ನೇಣಿಗೆ ಶರಣಾದ ಎಂಜಿನಿಯರಿಂಗ್ ಕಾಲೇಜು ಉಪನ್ಯಾಸಕ

Untitled design 2026 02 25T225733.264

ಕೋಲಾರ, ಫೆಬ್ರುವರಿ 26: ಕೋಲಾರ ತಾಲ್ಲೂಕಿನ ಖಾದ್ರಿಪುರ ಬಡಾವಣೆಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಸಿಬಿಐಟಿ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 

ಮೃತರನ್ನು ಕೋಲಾರದ ಸಿಬಿಐಟಿ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಮೋನಿಶ್ (36) ಎಂದು ಗುರುತಿಸಲಾಗಿದೆ. ಪತ್ನಿ ವೇದವತಿ ಅವರು ಕೆಲಸಕ್ಕೆ ತೆರಳಿದ್ದ ಸಮಯದಲ್ಲಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಮೋನಿಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆಯು ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಖಾದ್ರಿಪುರ ಬಡಾವಣೆಯಲ್ಲಿ ನಡೆದಿದೆ.

ಮಾಹಿತಿ ಪ್ರಕಾರ, ಘಟನೆ ನಡೆದ ಸಮಯದಲ್ಲಿ ಅವರ ಪತ್ನಿ ವೇದವತಿ ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಒಬ್ಬರೇ ಇದ್ದ ಮೋನೀಶ್ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಸಂಜೆ ವೇಳೆ ಪತ್ನಿ ಮನೆಗೆ ಮರಳಿದಾಗ ಈ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಸಂಬಂಧಿಕರು ಹಾಗೂ ನೆರೆಹೊರೆಯವರಿಗೆ ಮಾಹಿತಿ ನೀಡಲಾಗಿದ್ದು, ನಂತರ ಪೊಲೀಸರಿಗೆ ದೂರು ನೀಡಲಾಗಿದೆ.

ಘಟನೆ ತಿಳಿದ ಕೂಡಲೇ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಯಾವುದೇ ಆತ್ಮಹತ್ಯೆ ಚೀಟಿ ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.

ಮೈಸೂರಿನಲ್ಲಿ ದುರಂತ: ಟ್ರಿಪ್‌ಗೆ ಗಂಡ ಬೇಡ ಎಂದಿದ್ದಕ್ಕೆ ಪತ್ನಿ ಆತ್ಮಹತ್ಯೆ

ಮೈಸೂರಿನ ಸರಸ್ವತಿಪುರಂನಲ್ಲಿ ಗೃಹಿಣಿ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ನಡೆದಿದೆ. ಪ್ರವಾಸಕ್ಕೆ ಗಂಡ ಹೋಗಲು ಒಪ್ಪದಿದ್ದಕ್ಕೆ ನಡೆದ ಜಗಳದ ನಂತರ ಈ ದುರಂತ ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮೃತೆಯ ಸಹೋದರ ಗುರುಮೂರ್ತಿ ಅವರು ಗಂಡನ ಮನೆಯವರ ಮೇಲೇ ಕೊಲೆ ಆರೋಪ ಹೊರಿಸಿದ್ದು, ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಘಟನೆಯ ವಿವರ : ಮೃತ ಸಂಧ್ಯಾ (46) ಚಾಮರಾಜನಗರದ ಮಗಳಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದರು. ಸಂಧ್ಯಾ ಮತ್ತು ಆಕೆಯ ಪತಿ ದಂಪತಿಗೆ ಇಬ್ಬರು ಮಕ್ಕಳಿದ್ದು, ಪುತ್ರಿ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ನಿನ್ನೆ ರಾತ್ರಿ ಪ್ರವಾಸದ ವಿಚಾರದಲ್ಲಿ ದಂಪತಿಗಳ ನಡುವೆ ಜಗಳವಾಗಿದೆ. ಗಂಡ “ನೀನು ಟ್ರಿಪ್‌ ಹೋಗ ಬೇಡ” ಎಂದು ಹೇಳಿದ್ದಕ್ಕೆ ಸಂಧ್ಯಾ ಆಕ್ರೋಶಗೊಂಡಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಜಗಳದ ನಂತರ ಗಂಡ ಮನೆಯಿಂದ ಹೊರಹೋದ ಮೇಲೆ ಸಂಧ್ಯಾ ಮನೆಯಲ್ಲಿ ಒಂಟಿಯಾಗಿದ್ದಳು. ಬಳಿಕ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ ಮೃತೆಯ ಸಹೋದರ ಗುರುಮೂರ್ತಿ ಅವರು ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿದ್ದಾರೆ. “ಗಂಡನ ಮನೆಯವರು ಇದರ ಹಿಂದಿರಬಹುದು” ಎಂದು ಅವರು ಸಂದೇಹ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಕ್ರಮ : ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಘಟನೆಯ ಸಿಸಿಟಿವಿ ದೃಶ್ಯಗಳು, ಪೋಸ್ಟ್‌ಮಾರ್ಟಂ ವರದಿ ಮತ್ತು ಸಾಕ್ಷಿಗಳ ಹೇಳಿಕೆಗಳ ಆಧಾರದಲ್ಲಿ ತನಿಖೆ ನಡೆಯುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆ ಎಂದು ಕಂಡುಬಂದರೂ, ಕುಟುಂಬದ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮುಂದುವರೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯಿಂದ ಸರಸ್ವತಿಪುರಂ ಪ್ರದೇಶದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದ್ದು, ಮಹಿಳೆಯರ ಮಾನಸಿಕ ಆರೋಗ್ಯ ಮತ್ತು ಕುಟುಂಬದಲ್ಲಿ ಜಗಳಗಳ ನಿರ್ವಹಣೆಯ ಬಗ್ಗೆ ಚರ್ಚೆ ಆರಂಭವಾಗಿದೆ.

 
Exit mobile version