ಧರ್ಮಸ್ಥಳದ ರಹಸ್ಯ: ಅನಾಮಿಕ ತೋರಿಸಿದ ಹೊಸ ಸ್ಪಾಟ್‌ನಲ್ಲಿ ಸಿಕ್ತು ಅಸ್ಥಿಪಂಜರ

222 (16)

ಮಂಗಳೂರು, ಆಗಸ್ಟ್ 04, 2025: ಧರ್ಮಸ್ಥಳ ಸುತ್ತಲಿನ ಕಾಡಿನಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನ್ನ ಉತ್ಖನನ ಕಾರ್ಯವನ್ನು ತೀವ್ರಗೊಳಿಸಿದೆ. ಬಂಗ್ಲಗುಡ್ಡದಲ್ಲಿ ನಡೆದ ಇಂದಿನ ಕಾರ್ಯಾಚರಣೆಯಲ್ಲಿ ಒಂದು ಇಡೀ ಅಸ್ಥಿಪಂಜರವನ್ನು ಪತ್ತೆಹಚ್ಚಲಾಗಿದೆ. ಈ ಅಸ್ಥಿಪಂಜರದ ಜೊತೆಗೆ ಗಂಡಸಿನ ಉಡುಪು ಮತ್ತು ಹಗ್ಗವೂ ಲಭ್ಯವಾಗಿದ್ದು, ಕಳೆದ ಒಂದೂವರೆ ವರ್ಷದ ಹಿಂದೆ ಆತ್ಮಹತ್ಯೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಈ ಅಸ್ಥಿಪಂಜರವನ್ನು ಎಫ್‌ಎಲ್‌ಎಸ್ ಸಂಶೋಧನಾ ಕೇಂದ್ರಕ್ಕೆ ರವಾನಿಸಲಾಗಿದೆ.

ಈ ಪ್ರಕರಣದಲ್ಲಿ ದೂರುದಾರರಾದ ಅನಾಮಿಕ ಎಂಬಾತ ತೋರಿಸಿದ 11 ಸ್ಥಳಗಳಲ್ಲಿ ಎಸ್‌ಐಟಿ ತಂಡವು ಉತ್ಖನನ ಕಾರ್ಯ ನಡೆಸಿತ್ತು. ಈ ವೇಳೆ, ಭೂಮಿಯ ಮೇಲ್ಮೈನಲ್ಲಿ ಲಭ್ಯವಾದ ಅಸ್ಥಿಪಂಜರದ ಜೊತೆಗೆ, ಪಾಯಿಂಟ್ ನಂಬರ್ 6 ರ ಉತ್ಖನನದಲ್ಲಿ 25 ಮೂಳೆಗಳನ್ನು ಎಸ್‌ಐಟಿ ಕಲೆಹಾಕಿದೆ.

ಶನಿವಾರ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿತ್ತು. ಇಚಿಲಂಪಾಡಿ ನಿವಾಸಿಯಾದ ಜಯನ್ ಎಂಬಾತ, ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಆಗಮಿಸಿ, 15 ವರ್ಷದ ಬಾಲಕಿಯನ್ನು ಧರ್ಮಸ್ಥಳದ ಕಾಡಿನಲ್ಲಿ ಹೂತಿಡಲಾಗಿದೆ ಎಂದು ತಾನು ಪ್ರತ್ಯಕ್ಷದರ್ಶಿಯಾಗಿದ್ದೇನೆ ಎಂದು ಹೇಳಿಕೆ ನೀಡಿದ್ದರು. ಯಾವುದೇ ಪ್ರಕರಣ ದಾಖಲಾಗದೆ ಶವವನ್ನು ಹೂತಿಡಲಾಗಿದೆ ಎಂದು ಆರೋಪಿಸಿ, ಆ ಸ್ಥಳವನ್ನು ತೋರಿಸುವುದಾಗಿ ಒಪ್ಪಿಕೊಂಡಿದ್ದರು. ಇಂದು ಅವರನ್ನು ವಿಚಾರಣೆಗೆ ಕರೆಸಲಾಗಿತ್ತು. ಈ ಹೇಳಿಕೆಯ ಆಧಾರದ ಮೇಲೆ ತನಿಖೆಯನ್ನು ಮುಂದುವರಿಸಲಾಗಿದೆ.

ಎಸ್‌ಐಟಿ ತಂಡವು ಈಗಾಗಲೇ 10 ಸ್ಥಳಗಳಲ್ಲಿ ಉತ್ಖನನ ಕಾರ್ಯವನ್ನು ಮುಗಿಸಿದ್ದು, ಉಳಿದ ಮೂರು ಸ್ಥಳಗಳಾದ 11, 12, ಮತ್ತು 13ನೇ ಪಾಯಿಂಟ್‌ಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಸ್ಥಳದಲ್ಲಿ ಪೊಲೀಸರು ಮತ್ತು ನಕ್ಸಲ್ ನಿಗ್ರಹ ದಳವು ಬಿಗಿ ಕಾವಲು ಕಾಯುತ್ತಿದ್ದು, ಯಾರೂ ಈ ಪ್ರದೇಶಕ್ಕೆ ಪ್ರವೇಶಿಸದಂತೆ ಬಂದೋಬಸ್ತ್ ಮಾಡಲಾಗಿದೆ.

Exit mobile version