ಮ್ಯಾನ್ಮಾರ್‌, ಬ್ಯಾಂಕಾಕ್‌ನಲ್ಲಿ​ ಭೂಕಂಪ: ಕನ್ನಡಿಗರ ಬಗ್ಗೆ ಮಾಹಿತಿ ಪಡೆದ ಸಿಎಂ

122 (4)

ಬೆಂಗಳೂರು, ಮಾರ್ಚ್ 28: ಮ್ಯಾನ್ಮಾರ್‌ ಮತ್ತು ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ಶುಕ್ರವಾರ ತೀವ್ರ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.7 ತೀವ್ರತೆಯ ಭೂಕಂಪ ದಾಖಲಾಗಿದ್ದು, ಭೂಕಂಪನದ ಪ್ರಭಾವದಿಂದ ಮ್ಯಾನ್ಮಾರ್‌ನ ಮಂಡಲೇಯಲ್ಲಿನ ಐಕಾನಿಕ್ ಅವಾ ಸೇತುವೆ ಸಂಪೂರ್ಣವಾಗಿ ಕುಸಿದಿದೆ. ಮಧ್ಯಾಹ್ನ 12.50ರ ಸುಮಾರಿಗೆ ಭೂಕಂಪನ ಸಂಭವಿಸಿದ್ದು, ಬೃಹತ್ ಹಾನಿಯ ಸಾಧ್ಯತೆಯನ್ನು ಮ್ಯಾನ್ಮಾರ್‌ ಸರ್ಕಾರ ತಿಳಿಸಿದೆ. ಅಲ್ಲದೆ ಮುಂದಿನ 24 ಗಂಟೆಗಳವರೆಗೆ ಕಾಲ ಭೂಕಂಪನದ ಎಚ್ಚರಿಕೆಯನ್ನು ಹೊರಡಿಸಿದೆ.

ಭೂಕಂಪದ ಶಕ್ತಿ ಮುಖ್ಯವಾಗಿ ಮ್ಯಾನ್ಮಾರ್‌ ಮತ್ತು ಥಾಯ್ಲೆಂಡ್‌ನಲ್ಲಿ ಅನುಭವಿಸಲಾಗಿದೆ. ಇದರಿಂದಾಗಿ ಬ್ಯಾಂಕಾಕ್‌ನ ವಿಮಾನ ಮತ್ತು ರೈಲು ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಮ್ಯಾನ್ಮಾರ್‌ನಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.

ಈ ಭೂಕಂಪನದ ಸಂದರ್ಭದಲ್ಲಿ ಕರ್ನಾಟಕದ ಹಲವರು ಬ್ಯಾಂಕಾಕ್‌ನಲ್ಲಿ ಪ್ರವಾಸ ಮತ್ತು ಉದ್ಯೋಗ ನಿಮಿತ್ತ ಇದ್ದರು. ಈ ಹಿನ್ನಲೆಯಲ್ಲಿ ಅವರುಗಳ ಸುರಕ್ಷತೆಯ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವರದಿ ಪಡೆದುಕೊಂಡಿದ್ದಾರೆ. ಸರ್ಕಾರಿ ಅಧಿಕಾರಿಗಳು ಬ್ಯಾಂಕಾಕ್‌ನಲ್ಲಿರುವ ಎಲ್ಲಾ ಕನ್ನಡಿಗರ ವಿವರ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಹಾವೇರಿ, ಹಾಸನದವರು ಸುರಕ್ಷಿತ

ಭೂಕಂಪನ ಸಮಯದಲ್ಲಿ ಹಾವೇರಿ ಜಿಲ್ಲೆಯ 22 ಜನರ ಗುಂಪು ಬ್ಯಾಂಕಾಕ್‌ನಲ್ಲಿ ಪ್ರವಾಸದಲ್ಲಿದ್ದರು. ಇವರು ಐದು ದಿನಗಳ ಹಿಂದೆ ಬೆಂಗಳೂರಿನಿಂದ ತೆರಳಿದ್ದರು. ಶುಕ್ರವಾರ ಅವರು ಸಫಾರಿ ವರ್ಡ್‌ ಪ್ರವಾಸದಲ್ಲಿದ್ದಾಗ ಭೂಕಂಪನ ಆಗಿದೆ ಎನ್ನಲಾಗಿದೆ. ಕೂಡಲೇ ಅವರು ಸುರಕ್ಷಿತ ಸ್ಥಳವಾದ ಸುವರ್ಣ ಭೂಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ. ತಮ್ಮ ಪೋಷಕರಿಗೆ ವಿಡಿಯೋ ಸಂದೇಶ ಕಳುಹಿಸಿ “ನಾವು ಎಲ್ಲರೂ ಸುರಕ್ಷಿತರಾಗಿದ್ದೇವೆ, ಯಾವುದೇ ತೊಂದರೆ ಇಲ್ಲ” ಎಂದು ಭರವಸೆ ನೀಡಿದ್ದಾರೆ. ಇನ್ನು ವಿಮಾನಗಳ ವೇಳಾಪಟ್ಟಿಯಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾದರೂ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ನಿರ್ಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನೊಂದು ಕಡೆ, ಹಾಸನ ಜಿಲ್ಲೆಯ ರಾಜಶೇಖರ್ ಎಂಬವರು ತಮ್ಮ ಕುಟುಂಬದೊಂದಿಗೆ ಬ್ಯಾಂಕಾಕ್ ಪ್ರವಾಸದಲ್ಲಿದ್ದರು. ಭೂಕಂಪನ ಸಮಯದಲ್ಲಿ ಅವರು ಹಳೇ ವಿಮಾನ ನಿಲ್ದಾಣದ ಬಳಿ ಇದ್ದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಅವರೊಂದಿಗೆ ಇದ್ದ ಇತರೆ ನಾಲ್ವರು ಕನ್ನಡಿಗರೂ ಸಹ ಸುರಕ್ಷಿತವಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಟೆಲ್‌ಗಳಲ್ಲಿ ವಾಸಿಸುತ್ತಿದ್ದವರು ಸುರಕ್ಷಿತ

ಬ್ಯಾಂಕಾಕ್‌ನ ಅವನಿ ಮತ್ತು ಅನಂತಾರಾ ಹೊಟೆಲ್‌ಗಳಲ್ಲಿ ಹಾವೇರಿ, ಹಾಸನ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ 42 ಮಂದಿ ಕನ್ನಡಿಗರು ವಾಸವಾಗಿದ್ದರು. ಭೂಕಂಪನದ ಪರಿಣಾಮ ಅವನಿ ಹೊಟೆಲ್‌ನಲ್ಲಿ ಸ್ವಲ್ಪ ಬಿರುಕು ಕಾಣಿಸಿಕೊಂಡಿತ್ತು. ಹೋಟೆಲ್‌ ಸಿಬ್ಬಂದಿ ಕೂಡಲೇ ಎಲ್ಲಾ ಕನ್ನಡಿಗರನ್ನು ಬೇರೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಅಲ್ಲದೆ, ಈ ಹೋಟೆಲ್‌ಗಳಲ್ಲಿ ಇತರ ರಾಜ್ಯಗಳಿಂದ ಸುಮಾರು 600ಕ್ಕೂ ಹೆಚ್ಚು ಮಂದಿ ಇದ್ದರು. ಎಲ್ಲಾ ಜನರು ಸುರಕ್ಷಿತವಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಹೇಳಲಾಗಿದೆ.

ಸರ್ಕಾರದ ಮುನ್ನೆಚ್ಚರಿಕೆ ಕ್ರಮ

ಭೂಕಂಪನ ಬಗ್ಗೆ ಮಾಹಿತಿ ಪಡೆದ ತಕ್ಷಣ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಬ್ಯಾಂಕಾಕ್ ಮತ್ತು ಮ್ಯಾನ್ಮಾರ್‌ನಲ್ಲಿ ಇರುವ ಕನ್ನಡಿಗರ ಸುರಕ್ಷತೆ ಖಚಿತಪಡಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಪ್ರವಾಸಿಗರ ಪೋಷಕರಿಗೆ ಅಗತ್ಯ ಮಾಹಿತಿ ನೀಡಲು ಮತ್ತು ಕನ್ಸಲ್ ಜನರಲ್‌ ಮೂಲಕ ಸಂಪರ್ಕಿಸಲು ಕ್ರಮ ತೆಗೆದುಕೊಳ್ಳಲಾಗಿದೆ.

Exit mobile version