ಮುಡಾ ಸೈಟ್ ಹಗರಣ: ಇಂದು ಲೋಕಾಯುಕ್ತ ಬಿ-ರಿಪೋರ್ಟ್ ಭವಿಷ್ಯ ನಿರ್ಧಾರ..!

Untitled design (6)

ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಸೈಟ್ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಇಂದು ಅತ್ಯಂತ ನಿರ್ಣಾಯಕ ದಿನವಾಗಿದೆ. ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ‘ಬಿ-ರಿಪೋರ್ಟ್’ (ಕ್ಲೀನ್‌ಚಿಟ್) ಕುರಿತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಂದು (ಡಿ.18) ತನ್ನ ಮಹತ್ವದ ತೀರ್ಪನ್ನು ಪ್ರಕಟಿಸಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮುಡಾದಿಂದ 14 ಸೈಟ್‌ಗಳನ್ನು ಮಂಜೂರು ಮಾಡಿದ ವಿಚಾರದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣದ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಯಾವುದೇ ಅಕ್ರಮ ನಡೆದಿಲ್ಲ ಎಂದು ತಿಳಿಸಿ ನ್ಯಾಯಾಲಯಕ್ಕೆ ‘ಬಿ-ರಿಪೋರ್ಟ್’ ಸಲ್ಲಿಸಿದ್ದರು. ಅಂದರೆ, ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಕರಣವನ್ನು ಕೈಬಿಡುವಂತೆ ವರದಿ ನೀಡಿದ್ದರು.

ಲೋಕಾಯುಕ್ತ ನೀಡಿದ್ದ ಈ ಕ್ಲೀನ್‌ಚಿಟ್ ಅನ್ನು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ತೀವ್ರವಾಗಿ ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಲೋಕಾಯುಕ್ತ ತನಿಖೆಯು ಪಾರದರ್ಶಕವಾಗಿ ನಡೆದಿಲ್ಲ ಮತ್ತು ಸಿಎಂ ಸಿದ್ದರಾಮಯ್ಯ ಪ್ರಭಾವಕ್ಕೆ ಒಳಗಾಗಿದೆ ಸ್ನೇಹಮಯಿ ಕೃಷ್ಣ ವಾದಿಸಿದ್ದರು. ನ್ಯಾಯಾಲಯದಲ್ಲಿ ಖುದ್ದಾಗಿ ವಾದ ಮಂಡಿಸಿದ್ದ ಸ್ನೇಹಮಯಿ ಕೃಷ್ಣ, ಬಿ-ರಿಪೋರ್ಟ್ ಅನ್ನು ತಿರಸ್ಕರಿಸಿ ಮರು ತನಿಖೆಗೆ ಅಥವಾ ಸಿಬಿಐ ತನಿಖೆಗೆ ಆದೇಶಿಸುವಂತೆ ಮನವಿ ಮಾಡಿದ್ದರು. ಈ ವಾದಗಳನ್ನು ಆಲಿಸಿದ್ದ ನ್ಯಾಯಾಲಯವು ಇಂದು ತನ್ನ ಆದೇಶವನ್ನು ಕಾಯ್ದಿರಿಸಿದೆ.

ನ್ಯಾಯಾಲಯದ ಮುಂದೆ ಇಂದು ಎರಡು ಪ್ರಮುಖ ಆಯ್ಕೆಗಳಿವೆ:

ಬಿ-ರಿಪೋರ್ಟ್ ಅಂಗೀಕಾರ: ಒಂದು ವೇಳೆ ನ್ಯಾಯಾಲಯವು ಲೋಕಾಯುಕ್ತ ವರದಿಯನ್ನು ಒಪ್ಪಿಕೊಂಡರೆ, ಸಿದ್ದರಾಮಯ್ಯ ಮತ್ತು ಅವರ ಕುಟುಂಬಕ್ಕೆ ಈ ಪ್ರಕರಣದಿಂದ ದೊಡ್ಡ ಮಟ್ಟದ ನಿರಾಳತೆ ಸಿಗಲಿದೆ. ಇದರಿಂದ ಸಿಎಂ ಸಿದ್ದರಾಮಯ್ಯರಿಗೆ ಗೆಲುವು ಸಿಕ್ಕಂತಾಗುತ್ತದೆ.

ಬಿ-ರಿಪೋರ್ಟ್ ತಿರಸ್ಕಾರ: ನ್ಯಾಯಾಲಯವು ವರದಿಯನ್ನು ಒಪ್ಪದಿದ್ದರೆ, ಪ್ರಕರಣದ ಮರು ತನಿಖೆಗೆ ಆದೇಶಿಸಬಹುದು ಅಥವಾ ವಿಶೇಷ ತನಿಖಾ ದಳಕ್ಕೆ ಪ್ರಕರಣವನ್ನು ವರ್ಗಾಯಿಸಬಹುದು. ಇದು ಸಿದ್ದರಾಮಯ್ಯ ಅವರಿಗೆ ದೊಡ್ಡ ಕಾನೂನು ಸಂಕಷ್ಟವನ್ನು ತಂದೊಡ್ಡಲಿದೆ.

ಇದಲ್ಲದೆ, ಜಾರಿ ನಿರ್ದೇಶನಾಲಯ (ED) ಕೂಡ ಈ ಪ್ರಕರಣದಲ್ಲಿ ತಕರಾರು ಅರ್ಜಿ ಸಲ್ಲಿಸಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ. ಇಂದಿನ ಅಂತಿಮ ವರದಿ ಸಲ್ಲಿಕೆಯಾದ ಬಳಿಕ ಇಡೀ ರಾಜ್ಯದ ರಾಜಕೀಯ ಭವಿಷ್ಯದ ಮೇಲೆ ಈ ತೀರ್ಪು ಪ್ರಭಾವ ಬೀರಲಿದೆ.

Exit mobile version