಾನಿಸುವ ಮೂಲಕ ಉತ್ಸವಕ್ಕೆ ಅಂತರರಾಷ್ಟ್ರೀಯ ಮಟ್ಟದ ಮೆರುಗು ನೀಡಲು ಸರ್ಕಾರ ಉದ್ದೇಶಿಸಿದೆ.

ಈ ಬಾರಿ ದಸರಾ ಕಾರ್ಯಕ್ರಮಗಳಲ್ಲಿ ಹಲವು ಹೊಸ ಪರಿಕಲ್ಪನೆಗಳನ್ನು ಸೇರಿಸಲು ಚರ್ಚಿಸಲಾಗಿದೆ. ಚಿತ್ರಸಂತೆ, ಫ್ಲೀ ಮಾರ್ಕೆಟ್, ವಿಂಟೇಜ್ ಕಾರ್ ರ‍್ಯಾಲಿ, ರಂಗೋಲಿ ಸ್ಪರ್ಧೆ ಸೇರಿದಂತೆ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ ಕಲಾತಂಡಗಳಿಗೆ ಅವಕಾಶ ನೀಡುವ ಮೂಲಕ ಕರ್ನಾಟಕದ ವೈವಿಧ್ಯಮಯ ಕಲೆ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸಲು ಯೋಜಿಸಲಾಗಿದೆ.

ಪ್ರವಾಸಿಗರಿಗೆ ಉತ್ತಮ ವ್ಯವಸ್ಥೆ

ದಸರಾ ಕಾರ್ಯಕ್ರಮಗಳಿಗೆ ಟಿಕೆಟ್ ಪಡೆದ ಪ್ರೇಕ್ಷಕರಿಗೆ ಸೂಕ್ತ ಆಸನ ವ್ಯವಸ್ಥೆ ಕಲ್ಪಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಕಾರ್ಯಕ್ರಮಗಳ ವೇಳೆ ಜನರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

2026ರ ಮೈಸೂರು ದಸರಾ ಮಹೋತ್ಸವ ಅಕ್ಟೋಬರ್ 11ರಂದು ಉದ್ಘಾಟನೆಯಾಗಲಿದ್ದು, ಅಕ್ಟೋಬರ್ 21ರಂದು ವಿಜಯದಶಮಿ ಜಂಬೂಸವಾರಿ ನಡೆಯಲಿದೆ. 

Exit mobile version