ಮೈಸೂರು: ಮೈಸೂರು ಅರಮನೆಯ ಎದುರು ಸಂಭವಿಸಿದ ಭೀಕರ ಸ್ಫೋಟ ದುರಂತದಲ್ಲಿ ಮೃತಪಟ್ಟ ಮೂವರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 25ರಂದು ಅರಮನೆ ಮುಂಭಾಗದ ಜಯ ಮಾರ್ಯಾಂಡ ದ್ವಾರದ ಬಳಿ ನಡೆದ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟವು ರಾಜ್ಯವನ್ನೇ ಬೆಚ್ಚಿಬೀಳಿಸಿದ ಘಟನೆ ಆಗಿತ್ತು.
ಡಿ.25ರ ರಾತ್ರಿ, ಮೈಸೂರು ಅಂಬಾವಿಲಾಸ ಅರಮನೆಯ ಎದುರು ಸೈಕಲ್‌ನಲ್ಲಿ ಹೀಲಿಯಂ ಬಲೂನ್ ಮಾರಾಟ ಮಾಡುತ್ತಿದ್ದ ವೇಳೆ ಗ್ಯಾಸ್ ತುಂಬುವ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡಿದೆ. ಈ ದುರಂತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಮೃತಪಟ್ಟವರನ್ನು ನಂಜನಗೂಡು ತಾಲೂಕಿನ ಚಾಮಲಾಪುರ ಬೀದಿಯ ನಿವಾಸಿ ಮಂಜುಳಾ (28), ಬೆಂಗಳೂರು ಬ್ಯಾಡರಹಳ್ಳಿಯ ಲಕ್ಷ್ಮಿ (41) ಹಾಗೂ ಉತ್ತರ ಪ್ರದೇಶದ ತೋಫಿಯಾ ಗ್ರಾಮದ ಸಲೀಂ (40) ಎಂದು ಗುರುತಿಸಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದರು. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾದರೂ, ಮೂವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದರು.
ಈ ದುರ್ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದು, ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಘೋಷಿಸಿದರು. ಸರ್ಕಾರ ಈ ಕಷ್ಟದ ಸಮಯದಲ್ಲಿ ಸಂತ್ರಸ್ತ ಕುಟುಂಬಗಳ ಜೊತೆಗಿದೆ ಎಂದು ಭರವಸೆ ನೀಡಿದರು.
ಈ ಪ್ರಕರಣದ ತನಿಖೆಯನ್ನು ಭದ್ರತಾ ದೃಷ್ಟಿಯಿಂದ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಹಿಸಿಕೊಂಡಿದ್ದು, ಸ್ಫೋಟಕ್ಕೆ ಕಾರಣವಾದ ಅಂಶಗಳ ಬಗ್ಗೆ ತೀವ್ರ ಪರಿಶೀಲನೆ ನಡೆಸಲಾಗುತ್ತಿದೆ.
ಮೈಸೂರು ಸಿಲಿಂಡರ್ ಸ್ಫೋಟ ಪ್ರಕರಣ: ಉಗ್ರರ ಕೈವಾಡದ ಶಂಕೆ..! ತನಿಖೆಗೆ ದಾವಿಸಿದ NIA
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಹೃದಯಭಾಗವಾದ ಅರಮನೆಯ ಮುಂಭಾಗ ಕ್ರಿಸ್‌ಮಸ್ ರಜೆಯ ಸಂಭ್ರಮದ ನಡುವೆಯೇ ನಡೆದ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟವು ಭಾರಿ ಆತಂಕ ಮೂಡಿಸಿದೆ. ಮೊದಲಿಗೆ ಇದು ಸಿಲಿಂಡರ್ ಸೋರಿಕೆಯಿಂದಾದ ಆಕಸ್ಮಿಕ ಎಂದು ಹೇಳಲಾಗಿತ್ತಾದರೂ ಸಲೀಂನ ಹಿನ್ನೆಲೆಯು ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಉತ್ತರ ಪ್ರದೇಶ ಮೂಲದ ಸಲೀಂ ಎಂಬ ವ್ಯಕ್ತಿ ಕೇವಲ 15 ದಿನಗಳ ಹಿಂದಷ್ಟೇ ಮೈಸೂರಿಗೆ ಬಂದಿದ್ದ ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ. ಮೈಸೂರಿನ ಲಾಡ್ಜ್ ಒಂದರಲ್ಲಿ ತಂಗಿದ್ದ ಈತ, ಅಲ್ಲಿಂದಲೇ ಸಿಲಿಂಡರ್ ಹೊತ್ತು ಅರಮನೆ ಮುಂಭಾಗಕ್ಕೆ ಬಂದಿದ್ದ. ಅಚ್ಚರಿಯ ವಿಷಯವೆಂದರೆ, ಅರಮನೆಯ ಗೈಡ್‌ಗಳ ಪ್ರಕಾರ ಆ ಪ್ರದೇಶದಲ್ಲಿ ಹೀಲಿಯಂ ಬಲೂನ್ ಮಾರಾಟ ಮಾಡಲು ಮೊದಲಿನಿಂದಲೂ ಅನುಮತಿಯೇ ಇರಲಿಲ್ಲ. ಹೀಗಿದ್ದರೂ ಸಲೀಂ ನಿನ್ನೆ ಏಕಾಏಕಿ ಭಾರಿ ಗಾತ್ರದ ಹೀಲಿಯಂ ಸಿಲಿಂಡರ್‌ನೊಂದಿಗೆ ಅಲ್ಲಿಗೆ ಬಂದಿದ್ದು ಹೇಗೆ ಎಂಬುದನ್ನ ಪೊಲೀಸರು ಶಂಕಿಸಿದ್ದಾರೆ.
ಸಲೀಂ ಈ ಹಿಂದೆ ಮೈಸೂರಿನ ಯಾವುದೇ ಭಾಗದಲ್ಲಿ ಬಲೂನ್ ಮಾರಾಟ ಮಾಡಿದ ದಾಖಲೆಗಳಿಲ್ಲ. ಕ್ರಿಸ್‌ಮಸ್‌ನ ಇಂದಿನ ದಿನವೂ ಆತ ಅರಮನೆ ಬಳಿ ಕಾಣಿಸಿಕೊಂಡಿರಲಿಲ್ಲ. ಆದರೆ, ಸಾವಿರಾರು ಪ್ರವಾಸಿಗರು ಅರಮನೆಗೆ ಭೇಟಿ ನೀಡುವ ಕ್ರಿಸ್‌ಮಸ್ ರಜೆಯ ದಿನವೇ ಆತ ಅರಮನೆ ಮುಂಭಾಗಕ್ಕೆ ಬಂದಿದ್ದಾನೆ. ಆತ ಬಂದ ಕೆಲವೇ ನಿಮಿಷಗಳಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಇದು ಕೇವಲ ಆಕಸ್ಮಿಕವೋ ಅಥವಾ ಜನಸಂದಣಿ ಇರುವ ಜಾಗದಲ್ಲಿ ಭೀತಿ ಹುಟ್ಟಿಸಲು ನಡೆಸಿದ ಉದ್ದೇಶಪೂರ್ವಕ ಕೃತ್ಯವೋ ಎಂಬ ಬಗ್ಗೆ ಈಗ ಎನ್ಐಎ (NIA) ತಂಡ ಮಾಹಿತಿ ಕಲೆ ಹಾಕುತ್ತಿದೆ.
ಮೈಸೂರು ನಗರ ಪೊಲೀಸರು ಈಗಾಗಲೇ ಸಲೀಂನ ಹಿನ್ನೆಲೆ, ಆತ ತಂಗಿದ್ದ ಲಾಡ್ಜ್ ಮತ್ತು ಆತನಿಗೆ ಮೈಸೂರಿನಲ್ಲಿ ಯಾರಾದರೂ ಸಂಪರ್ಕದಲ್ಲಿದ್ದರೇ ಎಂಬ ಬಗ್ಗೆ ಇಂಚಿಂಚೂ ತನಿಖೆ ನಡೆಸುತ್ತಿದ್ದಾರೆ. ಅರಮನೆ ಮುಂಭಾಗದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಸಲೀಂ ಬಳಸುತ್ತಿದ್ದ ಮೊಬೈಲ್ ಕರೆಗಳ ಡೇಟಾ (CDR) ಕೂಡ ತನಿಖೆಯ ಪ್ರಮುಖ ಭಾಗವಾಗಿದೆ.
ಐತಿಹಾಸಿಕ ಮೈಸೂರು ಅರಮನೆಯ ಭದ್ರತೆಯ ದೃಷ್ಟಿಯಿಂದ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ಎನ್ಐಎ ಅಧಿಕಾರಿಗಳು ಮೈಸೂರಿಗೆ ಭೇಟಿ ನೀಡಿ ಸ್ಫೋಟದ ತೀವ್ರತೆ ಮತ್ತು ಸ್ಫೋಟಕಗಳ ಬಗ್ಗೆ ಹೆಚ್ಚಿನ ಪರೀಕ್ಷೆ ನಡೆಸಲಿದ್ದಾರೆ.
