ಮಂಡ್ಯ: ರೈಲಿನಲ್ಲಿ ಕೇವಲ ಸೀಟಿನ ವಿಚಾರಕ್ಕೆ ಗಲಾಟೆ ನಡೆದಿದ್ದು,ಈ ವೇಳೆ ಇಬ್ಬರಿಗೆ ಚಾಕು ಇರಿಯಲಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದಿದೆ. ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರಾಜ-ರಾಣಿ ರೈಲಿನಲ್ಲಿ ಸೀಟಿಗಾಗಿ ನಡೆದ ಗಲಾಟೆ ನಡೆದಿದೆ. ನಂತರ ಇಬ್ಬರಿಗೆ ಚಾಕು ಇರಿದು ಹಲ್ಲೆ ಮಾಡಲಾಗಿದೆ.
ಘಟನೆಯ ವಿವರ
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ನಡುವೆ ಸೀಟಿನ ವಿಚಾರಕ್ಕೆ ಮಾತಿನ ಚಕಮಕಿ ಆರಂಭವಾಗಿದೆ. ಈ ವೇಳೆ ತುಮಕೂರು ಮೂಲದ ಶಿವಕುಮಾರ್ ಎಂಬುವರು “ಏಕೆ ಜಗಳ ಮಾಡುತ್ತಿದ್ದೀರಿ?” ಎಂದು ಪ್ರಶ್ನಿಸಿದ್ದು, ಈ ಮಾತು ಆರೋಪಿಗಳ ಕೋಪಕ್ಕೆ ಕಾರಣವಾಗಿದೆ.
ಆರೋಪಿಗಳಾದ ಸುಭಾನ್ ಖುರೇಶಿ, ಶೋಯಬ್ ಮತ್ತು ವಾಸೀಂ ಎಂಬುವರು ಶಿವಕುಮಾರ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಮೊದಲು ಸುಭಾನ್ ಖುರೇಶಿ ಚಾಕುವಿನಿಂದ ಶಿವಕುಮಾರ್‌ಗೆ ಇರಿದಿದ್ದು, ನಂತರ ಶೋಯಬ್ ಕೂಡ ಮತ್ತೆ ಚಾಕು ಇರಿದಿದ್ದಾನೆ ಎಂದು ತಿಳಿದುಬಂದಿದೆ. ಈ ಹಲ್ಲೆಯಿಂದ ಶಿವಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಜೀವ ಉಳಿಸಿಕೊಳ್ಳಲು ಶಿವಕುಮಾರ್ ತಕ್ಷಣ ರೈಲಿನ ಎಮರ್ಜೆನ್ಸಿ ಚೈನ್ ಎಳೆದಿದ್ದಾರೆ. ಇದರಿಂದ ರೈಲು ಮದ್ದೂರು ಸಮೀಪ ನಿಂತಿದೆ. ರೈಲು ನಿಂತ ಕೂಡಲೇ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಈ ವೇಳೆ ಅಲ್ಲಿದ್ದ ಸಿಬ್ಬಂದಿ ಮತ್ತು ಪ್ರಯಾಣಿಕರು ಅವರನ್ನು ಹಿಡಿಯಲು ಮುಂದಾಗಿದ್ದಾರೆ.
ಆರೋಪಿಗಳನ್ನು ಹಿಡಿಯಲು ಹೋದ ಗೇಟ್ ಕೀಪರ್ ಕುಮಾರ್ ಮೇಲೆಯೂ ದುಷ್ಕರ್ಮಿಗಳು ದಾಳಿ ನಡೆಸಿ, ಅವರಿಗೂ ಸಹ ಚಾಕುವಿನಿಂದ ಇರಿದಿದ್ದಾರೆ. ಇದರಿಂದ ಕುಮಾರ್ ಕೂಡ ಗಾಯಗೊಂಡಿದ್ದಾರೆ. ಈ ದೃಶ್ಯವನ್ನು ಕಂಡು ಸಾರ್ವಜನಿಕರು ಆರೋಪಿಗಳನ್ನು ಹಿಡಿದು ಧರ್ಮದೇಟು ನೀಡಿದ್ದಾರೆ.
ನಂತರ ಸ್ಥಳೀಯರು ಮತ್ತು ಪ್ರಯಾಣಿಕರು ಸೇರಿ ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಗೊಂಡ ಶಿವಕುಮಾರ್ ಮತ್ತು ಕುಮಾರ್ ಅವರನ್ನು ತಕ್ಷಣ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ವಿಚಾರಣೆಗೊಳಪಡಿಸಲಾಗಿದೆ.
