ಮಗುವನ್ನು ಕೊಲ್ಲಲು ಯತ್ನಿಸಿ ದಂಪತಿ ಆತ್ಮಹ*ತ್ಯೆ: ಸಾವಿನ ದವಡೆಯಿಂದ ಪಾರಾದ ಕಂದಮ್ಮ

ಮಂಡ್ಯ: ಸಂಸಾರ ಅಂದಮೇಲೆ ಸಣ್ಣಪುಟ್ಟ ಜಗಳಗಳು ಸಹಜ. ಆದರೆ ಆ ಕಲಹ ವಿಕೋಪಕ್ಕೆ ಹೋದರೆ ಎಂತಹ ಅನಾಹುತ ಸಂಭವಿಸಬಹುದು ಎಂಬುದಕ್ಕೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ನಡೆದ ಈ ಹೃದಯ ವಿದ್ರಾವಕ ಘಟನೆಯೇ ಸಾಕ್ಷಿ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿಯಿಬ್ಬರು ತಮ್ಮ ಎರಡೂ ವರ್ಷದ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿ, ಬಳಿಕ ತಾವು ನೇಣಿಗೆ ಶರಣಾಗಿದ್ದಾರೆ. ಆದರೆ  ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ.

ನಡೆದಿದ್ದೇನು?

ಮಂಡ್ಯ ಜಿಲ್ಲೆಯ ಹೊಸಕೋಟೆ ಗ್ರಾಮದ ಮೂಲದ ದರ್ಶನ್ ಮತ್ತು ದಿವ್ಯಶ್ರೀ ಕಳೆದ ಮೂರು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಎರಡು ವರ್ಷದ ಒಂದು ಮುದ್ದಾದ ಮಗುವಿತ್ತು. ಕೆ.ಆರ್.ಪೇಟೆಯ ಜಯನಗರ ಬಡಾವಣೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಇವರ ಸಂಸಾರದಲ್ಲಿ ಇತ್ತೀಚೆಗೆ ಬಿರುಕು ಮೂಡಿತ್ತು ಎನ್ನಲಾಗಿದೆ. ಇಂದು (ಮಾರ್ಚ್ 9) ಬೆಳಿಗ್ಗೆ ದಂಪತಿಯ ನಡುವೆ ತೀವ್ರ ಸ್ವರೂಪದ ಕೌಟುಂಬಿಕ ಕಲಹ ಏರ್ಪಟ್ಟಿದೆ.

ಜಗಳದ ನಡುವೆ ಆವೇಶದಲ್ಲಿ ದಂಪತಿಗಳು, ತಾವು ಸಾಯುವುದರ ಜೊತೆಗೆ ಮಗುವನ್ನೂ ಸಾಯಿಸಬೇಕೆಂದು ನಿರ್ಧರಿದ್ದಾರೆ. ಬಳಿಕ ಮಗುವಿನ ಕತ್ತು ಹಿಸುಕಿ ಸಾಯಿಸಲು ಯತ್ನಿಸಿದ್ದಾರೆ. ಮಗು ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿದಾಗ, ಮಗು ಸತ್ತಿದೆ ಎಂದು ಭಾವಿಸಿದ ದಂಪತಿ ತಾವೂ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಂಪತಿ ಶವವಾಗಿ ನೇತಾಡುತ್ತಿದ್ದರೂ, ಕತ್ತು ಹಿಸುಕಲ್ಪಟ್ಟಿದ್ದ ಮಗು ಮಾತ್ರ ಸಾವನ್ನು ಗೆದ್ದು ಬಂದಿದೆ. ಮಗು ಅಸ್ವಸ್ಥಗೊಂಡಿತ್ತಾದರೂ ಅದೃಷ್ಟವಶಾತ್ ಉಸಿರಾಟ ನಿಂತಿರಲಿಲ್ಲ. ಘಟನೆ ಬೆಳಕಿಗೆ ಬಂದ ತಕ್ಷಣ ಸ್ಥಳೀಯರು ಮತ್ತು ಪೊಲೀಸರು ಮಗುವನ್ನು ಗಮನಿಸಿದ್ದು, ಸದ್ಯ ಮಗು ಸುರಕ್ಷಿತವಾಗಿದೆ ಎಂದು ತಿಳಿದುಬಂದಿದೆ.

ಈ ಕೃತ್ಯಕ್ಕೆ ನಿಖರವಾದ ಕಾರಣವೇನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹಣಕಾಸಿನ ತೊಂದರೆಯೋ ಅಥವಾ ದಾಂಪತ್ಯದಲ್ಲಿನ ಮತ್ಯಾವುದೋ ಸಮಸ್ಯೆಯೋ ಎಂಬ ಬಗ್ಗೆ ಕೆ.ಆರ್.ಪೇಟೆ ಟೌನ್ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Exit mobile version