ಮಂಡ್ಯ: ಮದ್ದೂರು ನಗರವು ಇಂದು (ಶನಿವಾರ) ಒಂದು ಬೃಹತ್ ಗಣೇಶ ವಿಸರ್ಜನಾ ಮೆರವಣಿಗೆ ನಡೆಯಲಿದೆ. ನಗರದಲ್ಲಿ ಸುಮಾರು 28ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಒಂದುಗೂಡಿಸಿ ನಡೆಸಲಾಗುವ ಶೋಭಾಯಾತ್ರೆಗೆ 20,000ಕ್ಕೂ ಅಧಿಕ ಭಕ್ತರು ಮತ್ತು ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆಯಿದ್ದು, ಶಾಂತಿ, ಭದ್ರತೆ ಖಚಿತಪಡಿಸಲು ಪೊಲೀಸ್ ಇಲಾಖೆಯು ಅತ್ಯುನ್ನತ ಮಟ್ಟದ ಕಟ್ಟೆಚ್ಚರಿಕೆ ಕ್ರಮಗಳನ್ನು ಜಾರಿಗೆ ತಂದಿದೆ.
ಬೆಳಗ್ಗೆ 10:30ಕ್ಕೆ ಮದ್ದೂರಿನ ಕಾಶಿ ವಿಶ್ವಾನಾಥ ದೇವಸ್ಥಾನದಿಂದ ಆರಂಭವಾಗುವ ಈ ಮೆರವಣಿಗೆ, ಮೂರು ಕಿಲೋಮೀಟರ್‌ಗೂ ಹೆಚ್ಚು ದೂರ ಸಾಗಿ, ಶಿಂಷಾ ನದಿಯ ತೀರದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಯೊಂದಿಗೆ ಸಂಪೂರ್ಣಗೊಳ್ಳಲಿದೆ.
ಈ ಶೋಭಾಯಾತ್ರೆಯಲ್ಲಿ ಬಿಜೆಪಿ-ಜೆಡಿಎಸ್‌ನ ಪ್ರಮುಖ ನಾಯಕರಾದ ವಿಜಯೇಂದ್ರ, ಆರ್. ಅಶೋಕ್, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. 28ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಒಳಗೊಂಡ ಈ ಮೆರವಣಿಗೆ, ಹೊಳೆಬೀದಿ, ಪೇಟೇಬೀದಿ, ಟಿಬಿ ಸರ್ಕಲ್, ಮತ್ತು ಹಳೆ ಬೆಂಗಳೂರು-ಮೈಸೂರು ರಸ್ತೆಯ ಮೂಲಕ ಸಾಗಿ, ಕೊಲ್ಲಿ ಸರ್ಕಲ್‌ನಲ್ಲಿ ಕೊನೆಗೊಳ್ಳಲಿದೆ. ಅಂತಿಮವಾಗಿ, ಹೊಳೆ ಆಂಜನೇಯ ದೇವಾಲಯದ ಬಳಿಯ ಶಿಂಷಾ ನದಿಯಲ್ಲಿ ಗಣಪತಿಯ ವಿದಾಯ ನಡೆಯಲಿದೆ.
ಈ ಕಾರ್ಯಕ್ರಮದ ಸುರಕ್ಷತೆಗಾಗಿ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಲಾಗಿದೆ. 1,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಶೋಭಾಯಾತ್ರೆಯ ಮಾರ್ಗದುದ್ದಕ್ಕೂ ಡ್ರೋಣ್ ಕಣ್ಗಾವಲು ಇರಲಿದೆ. ಈ ಘಟನೆಯ ಸಂದರ್ಭದಲ್ಲಿ ಮದ್ದೂರು, ಮಳವಳ್ಳಿ, ಮತ್ತು ಮಂಡ್ಯ ತಾಲೂಕುಗಳಲ್ಲಿ ಮದ್ಯ ಮಾರಾಟ ಮತ್ತು ಸಾಗಾಣಿಕೆಗೆ ನಿಷೇಧ ಹೇರಲಾಗಿದೆ. ಇದರಿಂದಾಗಿ, ಪಟ್ಟಣದಲ್ಲಿ ಶಾಂತಿಯುತ ವಾತಾವರಣವನ್ನು ಕಾಪಾಡಲು ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.
