ಬಿಕ್ಲು ಶಿವ ಪ್ರಕರಣ: ಬೈರತಿ ಬಸವರಾಜ್‌ಗೆ ಫೆ.26 ರವರೆಗೆ ನ್ಯಾಯಾಂಗ ಬಂಧನ

Untitled design 2026 02 21T161852.209

ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ ಬೈರತಿ ಬಸವರಾಜ್ ಅವರಿಗೆ ಫೆಬ್ರವರಿ 26ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ನೀಡಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಇಂದು 42ನೇ ಎಸಿಜೆಎಂ ಕೋರ್ಟ್ ಮುಂದೆ ಅವರನ್ನು ಹಾಜರುಪಡಿಸಿದರು.

ಇದಕ್ಕೂ ಮೊದಲು ಏಳು ದಿನಗಳ ಕಾಲ ಸಿಐಡಿ ಕಸ್ಟಡಿಯಲ್ಲಿ ವಿಚಾರಣೆ ನಡೆಸಲಾಗಿತ್ತು. ಕಸ್ಟಡಿ ಅವಧಿ ಅಂತ್ಯಗೊಂಡ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ, ಬೈರತಿ ಬಸವರಾಜ್ ಪರ ವಕೀಲರು ಆರೋಗ್ಯದ ವಿಚಾರವನ್ನು ಮುಂದಿಟ್ಟು ಮನವಿ ಸಲ್ಲಿಸಿದರು. ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಇರುವುದರಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸುವಂತೆ ಕೋರ್ಟ್‌ಗೆ ಮನವಿ ಮಾಡಿದರು.

ವಿಶೇಷವಾಗಿ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲು ಅವಕಾಶ ನೀಡಬೇಕೆಂದು ಮನವಿ ಸಲ್ಲಿಸಲಾಯಿತು. ಆದರೆ ಸಿಐಡಿ ಪರ ವಕೀಲ ಅಶೋಕ್ ನಾಯಕ್ ವಾದ ಮಂಡಿಸಿ, ಜಯದೇವ ಆಸ್ಪತ್ರೆಯ ವೈದ್ಯಕೀಯ ವರದಿಯಲ್ಲಿ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲವೆಂದು ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು. ಆದ್ದರಿಂದ ಜೈಲಿನಲ್ಲೇ ಅಗತ್ಯ ಚಿಕಿತ್ಸೆ ನೀಡಲು ಸಾಧ್ಯವಿದೆ ಎಂದು ವಾದಿಸಿದರು.

ಎರಡೂ ಕಡೆ ವಾದ ಆಲಿಸಿದ ನ್ಯಾಯಾಲಯ, ಬೈರತಿ ಬಸವರಾಜ್ ಅವರನ್ನು ಫೆ.26ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸುವಂತೆ ಆದೇಶಿಸಿತು. ಜೊತೆಗೆ, ಜಯದೇವ ಆಸ್ಪತ್ರೆಯಲ್ಲಿ ಸೂಚಿಸಿರುವ ವಿಶೇಷ ಆಹಾರ ಕ್ರಮವನ್ನು ಜೈಲಿನಲ್ಲೇ ಮುಂದುವರಿಸಲು ಸೂಚನೆ ನೀಡಲಾಗಿದೆ. ಸೋಮವಾರ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.

ಬಿಕ್ಲು ಶಿವ ಕೊಲೆ: ಹಿನ್ನಲೆ ಏನು?

ರೌಡಿಶೀಟರ್ ಬಿಕ್ಲು ಶಿವನ ಹತ್ಯೆ ಪ್ರಕರಣವು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿಂದೆ ರೌಡಿ ಜಗ್ಗ ಮತ್ತು ರೌಡಿ ಅಜಿತ್ ಜೊತೆ ಶಿವನಿಗೆ ಹಲವು ಬಾರಿ ಗಲಾಟೆಗಳು ನಡೆದಿದ್ದವು ಎನ್ನಲಾಗಿದೆ. ಜೀವ ಬೆದರಿಕೆ ಹಿನ್ನೆಲೆ, ಶಿವನು ಬೆಂಗಳೂರು ಪೊಲೀಸ್ ಆಯುಕ್ತರು ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ತನ್ನ ಜೀವಕ್ಕೆ ಅಪಾಯವಿದೆ ಎಂದು ತಿಳಿಸಿದ್ದನು.

ಅಲ್ಲದೆ, “ನಾನು ಸತ್ತರೆ ಶಾಸಕ ಬೈರತಿ ಬಸವರಾಜ್ ಹಾಗೂ ರೌಡಿ ಜಗ್ಗ ಕಾರಣ” ಎಂದು ಆರೋಪಿಸಿ ವಿಡಿಯೋ ಸಂದೇಶವನ್ನೂ ಬಿಡುಗಡೆ ಮಾಡಿದ್ದನು. ಈ ವಿಡಿಯೋ ಹಾಗೂ ಪತ್ರಗಳು ಪ್ರಕರಣಕ್ಕೆ ಮಹತ್ವದ ಸಾಕ್ಷ್ಯಗಳಾಗಿವೆ ಎನ್ನಲಾಗುತ್ತಿದೆ.

ಪ್ರಕರಣದಲ್ಲಿ ಎ1 ಆರೋಪಿ ರೌಡಿ ಜಗ್ಗನೊಂದಿಗೆ ಬೈರತಿ ಬಸವರಾಜ್ ನಿಕಟ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದೇ ಕಾರಣದಿಂದ ಸಿಐಡಿ ಬಂಧನ ಕ್ರಮ ಕೈಗೊಂಡಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಬಂಧನದ ಮೊದಲು ಬೈರತಿ ಬಸವರಾಜ್ ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರೂ ನಿರೀಕ್ಷಿತ ಪರಿಹಾರ ದೊರಕಲಿಲ್ಲ ಎಂದು ತಿಳಿದುಬಂದಿದೆ.

ಭದ್ರತೆ ಹೆಚ್ಚಿಸಿದ ಪೊಲೀಸರು

ಬೈರತಿ ಬಸವರಾಜ್ ಬಂಧನವಾದ ತಕ್ಷಣವೇ ಬಿಕ್ಲು ಶಿವನ ನಿವಾಸದ ಬಳಿ ಕಠಿಣ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಹಲಸೂರು ಕೆರೆ ಸಮೀಪದ ಅವರ ಮನೆಯ ಸುತ್ತಮುತ್ತ ಹಿರಿಯ ಅಧಿಕಾರಿಗಳ ಸೂಚನೆಯಂತೆ ಭದ್ರತೆ ಹೆಚ್ಚಿಸಲಾಗಿದೆ.

 

Exit mobile version