ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಕುಸಿತ: ಇಬ್ಬರು ಮಕ್ಕಳು ಸೇರಿ ಮೂವರು ದುರ್ಮರಣ

Untitled design 2026 07 01T091504.219

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಮಂಗಳವಾರ (ಜೂನ್ 30) ರಾತ್ರಿ ಸುರಿದ ಮಳೆಯಿಂದ ಭೀಕರ ಭೂಕುಸಿತ ಸಂಭವಿಸಿದೆ. ಮನೆಯ ಮೇಲ್ಛಾವಣಿ ಹಾಗೂ ಗೋಡೆ ಕುಸಿದು ತಾಯಿ ಮತ್ತು ಇಬ್ಬರು ಮಕ್ಕಳು ಸೇರಿ ಮೂವರು ಮೃತಪಟ್ಟ ಘಟನೆ ಮಂಗಳೂರು ನಗರದ ನಾಗುರಿ ಪ್ರದೇಶದಲ್ಲಿ ನಡೆದಿದೆ. ನಿರಂತರವಾಗಿ ಸುರಿಯುತ್ತಿದ್ದ ಭಾರೀ ಮಳೆಯ ಪರಿಣಾಮ ಪಕ್ಕದ ಗುಡ್ಡ ಕುಸಿದು ಮನೆ ಮೇಲೆ ಬಿದ್ದಿದ್ದು, ಈ ದುರಂತ ಸಂಭವಿಸಿದೆ.

ನಾಗುರಿ ಪ್ರದೇಶದ ಕಂಕನಾಡಿ ಪೊಲೀಸ್ ಠಾಣೆ ಸಮೀಪ ಇರುವ ಹಳೆಯ ಮನೆಯೊಂದರ ಮೇಲೆ ಮಣ್ಣು ಕುಸಿದು ಬಿದ್ದ ಪರಿಣಾಮ ಮನೆ ಸಂಪೂರ್ಣವಾಗಿ ಮಣ್ಣಿನಡಿ ಮುಚ್ಚಿಹೋಗಿದೆ. ಘಟನೆಯ ಸಮಯದಲ್ಲಿ ಮನೆಯೊಳಗೆ ಆರು ಮಂದಿ ಇದ್ದರು ಎಂದು ತಿಳಿದುಬಂದಿದೆ. ದುರಂತದ ರಭಸಕ್ಕೆ ನಾಲ್ವರು ಮಣ್ಣಿನಡಿ ಸಿಲುಕಿಕೊಂಡಿದ್ದರು.

ಸ್ಥಳೀಯರ ಹಾಗೂ ರಕ್ಷಣಾ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ಮೂವರು ವ್ಯಕ್ತಿಗಳನ್ನು ಜೀವಂತವಾಗಿ ರಕ್ಷಿಸಲು ಸಾಧ್ಯವಾಯಿತು. ಆದರೆ, ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟವರು ಮೂಲತಃ ಬಿಹಾರ ರಾಜ್ಯದವರಾಗಿದ್ದು, ಮಂಗಳೂರಿನಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಘಟನೆ ನಡೆದ ತಕ್ಷಣವೇ ಅಗ್ನಿಶಾಮಕ ದಳ, ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದರು. ಜೆಸಿಬಿ ಯಂತ್ರಗಳ ಸಹಾಯದಿಂದ ಮಣ್ಣನ್ನು ತೆರವುಗೊಳಿಸುವ ಕೆಲಸ ನಿರಂತರವಾಗಿ ನಡೆಯಿತು.

ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದಲೂ ಭಾರೀ ಮಳೆಯಾಗುತ್ತಿದೆ. ಇದರಿಂದ ಈ ದುರಂತ ಸಂಭವಿಸಿದೆ.

Exit mobile version