ಮೈಸೂರು ಸಿಲಿಂಡರ್ ಸ್ಫೋಟ ಪ್ರಕರಣ: ಉಗ್ರರ ಕೈವಾಡದ ಶಂಕೆ..! ತನಿಖೆಗೆ ದಾವಿಸಿದ NIA

Untitled design 2025 12 26T110633.756

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಹೃದಯಭಾಗವಾದ ಅರಮನೆಯ ಮುಂಭಾಗ ಕ್ರಿಸ್‌ಮಸ್ ರಜೆಯ ಸಂಭ್ರಮದ ನಡುವೆಯೇ ನಡೆದ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟವು ಭಾರಿ ಆತಂಕ ಮೂಡಿಸಿದೆ. ಮೊದಲಿಗೆ ಇದು ಸಿಲಿಂಡರ್ ಸೋರಿಕೆಯಿಂದಾದ ಆಕಸ್ಮಿಕ ಎಂದು ಹೇಳಲಾಗಿತ್ತಾದರೂ ಸಲೀಂನ ಹಿನ್ನೆಲೆಯು ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಉತ್ತರ ಪ್ರದೇಶ ಮೂಲದ ಸಲೀಂ ಎಂಬ ವ್ಯಕ್ತಿ ಕೇವಲ 15 ದಿನಗಳ ಹಿಂದಷ್ಟೇ ಮೈಸೂರಿಗೆ ಬಂದಿದ್ದ ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ. ಮೈಸೂರಿನ ಲಾಡ್ಜ್‌ ಒಂದರಲ್ಲಿ ತಂಗಿದ್ದ ಈತ, ಅಲ್ಲಿಂದಲೇ ಸಿಲಿಂಡರ್ ಹೊತ್ತು ಅರಮನೆ ಮುಂಭಾಗಕ್ಕೆ ಬಂದಿದ್ದ. ಅಚ್ಚರಿಯ ವಿಷಯವೆಂದರೆ, ಅರಮನೆಯ ಗೈಡ್‌ಗಳ ಪ್ರಕಾರ ಆ ಪ್ರದೇಶದಲ್ಲಿ ಹೀಲಿಯಂ ಬಲೂನ್ ಮಾರಾಟ ಮಾಡಲು ಮೊದಲಿನಿಂದಲೂ ಅನುಮತಿಯೇ ಇರಲಿಲ್ಲ. ಹೀಗಿದ್ದರೂ ಸಲೀಂ ನಿನ್ನೆ ಏಕಾಏಕಿ ಭಾರಿ ಗಾತ್ರದ ಹೀಲಿಯಂ ಸಿಲಿಂಡರ್‌ನೊಂದಿಗೆ ಅಲ್ಲಿಗೆ ಬಂದಿದ್ದು ಹೇಗೆ ಎಂಬುದನ್ನ ಪೊಲೀಸರು ಶಂಕಿಸಿದ್ದಾರೆ.

ಸಲೀಂ ಈ ಹಿಂದೆ ಮೈಸೂರಿನ ಯಾವುದೇ ಭಾಗದಲ್ಲಿ ಬಲೂನ್ ಮಾರಾಟ ಮಾಡಿದ ದಾಖಲೆಗಳಿಲ್ಲ. ಕ್ರಿಸ್‌ಮಸ್‌ನ ಇಂದಿನ ದಿನವೂ ಆತ ಅರಮನೆ ಬಳಿ ಕಾಣಿಸಿಕೊಂಡಿರಲಿಲ್ಲ. ಆದರೆ, ಸಾವಿರಾರು ಪ್ರವಾಸಿಗರು ಅರಮನೆಗೆ ಭೇಟಿ ನೀಡುವ ಕ್ರಿಸ್‌ಮಸ್ ರಜೆಯ ದಿನವೇ ಆತ ಅರಮನೆ ಮುಂಭಾಗಕ್ಕೆ ಬಂದಿದ್ದಾನೆ. ಆತ ಬಂದ ಕೆಲವೇ ನಿಮಿಷಗಳಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಇದು ಕೇವಲ ಆಕಸ್ಮಿಕವೋ ಅಥವಾ ಜನಸಂದಣಿ ಇರುವ ಜಾಗದಲ್ಲಿ ಭೀತಿ ಹುಟ್ಟಿಸಲು ನಡೆಸಿದ ಉದ್ದೇಶಪೂರ್ವಕ ಕೃತ್ಯವೋ ಎಂಬ ಬಗ್ಗೆ ಈಗ ಎನ್ಐಎ (NIA) ತಂಡ ಮಾಹಿತಿ ಕಲೆ ಹಾಕುತ್ತಿದೆ.

ಮೈಸೂರು ನಗರ ಪೊಲೀಸರು ಈಗಾಗಲೇ ಸಲೀಂನ ಹಿನ್ನೆಲೆ, ಆತ ತಂಗಿದ್ದ ಲಾಡ್ಜ್ ಮತ್ತು ಆತನಿಗೆ ಮೈಸೂರಿನಲ್ಲಿ ಯಾರಾದರೂ ಸಂಪರ್ಕದಲ್ಲಿದ್ದರೇ ಎಂಬ ಬಗ್ಗೆ ಇಂಚಿಂಚೂ ತನಿಖೆ ನಡೆಸುತ್ತಿದ್ದಾರೆ. ಅರಮನೆ ಮುಂಭಾಗದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಸಲೀಂ ಬಳಸುತ್ತಿದ್ದ ಮೊಬೈಲ್ ಕರೆಗಳ ಡೇಟಾ (CDR) ಕೂಡ ತನಿಖೆಯ ಪ್ರಮುಖ ಭಾಗವಾಗಿದೆ.

ಐತಿಹಾಸಿಕ ಮೈಸೂರು ಅರಮನೆಯ ಭದ್ರತೆಯ ದೃಷ್ಟಿಯಿಂದ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ಎನ್ಐಎ ಅಧಿಕಾರಿಗಳು ಮೈಸೂರಿಗೆ ಭೇಟಿ ನೀಡಿ ಸ್ಫೋಟದ ತೀವ್ರತೆ ಮತ್ತು ಸ್ಫೋಟಕಗಳ ಬಗ್ಗೆ ಹೆಚ್ಚಿನ ಪರೀಕ್ಷೆ ನಡೆಸಲಿದ್ದಾರೆ.

Exit mobile version