ಉದ್ಯಮಿಗೆ ಕಾಂಗ್ರೆಸ್ ಮುಖಂಡನಿಂದ ಹನಿಟ್ರ್ಯಾಪ್: 2 ಕೋಟಿ 77 ಲಕ್ಷ ಹಣ ದೋಚಿದ ಖದೀಮರು

Untitled design 2026 06 09T131544.935

ಮಂಗಳೂರು, ಜೂನ್ 09: ಉದ್ಯಮಿಯೊಬ್ಬರನ್ನು ಯುವ ಕಾಂಗ್ರೆಸ್ ಮುಖಂಡನೊಬ್ಬ ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿ, ಬ್ಲ್ಯಾಕ್ ಮೇಲ್ ಮಾಡಿ ಬರೋಬ್ಬರಿ 2 ಕೋಟಿ 77 ಲಕ್ಷ ರೂಪಾಯಿ ಹಣ ದೋಚಿರುವ ಸಂಚಲನಕಾರಿ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ವಿಚಾರಣೆ ಮುಂದುವರೆದಂತೆ ಆರೋಪಿಗಳ ಕುತಂತ್ರ ಮತ್ತಷ್ಟು ಬಯಲಾಗುತ್ತಿವೆ.

ಮಂಗಳೂರು ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಎಂದು ಗುರುತಿಸಲಾದ ನಿಝಾಮ್ ಹಾಗೂ ಜಿತೇಶ್ ಎಂಬ ಇಬ್ಬರು ಸೇರಿಕೊಂಡು ಈ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಜಿತೇಶ್ ಮೂಲಕ ಉದ್ಯಮಿಯನ್ನು ಸಂಪರ್ಕಿಸಿ, ನಂತರ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಆರಂಭದಲ್ಲಿ ಉದ್ಯಮಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ವೈಯಕ್ತಿಕ ಭೇಟಿ ಹಾಗೂ ಸಂಭಾಷಣೆಗಳನ್ನು ನಡೆಸಲಾಗಿದೆ. ನಂತರ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ಸೆರೆಹಿಡಿದು, ಅವುಗಳನ್ನು ಬಳಸಿ ಬೆದರಿಕೆ ಹಾಕಲಾಗಿದೆ. ಈ ಫೋಟೋ ಹಾಗೂ ವಿಡಿಯೋಗಳನ್ನು ಉದ್ಯಮಿಯ ಕುಟುಂಬದವರಿಗೆ, ವಿಶೇಷವಾಗಿ ಪತ್ನಿಗೆ ತೋರಿಸುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಹೇಳಲಾಗಿದೆ.

ಮೊದಲ ಹಂತದಲ್ಲಿ ಸುಮಾರು 35 ಲಕ್ಷ ರೂಪಾಯಿ ಹಣವನ್ನು ಪಡೆದುಕೊಂಡಿದ್ದಾರೆ ಎಂಬ ಆರೋಪವಿದೆ. ಬಳಿಕ ಹಂತ ಹಂತವಾಗಿ ಹಣದ ಬೇಡಿಕೆ ಮುಂದುವರೆದು, ಎರಡು ವರ್ಷಗಳ ಅವಧಿಯಲ್ಲಿ ಒಟ್ಟು 2.77 ಕೋಟಿ ರೂಪಾಯಿವರೆಗೆ ವಸೂಲಿ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮರ್ಯಾದೆ ಹಾಗೂ ಕುಟುಂಬದ ಗೌರವಕ್ಕೆ ಅಂಜಿ ಉದ್ಯಮಿ ಹಣ ನೀಡಿದ್ದಾನೆ ಎಂದು ಹೇಳಲಾಗಿದೆ.

ಇದಲ್ಲದೆ, ಪ್ರಮುಖ ಆರೋಪಿಯಾದ ನಿಝಾಮ್ ತನ್ನನ್ನು ದೊಡ್ಡ ರಾಜಕೀಯ ನಾಯಕರೊಂದಿಗೆ, ಉನ್ನತ ಅಧಿಕಾರಿಗಳೊಂದಿಗೆ ಹಾಗೂ ಪ್ರಮುಖ ಉದ್ಯಮಿಗಳೊಂದಿಗೆ ಸಂಪರ್ಕ ಹೊಂದಿರುವಂತೆ ಚಿತ್ರಿಸಿಕೊಂಡಿದ್ದಾನೆ ಎಂಬ ಆರೋಪವೂ ಇದೆ. ಕೆಲ ಎಐ ಆಧಾರಿತ ಚಿತ್ರಗಳನ್ನು ಬಳಸಿಕೊಂಡು ತನ್ನ ಪ್ರಭಾವವನ್ನು ತೋರಿಸಿ ಮತ್ತಷ್ಟು ಭಯ ಹುಟ್ಟಿಸಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಣ ಪಡೆದ ನಂತರವೂ ಬೆದರಿಕೆ ನಿಲ್ಲಿಸದೇ ಮುಂದುವರಿದಿದೆ ಎಂದು ಉದ್ಯಮಿ ಆರೋಪಿಸಿದ್ದಾರೆ. ಇದರಿಂದ ತೀವ್ರ ಒತ್ತಡಕ್ಕೆ ಒಳಗಾದ ಉದ್ಯಮಿ ಕೊನೆಗೆ ಮಂಗಳೂರಿನ ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರು ದಾಖಲಾದ ನಂತರ ಪೊಲೀಸರು ತಕ್ಷಣ ಇಬ್ಬರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ನಂತರದ ತನಿಖೆಯಲ್ಲಿ ನಿಝಾಮ್ ಹಾಗೂ ಜಿತೇಶ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರಕರಣದ ಸತ್ಯಾಸತ್ಯತೆ, ಹಣ ವರ್ಗಾವಣೆ ವಿವರಗಳು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

Exit mobile version