ಗಣೇಶ ಪ್ರತಿಷ್ಠಾಪನೆ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ, ಆಸ್ಪತ್ರೆಗೆ ದಾಖಲು

ಮಂಡ್ಯ: ಗಣೇಶ ಚತುರ್ಥಿ ಹಿನ್ನೆಲೆ ಮಂಡ್ಯ ನಗರದಲ್ಲಿ ಆಯೋಜಿಸಲಾಗಿದ್ದ ಗಣೇಶೋತ್ಸವ ಕಾರ್ಯಕ್ರಮದ ವೇಳೆ ಅವಘಡ ಸಂಭವಿಸಿದ್ದು, ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಅವರ ತಲೆಗೆ ಗಾಯವಾಗಿದೆ. ಬೃಹತ್ ಗಣೇಶ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಆಕಸ್ಮಿಕವಾಗಿ ಸ್ಕ್ರೀನ್‌ನ ಕೊಂಡಿಯೊಂದು ಕಳಚಿ ಶಾಸಕರ ತಲೆಯ ಮೇಲೆ ಬಿದ್ದಿದೆ. ಘಟನೆಯ ಬಳಿಕ ತಕ್ಷಣ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಂಡ್ಯ ನಗರದ ಮರಿಗೌಡ ಬಡಾವಣೆಯಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಗಣೇಶ ಚತುರ್ಥಿ ಅಂಗವಾಗಿ ವಿಜೃಂಭಣೆಯಿಂದ ಗಣೇಶೋತ್ಸವ ಆಯೋಜಿಸಲಾಗಿತ್ತು. ಬಡಾವಣೆಯಲ್ಲಿ ಬೃಹತ್ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲು ಸಿದ್ಧತೆ ನಡೆಸಲಾಗಿದ್ದು, ಅದಕ್ಕೂ ಮುನ್ನ ಸಾರ್ವಜನಿಕರ ಸಮ್ಮುಖದಲ್ಲಿ ಮೂರ್ತಿ ಅನಾವರಣಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮಂಡ್ಯ ಶಾಸಕ ಗಣಿಗ ರವಿಕುಮಾರ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು.

ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಗಣೇಶ ಮೂರ್ತಿ ಅನಾವರಣಕ್ಕೆ ಸಿದ್ಧರಾಗಿದ್ದ ಸಂದರ್ಭದಲ್ಲಿ ಈ ಅನಿರೀಕ್ಷಿತ ಘಟನೆ ನಡೆದಿದೆ. ಮೂರ್ತಿಯ ಮುಂಭಾಗದಲ್ಲಿ ಅಳವಡಿಸಲಾಗಿದ್ದ ದೊಡ್ಡ ಸ್ಕ್ರೀನ್‌ ಅನ್ನು ಸರಿಸುವ ವೇಳೆ ಅದರ ಕೊಂಡಿಯೊಂದು ಆಕಸ್ಮಿಕವಾಗಿ ಕಳಚಿದೆ ಎಂದು ತಿಳಿದುಬಂದಿದೆ. ಕಳಚಿದ ವಸ್ತು ನೇರವಾಗಿ ಶಾಸಕ ಗಣಿಗ ರವಿಕುಮಾರ್ ಅವರ ತಲೆಯ ಮೇಲೆ ಬಿದ್ದ ಪರಿಣಾಮ ಅವರಿಗೆ ಪೆಟ್ಟಾಗಿದೆ.

ಘಟನೆ ಸಂಭವಿಸುತ್ತಿದ್ದಂತೆ ಕೆಲಕಾಲ ಕಾರ್ಯಕ್ರಮದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.. ತಕ್ಷಣವೇ ಸ್ಥಳದಲ್ಲಿದ್ದ ಕಾರ್ಯಕರ್ತರು ಮತ್ತು ಕಾರ್ಯಕ್ರಮದ ಆಯೋಜಕರು ಗಾಯಗೊಂಡ ಶಾಸಕರ ನೆರವಿಗೆ ಧಾವಿಸಿದರು.

ನಂತರ ಗಣಿಗ ರವಿಕುಮಾರ್ ಅವರನ್ನು ಮಂಡ್ಯ ನಗರದ ಸ್ಪಂದನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ವೈದ್ಯರು ಶಾಸಕರಿಗೆ ಅಗತ್ಯ ವೈದ್ಯಕೀಯ ಪರೀಕ್ಷೆ ಹಾಗೂ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ನಂತರ ಶಾಸಕರ ಆರೋಗ್ಯದ ಕುರಿತು ಮಾಹಿತಿ ಪಡೆಯಲು ಅವರ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಆಸ್ಪತ್ರೆಗೆ ತೆರಳುತ್ತಿದ್ದಾರೆ.

ಗಣೇಶ ಮೂರ್ತಿ ಅನಾವರಣ ವೇಳೆ ಅವಘಡ

ಮರಿಗೌಡ ಬಡಾವಣೆಯ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಬೃಹತ್ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮುನ್ನ ಅನಾವರಣ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಗಣೇಶ ಮೂರ್ತಿಯ ಮುಂಭಾಗದಲ್ಲಿದ್ದ ಸ್ಕ್ರೀನ್‌ ಅನ್ನು ಸರಿಸುವ ಸಂದರ್ಭದಲ್ಲಿ ಅವಘಡ ಸಂಭವಿಸಿದೆ ಎನ್ನಲಾಗಿದೆ. 

ಕಾರ್ಯಕ್ರಮದ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಕಾರ್ಯಕರ್ತರು ಸೇರಿದ್ದ ಹಿನ್ನೆಲೆ ಘಟನೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಆದರೆ ತಕ್ಷಣವೇ ಶಾಸಕರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.

 

Exit mobile version