ವಿಧಾನಪರಿಷತ್‌ ಚುನಾವಣೆ: ಜಿ.ಟಿ ದೇವೇಗೌಡ ಸೇರಿ 40 ಶಾಸಕರಿಂದ ಬಿರುಸಿನ ಮತದಾನ, 7ನೇ ಸ್ಥಾನಕ್ಕೆ ಭಾರೀ ಫೈಟ್!

Untitled design 2026 06 18T103624.981

ಬೆಂಗಳೂರು, (ಜೂನ್ 18): ಕರ್ನಾಟಕ ವಿಧಾನಪರಿಷತ್‌ನ (MLC) 7 ಸ್ಥಾನಗಳ ಭರ್ತಿಗಾಗಿ ನಡೆಯುತ್ತಿರುವ ಬಹುನಿರೀಕ್ಷಿತ ಮತದಾನ ಪ್ರಕ್ರಿಯೆಯು ಇಂದು ಬೆಳಿಗ್ಗೆ 9 ಗಂಟೆಯಿಂದ ಅತ್ಯಂತ ಬಿರುಸಿನಿಂದ ಆರಂಭಗೊಂಡಿದೆ. ವಿಧಾನಸೌಧದ ಆವರಣದಲ್ಲಿ ಬೆಳಿಗ್ಗೆಯಿಂದಲೇ ಶಾಸಕರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿರುವ ದೃಶ್ಯ ಕಂಡುಬಂದಿದೆ. ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಹಾಗೂ ಬಿಜೆಪಿಯ ಎಸ್.ಆರ್. ವಿಶ್ವನಾಥ್ ಸೇರಿದಂತೆ 40 ಶಾಸಕರು ಮತದಾನ ಮಾಡಿದರು.

ಸದ್ಯ ವಿಧಾನಸಭೆಯಲ್ಲಿರುವ ಸಂಖ್ಯಾಬಲದ ಆಧಾರದ ಮೇಲೆ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವು 4 ಸ್ಥಾನಗಳನ್ನು, ಮತ್ತು ಪ್ರತಿಪಕ್ಷವಾದ ಬಿಜೆಪಿ 2 ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಈಗ ಎಲ್ಲರ ಕಣ್ಣುಗಳು ನೆಟ್ಟಿರುವುದು ಕೊನೆಯ 7ನೇ ಸ್ಥಾನದತ್ತ. ಈ ಒಂದೇ ಒಂದು ಸ್ಥಾನಕ್ಕಾಗಿ ಆಡಳಿತ ಪಕ್ಷದ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ಮೈತ್ರಿಕೂಟದ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಕಣದಲ್ಲಿ ಒಟ್ಟು 8 ಅಭ್ಯರ್ಥಿಗಳಿದ್ದು, ಪ್ರತಿಯೊಬ್ಬರೂ ತಮ್ಮ ಗೆಲುವಿಗಾಗಿ ಕಸರತ್ತು ನಡೆಸುತ್ತಿದ್ದಾರೆ.

ಈ ಚುನಾವಣೆಯ ಪ್ರಮುಖ ವಿಷಯ ಎಂದರೆ ‘ಕ್ರಾಸ್ ವೋಟಿಂಗ್’ (ಪಕ್ಷಾಂತರ ಮತದಾನ) ತಡೆಯಲು ಪಕ್ಷಗಳು ಅನುಸರಿಸುತ್ತಿರುವ ತಂತ್ರಗಳು. ಪಕ್ಷದ ಶಿಸ್ತು ಕಾಯ್ದುಕೊಳ್ಳಲು ಮತ್ತು ಅಡ್ಡಮತದಾನವನ್ನು ತಡೆಯುವ ದೃಷ್ಟಿಯಿಂದ ಎಲ್ಲಾ ಪ್ರಮುಖ ಪಕ್ಷಗಳು ರೆಸಾರ್ಟ್ ರಾಜಕಾರಣ ಮತ್ತು ಅಣುಕು ಮತದಾನದ (Mock Poll) ಮೂಲಕ ತಮ್ಮ ಶಾಸಕರನ್ನು ಸಜ್ಜುಗೊಳಿಸಿವೆ. 

ಅಭ್ಯರ್ಥಿಗಳ ಪಟ್ಟಿ ಹೀಗಿದೆ
ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವತಿಯಿಂದ ಬಿ.ಕೆ. ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರು, ಪಿ.ವಿ. ಮೋಹನ್ ಮತ್ತು ಶಿವಣ್ಣ ಮಳವಳ್ಳಿ ಅವರು ಸ್ಪರ್ಧಿಸುತ್ತಿದ್ದಾರೆ. 7ನೇ ಸ್ಥಾನಕ್ಕಾಗಿ ಕಾಂಗ್ರೆಸ್ ತನ್ನ ಬಲಿಷ್ಠ ಅಭ್ಯರ್ಥಿಯಾಗಿ ವಿನಯ್ ಕಾರ್ತಿಕ್ ಅವರನ್ನು ಕಣಕ್ಕಿಳಿಸಿದ್ದಾರೆ.

ಪ್ರತಿಪಕ್ಷವಾದ ಬಿಜೆಪಿಯಿಂದ ಲಿಂಗರಾಜ್ ಪಾಟೀಲ್ ಮತ್ತು ರಘು ಕೌಟಿಲ್ಯ ಅವರು ಕಣದಲ್ಲಿದ್ದಾರೆ. ಇನ್ನು ಜೆಡಿಎಸ್ ಪಕ್ಷದವರು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಬಲದೊಂದಿಗೆ ಉದ್ಯಮಿ ಗೋವಿಂದರಾಜು ಅವರನ್ನು ಅಭ್ಯರ್ಥಿಯಾಗಿ ಮಾಡಿದ್ದಾರೆ. ಈ ಮೈತ್ರಿಕೂಟವು 7ನೇ ಸ್ಥಾನವನ್ನು ತನ್ನದಾಗಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದ್ದು, ಇದು ವಿನಯ್ ಕಾರ್ತಿಕ್ ವಿರುದ್ಧ ನೇರ ಪೈಪೋಟಿಯಾಗಿ ಪರಿಣಮಿಸಿದೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನಡುವಿನ ಪ್ರತಿಷ್ಠೆಯ ಸೆಣಸಾಟವಾಗಿ ಕೂಡಾ ರೂಪುಗೊಂಡಿದೆ.

ಮತದಾನ ಪ್ರಕ್ರಿಯೆಯು ಇಂದು ಸಂಜೆ 4 ಗಂಟೆಯವರೆಗೆ ನಿರಾತಂಕವಾಗಿ ಮುಂದುವರಿಯಲಿದೆ. ಈ ಸಂದರ್ಭದಲ್ಲಿ ಚುನಾವಣಾ ಆಯೋಗವು ಅತ್ಯಂತ ಮಹತ್ವದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಮತದಾನ ಕಂದಾಯದ ಒಳಗೂ ಹೊರಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಕಟ್ಟುನಿಟ್ಟಿನ ಕಣ್ಣಾವಲು ಇರಿಸಲಾಗಿದೆ. ಅಲ್ಲದೇ, ವಿಧಾನಸೌಧದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್‌ನ್ನು ಏರ್ಪಡಿಸಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಎಚ್ಚರ ವಹಿಸಲಾಗಿದೆ. ಮತದಾನ ಶಾಂತಿಯುತವಾಗಿ ಮುಗಿಯಲು ಅಗತ್ಯವಿರುವ ಎಲ್ಲಾ ತಾಂತ್ರಿಕ ಮತ್ತು ಭದ್ರತಾ ಸಿದ್ಧತೆಗಳನ್ನು ಮಾಡಲಾಗಿದೆ.

ಸಂಜೆ 4 ಗಂಟೆಯ ನಂತರ ಮತದಾನ ಪ್ರಕ್ರಿಯೆಯು ಮುಕ್ತಾಯಗೊಳ್ಳಲಿದ್ದು, ತಕ್ಷಣವೇ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಈ ಎಣಿಕೆಯಲ್ಲಿ ಸ್ಪಷ್ಟ ಫಲಿತಾಂಶವು ಹೊರಬೀಳುವ ನಿರೀಕ್ಷೆಯಿದೆ.. 

Exit mobile version