ಕಾಂತಾರ ಸಿನಿಮಾಕ್ಕೆ ಮೈಸೂರು ಸ್ಯಾಂಡಲ್ ಸೋಪ್ ಸುಗಂಧ ಭಾಗೀದಾರ: ಎಂ.ಬಿ ಪಾಟೀಲ

Untitled design 2025 09 26t115510.735

ಬೆಂಗಳೂರು: ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ, ರಿಷಬ್‌‌ ಶೆಟ್ಟಿ ನಟನೆಯ ಕಾಂತಾರ- ಚಾಪ್ಟರ್ 1 ಸಿನಿಮಾಕ್ಕೆ ಸರಕಾರಿ ಸ್ವಾಮ್ಯದ ಮತ್ತು ಮೈಸೂರು ಸ್ಯಾಂಡಲ್ ಸೋಪ್ ಖ್ಯಾತಿಯ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು (ಕೆಎಸ್ ಡಿಎಲ್) ಸುಗಂಧ ಭಾಗಿದಾರ (ಫ್ರ್ಯಾಗ್ರನ್ಸ್ ಪಾರ್ಟನರ್) ಆಗಿ, ಸಹ-ಪ್ರಾಯೋಜಕತ್ವ ನೀಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ತಿಳಿಸಿದ್ದಾರೆ.

ಈ ಬಗ್ಗೆ ಶುಕ್ತವಾರ ಮಾಹಿತಿ ನೀಡಿರುವ ಅವರು, ಕನ್ನಡ ಚಿತ್ರರಂಗವು ಸ್ಯಾಂಡಲ್ ವುಡ್ ಎಂದೇ ಹೆಸರಾಗಿದೆ. ಹಾಗೆಯೇ ಕೆಎಸ್ಡಿಎಲ್ ಸಂಸ್ಥೆಯು ಸ್ಯಾಂಡಲ್ ಸೋಪ್ ಮತ್ತು ಗಂಧದ ಎಣ್ಣೆಗೆ ಹೆಸರಾಗಿದೆ. ಈಗ ಸಂಸ್ಥೆ ಮತ್ತು ಸ್ಯಾಂಡಲ್ ವುಡ್ ಚಿತ್ರತಂಡದ ನಡುವೆ ಒಪ್ಪಂದ ಆಗಿದೆ. ಚಿತ್ರತಂಡವು ತನ್ನ ಪ್ರತೀ ಪ್ರದರ್ಶನದಲ್ಲೂ ಕೆಎಸ್ಡಿಎಲ್ ಉತ್ಪನ್ನಗಳಿಗೆ ಪ್ರಚಾರ ನೀಡಲಿದೆ ಎಂದಿದ್ದಾರೆ.

ಕನ್ನಡ, ತೆಲುಗು, ಹಿಂದಿ, ತಮಿಳು, ಮಲೆಯಾಳಂ, ಇಂಗ್ಲಿಷ್ ಅಲ್ಲದೆ ಸ್ಪ್ಯಾನಿಷ್ ಹೀಗೆ 7 ಭಾಷೆಗಳಲ್ಲಿ ಕಾಂತಾರ ತೆರೆ ಕಾಣಲಿದೆ. ಭಾರತದ 7,000 ಹಾಗೂ 30 ರಾಷ್ಟ್ರಗಳ 6,500ಕ್ಕೂ ಹೆಚ್ಚು ಚಿತ್ರ ಪರದೆಗಳಲ್ಲಿ ಪ್ರದರ್ಶನಗೊಳ್ಳಲಿದೆ. ಇಂತಹ ಚಿತ್ರತಂಡದ ಜತೆ ಕೆಎಸ್ ಡಿಎಲ್ ಕೈಜೋಡಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಕೆಎಸ್ಡಿಎಲ್ ಕಳೆದ ನೂರಾಹತ್ತು ವರ್ಷಗಳಿಂದಲೂ ಕರ್ನಾಟಕದ ಪರಂಪರೆ ಮತ್ತು ಅಸ್ಮಿತೆಯನ್ನು ಪ್ರತಿನಿಧಿಸುತ್ತಿರುವ ಬ್ರ್ಯಾಂಡ್ ಆಗಿದೆ ಎಂದು ಅವರು ಹೇಳಿದ್ದಾರೆ.

ಎರಡು ವರ್ಷಗಳಿಂದ ಈಚೆಗೆ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ವಿಸ್ತರಣೆಗೆ ಒಲವು ಹೊಂದಿದೆ. ಜೊತೆಗೆ ರಫ್ತು ವಹಿವಾಟಿಗೆ ಒತ್ತು ನೀಡಿದ್ದು, ಪ್ಯಾಕೇಜಿಂಗ್, ಬ್ರ್ಯಾಂಡಿಂಗ್, ಪ್ರಚಾರ ಮತ್ತು ಅತ್ಯುತ್ಕೃಷ್ಟತೆಗೆ ಗಮನ ಹರಿಸಿದೆ. ಇದರ ಭಾಗವಾಗಿ ಖ್ಯಾತ ನಟಿ ತಮನ್ನಾ ಭಾಟಿಯಾ ಅವರನ್ನು ಎರಡು ವರ್ಷಗಳ ಅವಧಿಗೆ ಪ್ರಚಾರ ರಾಯಭಾರಿಯಾಗಿ ನೇಮಿಸಿಕೊಳ್ಳಲಾಗಿದೆ. ಇದರಿಂದ ಅಖಿಲ ಭಾರತ ಮಟ್ಟದಲ್ಲಿ ಹೊಸ ತಲೆಮಾರಿನ ಗ್ರಾಹಕರನ್ನು ತಲುಪಲು ಸಾಧ್ಯವಾಗಿದೆ. ಈಗ ಕಾಂತಾರ ತಂಡದ ಜತೆ ಸಂಸ್ಥೆಯು ಕೈಜೋಡಿಸುತ್ತಿದ್ದು, ತನ್ನ ಉತ್ಪನ್ನಗಳ ಮಾರಾಟವನ್ನು ಮತ್ತಷ್ಟು ವ್ಯಾಪಕಗೊಳಿಸುವ ಉದ್ದೇಶ ಈಡೇರಲಿದೆ ಎಂದು ಅವರು ನುಡಿದಿದ್ದಾರೆ.

ಕೆಎಸ್ಡಿಎಲ್ ಅಧ್ಯಕ್ಷ ಅಪ್ಪಾಜಿ ನಾಡಗೌಡ ಮಾತನಾಡಿ, ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಸಂಸ್ಥೆಯ ಮೈಸೂರು ಸ್ಯಾಂಡಲ್ ಸೋಪ್ ಒಂದು ವಿಶ್ವಾಸಾರ್ಹ ಬ್ರ್ಯಾಂಡ್ ಆಗಿದ್ದು, ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೊಂದಿದೆ. ಜನಪ್ರಿಯ ಮಾಧ್ಯಮವಾಗಿರುವ ಸಿನಿಮಾ ಮೂಲಕ ನಾವು ಜನರನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತಲುಪಲು ಸಾಧ್ಯವಾಗಲಿದೆ ಎಂದಿದ್ದಾರೆ.

Exit mobile version