ಬಸ್ ದರ ಹೆಚ್ಚಳ ಬೆನ್ನಲ್ಲೇ ಜನರಿಗೆ ಮತ್ತೊಂದು ಶಾಕ್: ದೀಪಾವಳಿಗೆ ತರಕಾರಿ, ಹಣ್ಣುಗಳ ಬೆಲೆ ಏರಿಕೆ

ಬಸ್ ದರ ಏರಿಕೆ ಬೆನ್ನಲ್ಲೇ ತರಕಾರಿ, ಹಣ್ಣುಗಳ ಬೆಲೆ ಏರಿಕೆ

Untitled Design 2026 11 04T183227.992

ಮಂಗಳೂರು, ನವೆಂಬರ್ 4: ಬಸ್ ದರ ಏರಿಕೆ ಬೆನ್ನಲ್ಲೇ ಬೆಳಕಿನ ಹಬ್ಬ ದೀಪಾವಳಿಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆಯೇ, ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡದ ಪ್ರಮುಖ ಮಾರುಕಟ್ಟೆಗಳಲ್ಲಿ ತರಕಾರಿ ಮತ್ತು ಹಣ್ಣುಗಳ ಧಾರಣೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಹಬ್ಬಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಹಿನ್ನೆಲೆ ಮಾರುಕಟ್ಟೆಯಲ್ಲಿ ತರಕಾರಿಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ಗ್ರಾಹಕರಿಗೆ ದರ ಏರಿಕೆಯ ಬಿಸಿ ತಟ್ಟಿದೆ.

ಬೆಲೆ ಏರಿಕೆಗೆ ಕಾರಣಗಳು

ಉಡುಪಿಯಲ್ಲಿ ಸರಿಯಾದ ಮಳೆಯಾಗದಿರುವುದು, ಕ್ರಿಮಿಕೀಟಗಳ ಬಾಧೆ ಮತ್ತು ಬೆಳಗಾವಿಯ ಹೆದ್ದಾರಿ ತಡೆಯಿಂದಾಗಿ ಪೂರೈಕೆ ಕಡಿತಗೊಂಡಿದೆ. ಮಂಗಳೂರಿಗೆ ತರಕಾರಿ ಸರಬರಾಜು ಮಾಡುವ ಹಾಸನ, ಚಿಕ್ಕಮಗಳೂರು ಹಾಗೂ ಬೆಂಗಳೂರು ಭಾಗಗಳಲ್ಲಿ ಬೆಳೆ ಇಳುವರಿ ಕಡಿಮೆಯಾಗಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಬೆಳಗಾವಿ ಪ್ರತಿಭಟನೆಯ ಪರಿಣಾಮ

ಕಳೆದ ವಾರಕ್ಕೆ ಹೋಲಿಸಿದರೆ ಕೊತ್ತಂಬರಿ ಸೊಪ್ಪು, ನುಗ್ಗೆಕಾಯಿ, ಹಾಗಲಕಾಯಿ, ಬೀನ್ಸ್, ಹೀರೇಕಾಯಿ, ಹಸಿಮೆಣಸಿನಕಾಯಿ ಹಾಗೂ ಅಳಸಂದಿ ದರಗಳು ಭಾರಿ ಜಿಗಿತ ಕಂಡಿವೆ. ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ನಡೆಸಿದ ರಸ್ತೆ ತಡೆ ವೇಳೆ ಕೊತ್ತಂಬರಿ ಸೊಪ್ಪು ಸಾಗಿಸುತ್ತಿದ್ದ ವಾಹನಗಳನ್ನು ತಡೆದು, ಸೊಪ್ಪನ್ನು ರಸ್ತೆಗೆ ಎಸೆದು ನಾಶಪಡಿಸಲಾಗಿತ್ತು. ಈ ಘಟನೆಯಿಂದಾಗಿ ಕರಾವಳಿಗೆ ಕೊತ್ತಂಬರಿ ಪೂರೈಕೆ ಸಂಪೂರ್ಣ ಸ್ಥಗಿತಗೊಂಡು, ದಿಢೀರನೆ ಕೆಜಿಗೆ ₹100ರಷ್ಟು ದರ ಏರಿಕೆಯಾಗಿದೆ. ಪ್ರಸ್ತುತ ಕೊತ್ತಂಬರಿ ಸೊಪ್ಪು ಕೆಜಿಗೆ ₹200ಕ್ಕೆ ಮಾರಾಟವಾಗುತ್ತಿದೆ. ಕಳೆದ ವಾರ ಕೆಜಿಗೆ ₹80 ಇದ್ದ ಶುಂಠಿ ಮತ್ತು ನುಗ್ಗೆಕಾಯಿ ದರ ಈ ವಾರ ನೇರವಾಗಿ ₹160ಕ್ಕೆ ಏರಿಕೆಯಾಗಿದೆ. ಬೀನ್ಸ್ ದರ ₹80ರಿಂದ ₹120ಕ್ಕೆ ಹಾಗೂ ಹೀರೇಕಾಯಿ ₹50ರಿಂದ ₹80ಕ್ಕೆ ಜಿಗಿದಿದೆ.

ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ

ನುಗ್ಗೆಕಾಯಿ ₹160, ಸ್ಥಳೀಯ ಹೀರೆಕಾಯಿ/ಸೌತೆ ₹160, ಮುಳ್ಳು ಸೌತೆ ₹240, ಬೀನ್ಸ್ ₹120, ಅಳಸಂದಿ ₹120, ಕ್ಯಾಪ್ಸಿಕಂ ₹120, ಹಸಿಮೆಣಸಿನಕಾಯಿ ₹80-120, ಬೆಂಡೆಕಾಯಿ ₹160, ಹೀರೇಕಾಯಿ ₹100, ಹಾಗಲಕಾಯಿ ₹80, ಬದನೆಕಾಯಿ ₹60-80, ಕ್ಯಾರೆಟ್ ₹80, ಟೊಮೆಟೊ ₹30, ಗಡ್ಡೆಕೋಸು ₹40. ಉತ್ತಮ ಗುಣಮಟ್ಟದ ಈರುಳ್ಳಿ ₹60-70, ಬೆಳ್ಳುಳ್ಳಿ ₹200-240 (ಚಿಲ್ಲರೆ ಮಾರುಕಟ್ಟೆಯಲ್ಲಿ ಇನ್ನೂ ಹೆಚ್ಚು), ಆಲೂಗಡ್ಡೆ 2 ಕೆಜಿಗೆ ₹50 ಆಗಿದೆ.

ಹಣ್ಣುಗಳ ಬೆಲೆಯೂ ಗಗನಕ್ಕೆ

ಹಬ್ಬದ ಪೂಜೆಗೆ ಅಗತ್ಯವಿರುವ ಹಣ್ಣುಗಳ ಬೆಲೆಯೂ ಗಗನಕ್ಕೇರಿದೆ. ಸೇಬು ₹150, ಮಾವು ₹200, ದಾಳಿಂಬೆ ₹220, ಡ್ರ್ಯಾಗನ್ ಫ್ರೂಟ್ ₹160, ಮೂಸಂಬಿ ₹50, ಕಿತ್ತಳೆ ₹60, ಸೀತಾಫಲ ₹180, ಪೇರಲ ₹100, ಕಪ್ಪು ದ್ರಾಕ್ಷಿ ₹100, ಅನಾನಸ್ ₹70, ಲಿಚಿ ₹300 ಇದೆ. ಮೈಸೂರು ಬಾಳೆ ₹80, ಕಡಲಿ ₹120, ರೋಬಸ್ಟಾ ₹60, ಸಣ್ಣ ಏಲಕ್ಕಿ ₹80, ದೊಡ್ಡ ಏಲಕ್ಕಿ ₹100, ಕಾರ್ಡಮಮ್ ಬಾಳೆ ₹130 ಆಗಿದೆ.

ಗ್ರಾಹಕರಿಗೆ ಹೊರೆ

ಬಸ್ ದರ ಏರಿಕೆ ಜತೆಗೆ ತರಕಾರಿ ಮತ್ತು ಹಣ್ಣುಗಳ ಬೆಲೆ ಏರಿಕೆಯಿಂದ ದೀಪಾವಳಿ ಹಬ್ಬದ ಸಿದ್ಧತೆಯಲ್ಲಿ ತೊಡಗಿರುವ ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಕುಟುಂಬಗಳಿಗೆ ಭಾರೀ ಆರ್ಥಿಕ ಹೊರೆ ಬಿದ್ದಿದೆ. ಹಬ್ಬದ ಸಾಮಗ್ರಿಗಳು, ಸಿಹಿತಿಂಡಿ ತಯಾರಿಕೆಗೆ ಬೇಕಾದ ವಸ್ತುಗಳು ಹಾಗೂ ಪೂಜಾ ಸಾಮಗ್ರಿಗಳ ಬೆಲೆಯೂ ಏರಿಕೆಯಾಗಿರುವುದರಿಂದ ಜನಸಾಮಾನ್ಯರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

Exit mobile version