ಬೆಂಗಳೂರು: ಕರ್ನಾಟಕ ಸರ್ಕಾರದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ವೈಯಕ್ತಿಕ ಸಹಾಯಕ (ಪಿಎ) ಸರ್ದಾರ್ ಸರ್ಫರಾಜ್ ಖಾನ್ ಅವರ ನಿವಾಸದ ಮೇಲೆ ಲೋಕಾಯುಕ್ತ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸರ್ಫರಾಜ್ ಖಾನ್ ಅವರ ಮನೆ ಸೇರಿದಂತೆ ಒಟ್ಟು 13 ಸ್ಥಳಗಳಲ್ಲಿ ನಡೆದ ಏಕಕಾಲಿಕ ದಾಳಿಯ ಬಳಿಕ, ಸುಮಾರು 14.38 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಲೋಕಾಯುಕ್ತ ಮೂಲಗಳ ಪ್ರಕಾರ, ಸರ್ಫರಾಜ್ ಖಾನ್ ಅವರು ತಮ್ಮ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅವರಿಗೆ ಸಂಬಂಧಿಸಿದ ಮನೆ, ಕಚೇರಿ ಹಾಗೂ ಸಂಬಂಧಿಕರ ಆಸ್ತಿಗಳ ಮೇಲೆ ಪರಿಶೀಲನೆ ನಡೆಸಲಾಗಿದ್ದು, ದೊಡ್ಡ ಪ್ರಮಾಣದ ಸ್ಥಿರ ಹಾಗೂ ಚರಾಸ್ತಿ ದಾಖಲೆಗಳು ವಶಪಡಿಸಿಕೊಳ್ಳಲಾಗಿದೆ.
ದಾಳಿಯ ವೇಳೆ ಪತ್ತೆಯಾಗಿರುವ ಆಸ್ತಿಗಳ ವಿವರಗಳು ಅಚ್ಚರಿ ಮೂಡಿದ್ದು, ಸರ್ಫರಾಜ್ ಖಾನ್ ಬಳಿ 8.44 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. ಇದರಲ್ಲಿ ನಾಲ್ಕು ವಾಸದ ಮನೆಗಳು ಹಾಗೂ 35 ಎಕರೆ ಕೃಷಿ ಜಮೀನಿನ ದಾಖಲೆಗಳು ಸೇರಿವೆ. ಈ ಜಮೀನಿನ ಹೂಡಿಕೆ ಹಾಗೂ ಖರೀದಿ ಸಂಬಂಧಿತ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಇದರ ಜೊತೆಗೆ, 5.93 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಕೂಡ ಪತ್ತೆಯಾಗಿದೆ. ಇದರಲ್ಲಿ 66,500 ನಗದು, ಸುಮಾರು 2.99 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಮತ್ತು 1.29 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಠೇವಣಿ (FD)ಗಳು ಸೇರಿವೆ. ಈ ಎಲ್ಲ ಆಸ್ತಿಗಳ ಮೂಲದ ಬಗ್ಗೆ ಸರ್ಫರಾಜ್ ಖಾನ್ ಸ್ಪಷ್ಟನೆ ನೀಡಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ದಾಳಿ ವೇಳೆ ಲಭ್ಯವಾದ ದಾಖಲೆಗಳು, ಬ್ಯಾಂಕ್ ಖಾತೆಗಳ ವಿವರಗಳು, ಆಸ್ತಿ ಖರೀದಿ ಪತ್ರಗಳು ಹಾಗೂ ಇತರ ಹಣಕಾಸು ವ್ಯವಹಾರಗಳ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಈ ದಾಖಲೆಗಳನ್ನು ಆಧರಿಸಿ ಮುಂದಿನ ತನಿಖೆ ನಡೆಸಲಾಗುತ್ತದೆ. ಅಗತ್ಯವಿದ್ದಲ್ಲಿ ಸರ್ಫರಾಜ್ ಖಾನ್ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯೂ ಇದೆ.
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಸಹಾಯಕನ ಮೇಲೆ ಇಷ್ಟೊಂದು ದೊಡ್ಡ ಮಟ್ಟದ ಅಕ್ರಮ ಆಸ್ತಿ ಆರೋಪ ಕೇಳಿಬಂದಿರುವುದು ಸರ್ಕಾರಕ್ಕೆ ಮುಜುಗರ ಉಂಟುಮಾಡಿದೆ.
