ಜನವರಿ, ಫೆಬ್ರವರಿ ತಿಂಗಳ ಗೃಹಲಕ್ಷ್ಮೀ ಹಣ ಸದ್ಯದಲ್ಲೇ ಕ್ಲಿಯರ್‌: ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌!

Befunky collage 2025 03 07t133743.298

ಗೃಹಲಕ್ಷ್ಮೀ ಯೋಜನೆಯನ್ನು ಯಾವುದೇ ಕಾರಣಕ್ಕೂ ಪರಿಷ್ಕರಣೆ ಮಾಡುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ತಿಳಿಸಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಗೃಹಲಕ್ಷ್ಮಿ ಯೋಜನೆಯು ಸದ್ಯ ಈಗ ಯಾವ ರೀತಿ ನಡೆದುಕೊಂಡು ಹೋಗುತ್ತಿದೆಯೇ; ಹಾಗೆಯೇ ಮುಂದುವರೆದುಕೊಂಡು ಹೋಗಲಿದೆ; ಅದರಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ADVERTISEMENT
ADVERTISEMENT

ಅನುದಾನ ಸರಿಯಾಗಿ ಸದ್ಭಳಕೆ

ಕೆಲವೊಂದು ಇಲಾಖೆಗಳಲ್ಲಿ ಕಳೆದ ಬಜೆಟ್‌ ನಲ್ಲಿ ನೀಡಿದ ಹಣವೇ ಖರ್ಚಾಗುತ್ತಿಲ್ಲವೆಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌, ನನ್ನ ಇಲಾಖೆ ಇಷ್ಟು ವರ್ಷ ಬೇರೆ ರೀತಿಯಲ್ಲಿ ಇತ್ತು. ಆದರೆ, ಈಗ ಬಹುದೊಡ್ಡ ಗಾತ್ರದ ಬಜೆಟ್‌ನ್ನು ಒಳಗೊಂಡಂತಹ ಇಲಾಖೆಯಾಗಿದೆ. ಅದರಲ್ಲೂ ಗೃಹಲಕ್ಷ್ಮೀ ಯೋಜನೆ ಬಂದಿರುವುದರಿಂದ ಒಂದು ವರ್ಷಕ್ಕೆ ಸುಮಾರು ೩೨ ಸಾವಿರ ಕೋಟಿ ರೂಪಾಯಿಯಷ್ಟು ಹಣವನ್ನು ಗೃಹಲಕ್ಷ್ಮೀಯವರಿಗೆ ನೀಡಲಾಗುತ್ತಿದೆ. ನಮ್ಮ ಇಲಾಖೆಗೆ ನೀಡಿದ ಅನುದಾನ ಪೈಕಿ ಯಾವುದೇ ಅನುದಾನ ಉಳಿದಿಲ್ಲ. ಎಲ್ಲವೂ ಸರಿಯಾದ ರೀತಿಯಲ್ಲಿ ಖರ್ಚಾಗಿದೆ. ಶೇಕಡ ೧೦ರಷ್ಟು ಮಾತ್ರ ಅನುದಾನ ಮಿಕ್ಕಿರಬಹುದು. ಅದು ಕೂಡ ಮಾರ್ಚ್‌ ೩೧ರೊಳಗೆ ಖರ್ಚಾಗಲಿದೆ ಎಂದು ಸಚಿವರು ಹೇಳಿದರು.

ಸದ್ಯದಲ್ಲೇ ಜನವರಿ, ಫೆಬ್ರವರಿಯದು ಕ್ಲಿಯರ್‌

ಗೃಹಲಕ್ಷ್ಮೀ ಹಣ ಎರಡ್ಮೂರು ತಿಂಗಳಿಗೊಮ್ಮೆ ಬರುತ್ತದೆ ಎನ್ನುವುದು ತಪ್ಪು. ಸರ್ಕಾರ ಬಹುದೊಡ್ಡ ಯೋಜನೆ ಮಾಡಿದೆ. ನವೆಂಬರ್‌, ಡಿಸೆಂಬರ್‌ ತಿಂಗಳ ಹಣ ಕ್ಲೀಯರ್‌ ಆಗಿದೆ. ಜನವರಿ, ಫೆಬ್ರವರಿ ಸದ್ಯದಲ್ಲೇ ಕ್ಲಿಯರ್‌ ಆಗಲಿದೆ. ಹತ್ತ-ಹದಿನೈದು ದಿನ ಹೆಚ್ಚುಕಡಿಮೆ ಆಗಬಹುದೇನೋ ವಿನಃ ಯಾವುದೇ ಕಾರಣಕ್ಕೂ ಕ್ಲಿಯರ್‌ ಆಗದೇ ಉಳಿಯುವುದಿಲ್ಲ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಯೋಜನೆ ಸ್ಥಬ್ಧ

ನಮ್ಮ ನೆರೆಯ ಮಹಾರಾಷ್ಟ್ರ ರಾಜ್ಯವನ್ನು ನೋಡಿ, ಅಲ್ಲಿ ಚುನಾವಣೆಗೆ ಮುನ್ನ ಎರಡು ತಿಂಗಳ ದುಡ್ಡನ್ನು ಹಾಕಿದರು. ಅಲ್ಲಿನ ʻಮಾಝಿ ಲಡಕಿ ಬಹಿನ್‌ʼ ಯೋಜನೆಗೆ ಹಣನೇ ಇಲ್ಲ. ಇಲ್ಲಿ ನಮ್ಮನ್ನು ಮಾತ್ರ ಬಿಜೆಪಿಯವರು ದೊಡ್ಡದಾಗಿ ಪ್ರಶ್ನೆ ಮಾಡುತ್ತಾರೆಂದು ಖಾರವಾಗಿ ಹೇಳಿದ ಸಚಿವರು, ನಮ್ಮ ಕರ್ನಾಟಕದಲ್ಲೇ ಗೃಹಲಕ್ಷ್ಮೀ ಹಣ ಸರಿಯಾಗಿ ತಲುಪಿಸುತ್ತಿರುವುದು. ಅದೇ ಮಹಾರಾಷ್ಟ್ರದಲ್ಲಿ ಚುನಾವಣೆಗಿಂತ ಮುಂಚೆ ಅಷ್ಟೇ ಹಾಕಿದ್ದರು. ಆದರೆ, ಚುನಾವಣೆ ನಂತರ ಯೋಜನೆ ಜಾರಿಗೊಳ್ಳದೆ ನಿಂತಿದೆ ಎಂದರು.

ಸಿಎಂ ಅವರಿಗೆ ಅಭಿನಂದನೆ

ಸಿಎಂ ಸಿದ್ದರಾಮಯ್ಯನವರದು ಇದು ಕೊನೆಯ ಬಜೆಟ್‌ ಎಂದೆಲ್ಲ ಬಿಜೆಪಿಯವರು ಹೇಳುತ್ತಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಾನಂತೂ ಭವಿಷ್ಯದ ಬಗ್ಗೆ ಮಾತನಾಡುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದನೆ ಸಲ್ಲಿಸುತ್ತೇನೆ; ೧೬ನೇ ದಾಖಲೆ ಬಜೆಟ್‌ ಮಂಡಿಸಿದ್ದಾರೆ. ಕರ್ನಾಟಕದಲ್ಲಿ ಎಲ್ಲರನ್ನೂ ಒಳಗೊಂಡ ಸಮಗ್ರವಾದ ಬಜೆಟ್‌ ಮಾಡುತ್ತಿರುವುದು ವಿಶೇಷ ಎಂದು ಸಚಿವರು ತಿಳಿಸಿದರು.

ಎಲ್ಲವೂ ಹೈಕಮಾಂಡ್‌ ತೀರ್ಮಾನ

ಸದ್ಯದಲ್ಲೇ ಸಂಪುಟ ಪುನರ್‌ ರಚನೆ ಆಗಲಿದೆ; ಇದು ಕೆಲ ಸಚಿವರಿಗೆ ಕೊನೆಯ ಬಜೆಟ್‌ ಎಂದೆಲ್ಲ ಹೇಳುತ್ತಿದ್ದಾರೆಂಬ ಸುದ್ದಿಗಾರರ ಪ್ರಶ್ನೆಗೆ ಸಚಿವರು, ಈವೊಂದು ಒಳ್ಳೆಯ ಸಂದರ್ಭದಲ್ಲಿ ಏನನ್ನೂ ಮಾತನಾಡಲು ಹೋಗುವುದಿಲ್ಲ. ಏಕೆಂದರೆ, ನಮ್ಮ ಕಾಂಗ್ರೆಸ್‌ ಪಕ್ಷದಲ್ಲಿ ಒಂದು ಶಿಸ್ತು ಇದೆ. ಏನೇ ಚರ್ಚೆ, ತೀರ್ಮಾನಗಳಿದ್ದರೂ ಅದನ್ನು ಹೈಕಮಾಂಡ್‌ ಮಾಡುತ್ತದೆ ಎಂದು ಹೇಳಿದರು.

Exit mobile version