ಮೈಸೂರು: ಜಗತ್ಪ್ರಸಿದ್ಧ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ಮೈಸೂರು ಅರಮನೆಯಲ್ಲಿ ರಾಜವೈಭವದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಶರನ್ನವರಾತ್ರಿ ಆಚರಣೆಗೆ ಮುನ್ನ ನಡೆಯುವ ಪ್ರಮುಖ ಸಾಂಪ್ರದಾಯಿಕ ವಿಧಿವಿಧಾನಗಳ ಭಾಗವಾಗಿ ಅರಮನೆಯಲ್ಲಿ ಇಂದು ರತ್ನಖಚಿತ ಸಿಂಹಾಸನದ ಜೋಡಣೆ ಕಾರ್ಯ ನೆರವೇರಿತು. ಈ ಮೂಲಕ ದಸರಾ ನವರಾತ್ರಿಯ ರಾಜ ವೈಭವಕ್ಕೆ ಅರಮನೆ ಸಜ್ಜಾಗುತ್ತಿದೆ.
ರಾಜವಂಶಸ್ಥರ ಖಾಸಗಿ ದರ್ಬಾರ್‌ಗೆ ಬಳಸಲಾಗುವ ರತ್ನಖಚಿತ ಸಿಂಹಾಸನವನ್ನು ವಿಶೇಷ ಧಾರ್ಮಿಕ ವಿಧಿವಿಧಾನಗಳ ಬಳಿಕ ಸಿದ್ಧಗೊಳಿಸಲಾಯಿತು. ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ನೇತೃತ್ವದಲ್ಲಿ ಸಿಂಹಾಸನ ಜೋಡಣೆ ಕಾರ್ಯ ನಡೆಯಿತು. ಅರಮನೆಯ ಭದ್ರತಾ ಕೊಠಡಿಯಲ್ಲಿ ಸುರಕ್ಷಿತವಾಗಿ ಇರಿಸಲಾಗಿದ್ದ ಸಿಂಹಾಸನದ ಬಿಡಿಭಾಗಗಳನ್ನು ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳ ಬಳಿಕ ದರ್ಬಾರ್ ಹಾಲ್‌ಗೆ ತರಲಾಯಿತು.
13 ಬಿಡಿಭಾಗಗಳಿಂದ ಸಿಂಹಾಸನ ಮರುಜೋಡಣೆ
ರತ್ನಖಚಿತ ಸಿಂಹಾಸನವನ್ನು ಒಂದೇ ಭಾಗವಾಗಿ ಇರಿಸಲಾಗುವುದಿಲ್ಲ. ಅದರ ಒಟ್ಟು 13 ಬಿಡಿಭಾಗಗಳನ್ನು ಪ್ರತ್ಯೇಕವಾಗಿ ಸಂರಕ್ಷಿಸಲಾಗುತ್ತದೆ. ದಸರಾ ಸಂದರ್ಭದಲ್ಲಿ ವಿಶೇಷ ಭದ್ರತೆಯೊಂದಿಗೆ ಈ ಬಿಡಿಭಾಗಗಳನ್ನು ಹೊರತೆಗೆದು, ನಿಗದಿತ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ದರ್ಬಾರ್ ಹಾಲ್‌ನಲ್ಲಿ ಮರುಜೋಡಿಸಲಾಗುತ್ತದೆ.
ಸಿಂಹಾಸನ ಜೋಡಣೆಗೂ ಮುನ್ನ ಗಣಪತಿ ಹೋಮ, ನವಗ್ರಹ ಹೋಮ, ಚಾಮುಂಡಿ ಪೂಜೆ ಹಾಗೂ ಶಾಂತಿ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಪೂಜೆಗಳ ಬಳಿಕ ಸಿಂಹಾಸನದ 13 ಬಿಡಿಭಾಗಗಳನ್ನು ಜೋಡಿಸಿ ರಾಜವಂಶಸ್ಥರ ಖಾಸಗಿ ದರ್ಬಾರ್‌ಗೆ ಸಿದ್ಧಗೊಳಿಸಲಾಯಿತು.
ಸಿಂಹಾಸನ ಜೋಡಣೆ ಹಿನ್ನೆಲೆ ಇಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಪ್ರವಾಸಿಗರಿಗೆ ಮೈಸೂರು ಅರಮನೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಧಾರ್ಮಿಕ ಹಾಗೂ ಸಾಂಪ್ರದಾಯಿಕ ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ಅರಮನೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ಅ.11ರಿಂದ ಯದುವೀರ್ ಒಡೆಯರ್ ಖಾಸಗಿ ದರ್ಬಾರ್
ಶರನ್ನವರಾತ್ರಿ ಆರಂಭವಾಗುತ್ತಿದ್ದಂತೆ ಮೈಸೂರು ಅರಮನೆಯಲ್ಲಿ ರಾಜವಂಶಸ್ಥರ ಖಾಸಗಿ ದರ್ಬಾರ್ ಕೂಡ ನಡೆಯಲಿದೆ. ಅಕ್ಟೋಬರ್ 11ರಿಂದ ಯದುವೀರ್ ಒಡೆಯರ್ ಅವರು ರತ್ನಖಚಿತ ಸಿಂಹಾಸನದಲ್ಲಿ ಕುಳಿತು ಖಾಸಗಿ ದರ್ಬಾರ್ ನಡೆಸಲಿದ್ದಾರೆ..
ಮೈಸೂರಿಗೆ ಆಗಮಿಸಿದ ಮಾಜಿ ಕ್ಯಾಪ್ಟನ್ ಅಭಿಮನ್ಯು
ಇದೇ ವೇಳೆ ಮೈಸೂರು ದಸರಾ ಮಹೋತ್ಸವದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿರುವ ಗಜಪಡೆಯ ಮಾಜಿ ಕ್ಯಾಪ್ಟನ್ ಅಭಿಮನ್ಯು ಕೂಡ ಮೈಸೂರಿಗೆ ಆಗಮಿಸಿದ್ದಾರೆ. ಅರಮನೆಗೆ ಆಗಮಿಸಿದ ಅಭಿಮನ್ಯುವನ್ನು ಸಂಪ್ರದಾಯಬದ್ಧವಾಗಿ ಬರಮಾಡಿಕೊಳ್ಳಲಾಯಿತು.
ಜಯಮಾರ್ತಾಂಡ ದ್ವಾರದ ಬಳಿ ಅಭಿಮನ್ಯುವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅರಮನೆ ಆಡಳಿತ ಮಂಡಳಿಯ ವತಿಯಿಂದ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಅಭಿಮನ್ಯುವಿಗೆ ಪೇಟ ಧಾರಣೆ ಮಾಡಲಾಯಿತು. ಅಭಿಮನ್ಯುವಿನೊಂದಿಗೆ ಆಗಮಿಸಿದ ಇತರ ಆನೆಗಳಿಗೂ ಅರಮನೆ ಆವರಣದಲ್ಲಿ ಸಾಂಪ್ರದಾಯಿಕವಾಗಿ ಸ್ವಾಗತ ಕೋರಲಾಯಿತು.
ಅಭಿಮನ್ಯುವಿಗೆ ಅಭಿಮಾನಿಗಳು ವಿಶೇಷ ಪೇಟವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಪೇಟವು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಧರಿಸುತ್ತಿದ್ದ ಮಾದರಿಯಲ್ಲಿದೆ ಎನ್ನಲಾಗಿದೆ. ಸುಮಾರು 6ರಿಂದ 8 ಕೆ.ಜಿ. ತೂಕ ಹೊಂದಿರುವ ಈ ವಿಶೇಷ ಪೇಟವನ್ನು ಸಾಂಪ್ರದಾಯಿಕ ಪೂಜೆಯ ಬಳಿಕ ಅಭಿಮನ್ಯುವಿಗೆ ಧರಿಸಲಾಯಿತು.
