ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಸಮೀಪದ ಸಿಂಕೋನ ಪ್ರದೇಶದಲ್ಲಿ ಒಂದು ಹೃದಯವಿದ್ರಾವಕ ಘಟನೆ ನಡೆದಿದೆ. ತನ್ನ ಪತ್ನಿಗೆ ವೀಡಿಯೋ ಕಾಲ್ ಮಾಡಿ, ಲೈವ್‌ನಲ್ಲೇ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಸಂಗತಿ ಬೆಳಕಿಗೆ ಬಂದಿದೆ. ಈ ಘಟನೆ ಸೋಮವಾರಪೇಟೆ ತಾಲೂಕಿನ ಕಿಬ್ಬೆಟ್ಟ ಗ್ರಾಮದ ನಿವಾಸಿ ಕೀರ್ತನ್ (ವಯಸ್ಸು 36) ಅವರಿಗೆ ಸಂಬಂಧಿಸಿದ್ದು, ನವೆಂಬರ್ 15ರ ಸಂಜೆ ನಡೆದಿದೆ. ಇಂದು (ನವೆಂಬರ್ 16) ಬೆಳಿಗ್ಗೆ ಮೃತದೇಹ ಪತ್ತೆಯಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೀರ್ತನ್ ಅವರು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರಿಂದ ಜೈಲು ಪಾಲಾಗಿದ್ದರು. ಇತ್ತೀಚೆಗಷ್ಟೇ ಅವರು ಜಾಮೀನು ಪಡೆದು ಬಿಡುಗಡೆ ಹೊಂದಿದ್ದರು. ಪತಿ ಜೈಲಿಗೆ ಹೋದ ಸಂದರ್ಭದಲ್ಲಿ, ಅವರ ಪತ್ನಿ ಜ್ಯೋತಿ ಅವರು ತವರು ಮನೆಗೆ ತೆರಳಿ ವಾಸಿಸುತ್ತಿದ್ದರು. ಜೈಲಿನಿಂದ ಹೊರಬಂದ ನಂತರ ಕೀರ್ತನ್ ಅವರು ತಮ್ಮ ಜೀವನವನ್ನು ಸರಿದಾರಿಗೆ ತರುವ ಪ್ರಯತ್ನ ಮಾಡುತ್ತಿದ್ದರು. ಆದರೆ, ಕುಟುಂಬದಲ್ಲಿ ಉದ್ಭವಿಸಿದ್ದ ಭಿನ್ನಾಭಿಪ್ರಾಯಗಳು ಈ ದುರಂತಕ್ಕೆ ಕಾರಣವಾಗಿದೆ.
ನವೆಂಬರ್ 15ರ ಸಂಜೆ, ಕೀರ್ತನ್ ಅವರು ಪತ್ನಿ ಜ್ಯೋತಿಯನ್ನು ತಮ್ಮ ಮನೆಗೆ ಕರೆದೊಯ್ಯಲು ತವರು ಮನೆಗೆ ತೆರಳಿದ್ದರು. ಆದರೆ, ಎಷ್ಟೇ ಕರೆದರೂ ಜ್ಯೋತಿ ಅವರು ಬರುವುದಕ್ಕೆ ನಿರಾಕರಿಸಿದ್ದರು. ಈ ನಿರಾಕರಣೆಯಿಂದ ಮನನೊಂದ ಕೀರ್ತನ್ ಅವರು ಆಘಾತಕ್ಕೊಳಗಾಗಿದ್ದರು. ತಕ್ಷಣವೇ ಅವರು ಪತ್ನಿಗೆ ವೀಡಿಯೋ ಕಾಲ್ ಮಾಡಿ, ಲೈವ್‌ನಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಹೆಂಡತಿ ಅದಕ್ಕೂ ಕೇರ್ ಮಾಡದನ್ನ ನೋಡಿ ಸ್ಥಳದಲ್ಲೇ ನೇಣಿಗೆ ಶರಣಾಗಿದ್ದಾರೆ.
ಕೀರ್ತನ್ ಹಿಂದೆಯೂ ಸಾಕಷ್ಟು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಇದನ್ನು ಗಂಭೀರವಾಗಿ ಪರಿಗಣಿಸದೇ, ಕೇವಲ ಭಾವನಾತ್ಮಕ ಒತ್ತಡದಿಂದ ಹೊರಬಂದ ಮಾತುಗಳೆಂದುಕೊಂಡಿದ್ದರು. ಆದರೆ, ಈ ಬಾರಿ ಪರಿಸ್ಥಿತಿ ತೀವ್ರಗೊಂಡಿತು. ವೀಡಿಯೋ ಕಾಲ್‌ನಲ್ಲಿ ಪತ್ನಿ ಮುಂದೆಯೇ ಅವರು ನಣಿಗೆ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ಈ ದೃಶ್ಯವು ಪತ್ನಿ ಜ್ಯೋತಿ ಅವರನ್ನು ಆಘಾತಕ್ಕೊಳಪಡಿಸಿದೆ. ತಕ್ಷಣವೇ ಅವರು ಸ್ಥಳೀಯರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇಂದು ಬೆಳಿಗ್ಗೆ ಸಿಂಕೋನ ಪ್ರದೇಶದಲ್ಲಿ ಕೀರ್ತನ್ ಅವರ ಮೃತದೇಹ ಪತ್ತೆಯಾಗಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಆವರಣದಲ್ಲಿ ಈ ಪ್ರಕರಣ ದಾಖಲಾಗಿದ್ದು, ಇನ್ಸ್‌ಪೆಕ್ಟರ್ ಮತ್ತು ತಂಡವು ಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಪೊಲೀಸರು ಪತ್ನಿ ಜ್ಯೋತಿ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
