ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಿ ನಿರ್ಧಾರ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

Untitled design 2025 11 27T130818.806

ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಕುರಿತ ರಾಜಕೀಯ ಚರ್ಚೆಗಳು ಮತ್ತಷ್ಟು ತೀವ್ರಗೊಂಡಿವೆ. ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳಿಗೆ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದ ಪ್ರಮುಖ ನಾಲ್ಕು ನಾಯಕರನ್ನು ದೆಹಲಿಗೆ ಕರೆದು, ಹೈಕಮಾಂಡ್‌ನಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಸೂಚಿಸಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ತಂಗಿದ್ದ ಖರ್ಗೆ, ಹಲವು ಪ್ರಮುಖ ರಾಜ್ಯ ನಾಯಕರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಂತ್ರಿಗಳು, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು, ಸಂಘಟನಾ ನಾಯಕರು ಸೇರಿದಂತೆ ಹಲವರಿಂದ ವರದಿ ಪಡೆಯಲಾಗಿದೆ.

ಇಂದು ದೆಹಲಿಗೆ ಪ್ರಯಾಣ ಬೆಳೆಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, “ರಾಜ್ಯ ಕಾಂಗ್ರೆಸ್‌ನ ಒಳಗಿನ ವಿಚಾರಗಳ ಬಗ್ಗೆ ನಾನು ಪ್ರತ್ಯೇಕವಾಗಿ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ನಾವು ಹೈಕಮಾಂಡ್ ಮಟ್ಟದಲ್ಲಿ ಸಭೆ ನಡೆಸಿ ವಿಷಯವನ್ನು ಅಂತಿಮಗೊಳಿಸುತ್ತೇವೆ,” ಎಂದು ಸ್ಪಷ್ಟಪಡಿಸಿದರು.

ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ನಾಲ್ವರು ಪ್ರಮುಖ ನಾಯಕರನ್ನು ದೆಹಲಿಗೆ ಕರೆಸುವ ಬಗ್ಗೆ ಖಚಿತಪಡಿಸಿದರು. “ಸಿಎಂ, ಡಿಸಿಎಂ ಹಾಗೂ ಇನ್ನಿಬ್ಬರು ಪ್ರಮುಖ ನಾಯಕರನ್ನು ದೆಹಲಿಗೆ ಆಹ್ವಾನಿಸಿ, ಎಲ್ಲರ ಒಟ್ಟಿಗೆ  ಸಮಗ್ರ ಚರ್ಚೆ ನಡೆಸುವ ಯೋಜನೆ ಇದೆ. ಎಲ್ಲ ನಾಯಕರ ಮಾತು ಕೇಳಿ, ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ,” ಎಂದರು.

‘ಡಿಕೆಶಿಗೆ ಸಿಎಂ ಸ್ಥಾನ ಕೊಡಬೇಕು’: ಒಕ್ಕಲಿಗ ಸಮುದಾಯದ ಮುಖಂಡರ ಒತ್ತಾಯ

ಬೆಂಗಳೂರು: ಒಕ್ಕಲಿಗ ಸಮುದಾಯದ ಅತಿದೊಡ್ಡ ಸಂಘಟನೆಯಾದ ಕರ್ನಾಟಕ ರಾಜ್ಯ ಒಕ್ಕಲಿಗ ಸಂಘವು ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಮುಂದಿನ ಮುಖ್ಯಮಂತ್ರಿಗಳನ್ನಾಗಿ ಮಾಡಬೇಕೆಂದು ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಾಯಿಸಿದೆ. ಸಂಘದ ನೂತನ ಅಧ್ಯಕ್ಷ ಎಲ್. ಶ್ರೀನಿವಾಸ್ ನೇತೃತ್ವದಲ್ಲಿ ನಡೆದ ಈ ಸುದ್ದಿಗೋಷ್ಠಿಯಲ್ಲಿ ಮಾಜಿ ಅಧ್ಯಕ್ಷ ಕೆಂಚಪ್ಪಗೌಡ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

“2023ರ ವಿಧಾನಸಭಾ ಚುನಾವಣೆಯ ಮೊದಲು ಕಾಂಗ್ರೆಸ್ ಹೈಕಮಾಂಡ್ ಮಾತು ಕೊಟ್ಟಿತ್ತು. ಮೊದಲ 2.5 ವರ್ಷ ಸಿದ್ದ್ದರಾಮಯ್ಯ, ನಂತರದ 2.5 ವರ್ಷ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಎಂದು ಹೇಳಿತ್ತು. ಆ ಮಾತಿನ ಮೇಲೆ ನಂಬಿಕೆ ಇಟ್ಟು ಒಕ್ಕಲಿಗ ಸಮುದಾಯ ತಾಳ್ಮೆಯಿಂದ ಕಾಯುತ್ತಿದೆ. ಆದರೆ ಈಗ ಕೆಲವರು ಆ ಒಡಂಬಡಿಕೆಯನ್ನೇ ಮರೆತಂತೆ ವರ್ತಿಸುತ್ತಿದ್ದಾರೆ” ಎಂದು ಎಲ್‌. ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.

ಡಿಕೆಶಿ ಸಿಎಂ ಆಗುತ್ತಾರೆ ಎಂಬ ನಂಬಿಕೆಯಲ್ಲೇ ಒಕ್ಕಲಿಗರು, ಮೈಸೂರು-ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಪ್ರಮಾಣದಲ್ಲಿ ಮತ ಹಾಕಿದ್ದು ಎಂದು ಮುಖಂಡರು ಹೇಳಿದರು. “ಅವರೇ ರಾಜ್ಯಾದ್ಯಂತ ಸುತ್ತಾಡಿ, ಹಣ ಖರ್ಚು ಮಾಡಿ, ಜಾತಿ-ಧರ್ಮಗಳನ್ನು ಮೀರಿ ಪಕ್ಷ ಕಟ್ಟಿದರು. ಜೈಲಿಗೂ ಹೋಗಿ ಬಂದವರು. ಇಂತಹ ಶಿಸ್ತಿನ ಸಿಪಾಯಿಗೆ ಪಕ್ಷ ಋಣಿ ಆಗಿರಬೇಕು, ಆದ್ರೋಹಿ ಆಗಬಾರದು” ಎಂದು ಅವರು ತಿಳಿಸಿದರು.

ಮಾಜಿ ಅಧ್ಯಕ್ಷ ಕೆಂಚಪ್ಪಗೌಡ ಮಾತನಾಡಿ, “2028ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ ಒಕ್ಕಲಿಗ ಮತಗಳು ಅನಿವಾರ್ಯ. ಆ ಮತಗಳನ್ನು ಒಗ್ಗೂಡಿಸುವ ಏಕೈಕ ನಾಯಕ ಡಿ.ಕೆ. ಶಿವಕುಮಾರ್ ಅವರು. ಇಂದು ಅವರಿಗೆ ಅನ್ಯಾಯ ಮಾಡಿದರೆ ನಾಳೆ ಚುನಾವಣಾ ಫಲಿತಾಂಶದಲ್ಲಿ ಪಕ್ಷಕ್ಕೆ ತಕ್ಕ ಪಾಠ ಸಿಗಲಿದೆ” ಎಂದು ಎಚ್ಚರಿಕೆ ನೀಡಿದರು.

ಅದಮಾರು ಮಠದ ನಿರ್ಮಲಾನಂದನಾಥ ಸ್ವಾಮೀಜಿ ಇತ್ತೀಚೆಗೆ ಡಿಕೆಶಿ ಪರ ಮಾತನಾಡಿದ್ದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಮುಖಂಡರು, “ಶ್ರೀಗಳು ದುಡಿದವನಿಗೆ ಗೌರವ ಕೊಡಿ ಎಂದಿದ್ದಾರೆ. ಅದರಲ್ಲಿ ತಪ್ಪೇನಿದೆ? ಯಾವ ಮಠಾಧೀಶರೂ ಈ ವಿಷಯದಲ್ಲಿ ವಿರೋಧಿಸುವುದು ಸರಿಯಲ್ಲ” ಎಂದರು.

“ಎಲ್ಲಾ ಕಾಂಗ್ರೆಸ್ ಶಾಸಕರಿಗೂ ಕೈಮುಗಿದು ಮನವಿ ಮಾಡುತ್ತಿದ್ದೇವೆ. ನಮ್ಮ ಸಮುದಾಯದ ನಾಯಕನಿಗೆ ಅವಕಾಶ ಕೊಡಿ. ಅವರು ಮುಖ್ಯಮಂತ್ರಿಯಾದರೆ ಮುಂದೆಯೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುತ್ತಾರೆ. ಇಲ್ಲದಿದ್ದರೆ ಸಮುದಾಯ ಮೌನವಾಗಿರುವುದಿಲ್ಲ, ಅಗತ್ಯ ಬಿದ್ದರೆ ಹೋರಾಟಕ್ಕೂ ಇಳಿಯುತ್ತೇವೆ” ಎಂದು ಒಕ್ಕಲಿಗ ಮುಖಂಡರು  ಎಚ್ಚರಿಕೆ ನೀಡಿದ್ದಾರೆ.

Exit mobile version