ಕಾರವಾರ ಕಡಲತೀರಕ್ಕೆ ಬಂದ 2 ಹೋವರ್‌ಕ್ರಾಫ್ಟ್ ನೌಕೆ

Untitled design (46)

ಭಾರತೀಯ ಕರಾವಳಿ ಕಾವಲು ಪಡೆಯ ಎರಡು ಹೋವರ್‌ಕ್ರಾಫ್ಟ್ ನೌಕೆಗಳು ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ಆಗಮಿಸಿದ್ದು, ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ. ಗೋವಾದಿಂದ ಹೊರಟು ಕಾರವಾರಕ್ಕೆ ಬಂದಿರುವ ಈ ನೌಕೆಗಳು ಸದ್ಯ ಟ್ಯಾಗೋರ್ ಬೀಚ್‌ನಲ್ಲಿ ಲಂಗರು ಹಾಕಿದ್ದು, ವಿಶ್ರಾಂತಿ ಪಡೆಯುತ್ತಿವೆ.

ಹೋವರ್‌ಕ್ರಾಫ್ಟ್ ನೌಕೆಯ ವಿಶೇಷತೆ ಎಂದರೆ ನೀರು ಮಾತ್ರವಲ್ಲದೆ ಭೂಮಿ, ಮರಳು ಹಾಗೂ ಕೆಸರಿನ ಮೇಲೆಯೂ ಸಂಚರಿಸುವ ಸಾಮರ್ಥ್ಯ ಹೊಂದಿರುವುದು. ಅತ್ಯಂತ ವೇಗವಾಗಿ ಚಲಿಸಬಲ್ಲ ಈ ನೌಕೆಗಳು ಸಾಂಪ್ರದಾಯಿಕ ಹಡಗುಗಳು ಸಂಚರಿಸಲು ಕಷ್ಟವಾಗುವಂತಹ ಆಳವಿಲ್ಲದ ಸಮುದ್ರ ಪ್ರದೇಶಗಳಲ್ಲೂ ಕಾರ್ಯಾಚರಣೆ ನಡೆಸಬಲ್ಲವು.

ಕರಾವಳಿ ಕಾವಲು ಪಡೆಯ ಕಾರ್ಯಾಚರಣೆಯಲ್ಲಿ ಇಂತಹ ನೌಕೆಗಳು ಮಹತ್ವದ ಪಾತ್ರ ವಹಿಸುತ್ತವೆ. ವಿಶೇಷವಾಗಿ ಆಳ ಕಡಿಮೆ ಇರುವ ಕರಾವಳಿ ಪ್ರದೇಶಗಳು, ಮರಳು ಪ್ರದೇಶಗಳು ಹಾಗೂ ಕೆಸರಿನ ಪ್ರದೇಶಗಳಲ್ಲಿ ತ್ವರಿತವಾಗಿ ಸಂಚರಿಸುವ ಸಾಮರ್ಥ್ಯದಿಂದಾಗಿ ಇವುಗಳನ್ನು ರಕ್ಷಣಾ ಹಾಗೂ ಗಸ್ತು ಕಾರ್ಯಗಳಿಗೆ ಬಳಸಲಾಗುತ್ತದೆ.

ಇದೀಗ ಎರಡು ಹೋವರ್‌ಕ್ರಾಫ್ಟ್ ನೌಕೆಗಳು ಕಾರವಾರದ ಟ್ಯಾಗೋರ್ ಬೀಚ್‌ನಲ್ಲಿ ಲಂಗರು ಹಾಕಿರುವುದು ಸಾರ್ವಜನಿಕರ ಗಮನ ಸೆಳೆದಿದೆ. ನೌಕೆಗಳನ್ನು ನೋಡಲು ಸ್ಥಳೀಯರು ಹಾಗೂ ಕಡಲತೀರಕ್ಕೆ ಆಗಮಿಸುವ ಪ್ರವಾಸಿಗರು ಆಸಕ್ತಿ ತೋರುತ್ತಿದ್ದಾರೆ.

ಆದರೆ ಇದೇ ವೇಳೆ ಹೋವರ್‌ಕ್ರಾಫ್ಟ್ ನೌಕೆಗಳ ನಿಲುಗಡೆ ವಿಚಾರ ಸ್ಥಳೀಯ ಮೀನುಗಾರರಲ್ಲಿ ಆತಂಕಕ್ಕೂ ಕಾರಣವಾಗಿದೆ. ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಭಾಗದಲ್ಲಿ ಹೋವರ್‌ಕ್ರಾಫ್ಟ್ ನೌಕೆಗಳನ್ನು ನಿಲುಗಡೆ ಮಾಡಲು ಭಾರತೀಯ ಕರಾವಳಿ ಕಾವಲು ಪಡೆಯಿಂದ ಸ್ಥಳ ಕೇಳಲಾಗಿತ್ತು. ಇದಕ್ಕೆ ಸ್ಥಳೀಯ ಮೀನುಗಾರರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು.

ಮೀನುಗಾರರ ವಿರೋಧದ ನಡುವೆಯೇ ಇದೀಗ ಎರಡು ಹೋವರ್‌ಕ್ರಾಫ್ಟ್ ನೌಕೆಗಳು ಕಡಲತೀರದಲ್ಲಿ ಲಂಗರು ಹಾಕಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಒಂದೆಡೆ ವಿಶಿಷ್ಟ ತಂತ್ರಜ್ಞಾನ ಹೊಂದಿರುವ ನೌಕೆಗಳನ್ನು ಕಂಡು ಸಾರ್ವಜನಿಕರಲ್ಲಿ ಕುತೂಹಲ ಮೂಡಿದ್ದರೆ, ಮತ್ತೊಂದೆಡೆ ತಮ್ಮ ಮೀನುಗಾರಿಕೆ ಚಟುವಟಿಕೆಗಳ ಮೇಲೆ ಪರಿಣಾಮ ಬೀರಬಹುದೆಂಬ ಆತಂಕವನ್ನು ಮೀನುಗಾರರು ವ್ಯಕ್ತಪಡಿಸುತ್ತಿದ್ದಾರೆ.

ಹೀಗಾಗಿ ಕಾರವಾರದ ಟ್ಯಾಗೋರ್ ಬೀಚ್‌ನಲ್ಲಿ ಹೋವರ್‌ಕ್ರಾಫ್ಟ್ ನೌಕೆಗಳ ಆಗಮನ ಇದೀಗ ಕುತೂಹಲದ ಜೊತೆಗೆ ಸ್ಥಳೀಯ ಮೀನುಗಾರರ ಆತಂಕಕ್ಕೂ ಕಾರಣವಾಗಿದೆ.

Exit mobile version