ಭಾರ ಹೊತ್ತು ಸಾಗಲು ಮಹೇಂದ್ರ ಹಿಂದೇಟು: ತಾಲೀಮು ದಿಢೀರ್ ಸ್ಥಗಿತ!

Untitled design (42)

ಮೈಸೂರು ಅ.08: ಮೈಸೂರು ದಸರಾ ಗಜಪಡೆಯ ತಾಲೀಮು ವೇಳೆ ಭಾರ ಹೊತ್ತು ಸಾಗಲು ಹಿಂದೇಟು ಹಾಕಿದ ಮಹೇಂದ್ರ ಆನೆಗೆ ನೀಡಲಾಗುತ್ತಿದ್ದ ತಾಲೀಮನ್ನು ಅರಣ್ಯ ಇಲಾಖೆ ಸಿಬ್ಬಂದಿ ದಿಢೀರ್ ಸ್ಥಗಿತಗೊಳಿಸಿದ್ದಾರೆ. ಮೈಸೂರಿನ ಸಯ್ಯಾಜಿರಾವ್ ರಸ್ತೆಯ ಆಯುರ್ವೇದ ಆಸ್ಪತ್ರೆ ವೃತ್ತದ ಬಳಿ ಈ ಘಟನೆ ನಡೆದಿದೆ.

ದಸರಾ ಜಂಬೂಸವಾರಿಗೆ ಸಿದ್ಧತೆ ನಡೆಸುತ್ತಿರುವ ಗಜಪಡೆಯ ಆನೆಗಳಿಗೆ ಹಂತ ಹಂತವಾಗಿ ಭಾರ ಹೊರುವ ತಾಲೀಮು ನೀಡಲಾಗುತ್ತಿದೆ. ಅದರಂತೆ ಮಹೇಂದ್ರ ಆನೆಗೂ ಮೂರನೇ ಹಂತದ ತಾಲೀಮು ನಡೆಸಲಾಗುತ್ತಿತ್ತು. ಇಂದು ಗುರುವಾರ ಶೇ.50ರಷ್ಟು ತೂಕವನ್ನು ಹಾಕಿ ಮರದ ಅಂಬಾರಿಯನ್ನು ಹೊರಿಸಿ ತಾಲೀಮು ನಡೆಸುವ ವೇಳೆ ಆಯುರ್ವೇದ ಆಸ್ಪತ್ರೆ ವೃತ್ತದ ಬಳಿ ಮಹೇಂದ್ರ ಮುಂದೆ ಸಾಗಲು ಹಿಂದೇಟು ಹಾಕಿದೆ.

ಭಾರ ಹೊತ್ತು ಸಾಗಲಾಗದೆ ಮಹೇಂದ್ರ ನಿಂತಲ್ಲೇ ನಿಂತಿದ್ದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿ ಆನೆಯ ಮೇಲಿದ್ದ ಮರದ ಅಂಬಾರಿ ಹಾಗೂ ಭಾರದ ಮೂಟೆಗಳನ್ನು ತೆರವುಗೊಳಿಸಿದ್ದಾರೆ. ಬಳಿಕ ಮರದ ಅಂಬಾರಿಯನ್ನು ಲಗೇಜ್ ಆಟೋದಲ್ಲಿ ಅರಮನೆಗೆ ರವಾನಿಸಲಾಗಿದ್ದು, ಮಹೇಂದ್ರ ಸೇರಿದಂತೆ ಗಜಪಡೆಯ ಆನೆಗಳನ್ನು ವಾಪಸ್ ಅರಮನೆಗೆ ಕರೆತರಲಾಯಿತು.

ಈ ಕುರಿತು ಮೈಸೂರಿನಲ್ಲಿ ಮಾಹಿತಿ ನೀಡಿದ ಡಿಸಿಎಫ್ ಪ್ರಭುಗೌಡ ಮಾತನಾಡಿ, ಮಹೇಂದ್ರ ಆನೆಯ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಮಳೆ ಬಂದ ಸಂದರ್ಭದಲ್ಲಿ ಕೂಡ ತಾಲೀಮು ಅರ್ಧಕ್ಕೆ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಭಾರ ಹೊರುವ ತಾಲೀಮು ವೇಳೆ ಮಹೇಂದ್ರ ಮುಂದೆ ಸಾಗಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಅಂಬಾರಿ ಇಳಿಸಿ ಮಹೇಂದ್ರ ಆನೆಗೆ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಮಹೇಂದ್ರ ಈಗಾಗಲೇ ನಾಲ್ಕು ಬಾರಿ ಶ್ರೀರಂಗಪಟ್ಟಣ ದಸರಾ ಅಂಬಾರಿ ಹೊತ್ತಿರುವ ಅನುಭವ ಹೊಂದಿದ್ದಾನೆ. ಆದರೆ ಸದ್ಯ ಭಾರ ಹೊತ್ತು ಸಾಗುವಾಗ ಆಯಾಸದ ಲಕ್ಷಣ ಕಂಡುಬಂದಿದೆ. ಆಯಾಸ ಆದಾಗ ನಾವು ಹೇಗೆ ಒಮ್ಮೆ ನಿಲ್ಲುತ್ತೇವೋ ಹಾಗೆಯೇ ಮಹೇಂದ್ರ ಕೂಡಾ ಒಮ್ಮೇಲೇ ನಿಂತಿದ್ದಾನೆ. ಈ ಹಿನ್ನೆಲೆಯಲ್ಲಿ ಒತ್ತಡ ಹೇರದೆ ವಿಶ್ರಾಂತಿ ನೀಡಲಾಗುತ್ತಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಆನೆಗಳು ಸಂತೋಷದಿಂದ ಹಾಗೂ ಯಾವುದೇ ಆಯಾಸವಿಲ್ಲದೆ ಅಂಬಾರಿ ಹೊರಬೇಕು. ಆನೆಗೆ ಆಯಾಸವಾದರೆ ತಾಲೀಮನ್ನು ನಿಲ್ಲಿಸುವುದು ಸೂಕ್ತ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಳೆ ಸಂದರ್ಭದಲ್ಲಿ ತಾಲೀಮು ಅರ್ಧಕ್ಕೆ ನಿಂತರೆ ಭಾರ ಇಳಿಸಲಾಗುತ್ತದೆ ಎಂಬ ಮನೋಭಾವ ಆನೆಗಳಲ್ಲಿ ಮೂಡುವ ಸಾಧ್ಯತೆಯೂ ಇದೆ ಎಂದು ಪ್ರಭುಗೌಡ ತಿಳಿಸಿದ್ದಾರೆ.

ಸದ್ಯ ಮಹೇಂದ್ರ ಆನೆಗೆ ವಿಶ್ರಾಂತಿ ನೀಡಲಾಗುತ್ತಿದ್ದು, ಅದರ ಆರೋಗ್ಯದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ನಿಗಾ ವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅನುಕೂಲಕರವಾಗಿದ್ದರೆ ಹಂತ ಹಂತವಾಗಿ ಮತ್ತೆ ಭಾರ ಹೊರುವ ತಾಲೀಮು ಮುಂದುವರಿಸುವ ಸಾಧ್ಯತೆ ಇದೆ.

Exit mobile version