ವಿಶ್ವವಿಖ್ಯಾತ ‘ಮೈಸೂರು ದಸರಾ’ ಮಹೋತ್ಸವ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್‌‌

Untitled design 2025 09 22t102625.199

ಮೈಸೂರು:  ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಇಂದು ವಿಧ್ಯುಕ್ತ ಚಾಲನೆ ಸಿಕ್ಕಿದೆ. ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 10:10 ರಿಂದ 10:40 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಸಾಹಿತಿ ಬಾನು ಮುಷ್ತಾಕ್ ಮೈಸೂರು ದಸರಾ ಉತ್ಸವಕ್ಕೆ ಚಾಲನೆ ನೀಡಿದರು. ದಸರಾ ಉದ್ಘಾಟನೆ ನೆರವೇರಿಸಿದ ಲೇಖಕಿ ಬಾನು ಮುಷ್ತಾಕ್ ದೇವಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಘಾಟನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು. ಬೆಳ್ಳಿ ರಥದಲ್ಲಿ ವಿರಾಜಮಾನಳಾಗಿರುವ ತಾಯಿ ಚಾಮುಂಡೇಶ್ವರಿ ಪಂಚಲೋಹದಲ್ಲಿ ನೀಲಿ ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಿದ್ದಳು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಹೆಚ್.ಸಿ. ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮತ್ತಿತರರು ಹಾಜರಿದ್ದರು.

ದಸರಾ ಉದ್ಘಾಟನೆಗೂ ಮುನ್ನ ಬಾನು ಮುಷ್ತಾಕ್ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಉದ್ಘಾಟನೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡದೇವಿ ಚಾಮುಂಡಿ ತಾಯಿ ದರ್ಶನ ಪಡೆದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ದಸರಾ ಉದ್ಘಾಟಕಿ ಲೇಖಕಿ ಬಾನು ಮುಷ್ತಾಕ್ ಹಾಗೂ ಅಧಿಕಾರಿಗಳು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದು, ಈ ವೇಳೆ ಸಿಎಂ ಸಿದ್ದರಾಮಯ್ಯ ಈಡುಗಾಯಿ ಒಡೆದು ದೇವಸ್ಥಾನ ಪ್ರವೇಶಿಸಿದರು. ಬಳಿಕ ನಾಡದೇವಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಸಚಿವರು ಹಾಗೂ ದಸರಾ ಉದ್ಘಾಟಕ ಲೇಖಕಿ ಬಾನು ಮುಷ್ತಾಕ್ ಉಪಸ್ಥಿತರಿದ್ದರು.

ಈ ಬಾರಿಯ ದಸರಾಗೆ ಅರಮನೆ ನಗರಿ ಮೈಸೂರು ನವವಧುವಿನಂತೆ ಸಿಂಗಾರಗೊಂಡು ನಿಂತಿದೆ. ತಳಿರು ತೋರಣಗಳಿಂದ ಸಿಂಗಾರಗೊಂಡ ಮೈಸೂರು ಅರಮನೆ ಹೀಗೆ ಇಡೀ ನಗರವೇ ಹೊಸರೂಪ ಪಡೆದು ಕಂಗೊಳಿಸುತ್ತಿದೆ. ತಿಂಗಳ ಹಿಂದೆಯೇ ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದ ಗಜಪಡೆ ನಿತ್ಯದ ತಾಲೀಮ ಮುಗಿಸಿ, ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿ ಹೊತ್ತು ಸಾಗಲು ಸರ್ವಸನ್ನದ್ದಗೊಂಡಿದೆ.

Exit mobile version