ಕಲಬುರಗಿ: ಕಲಬುರಗಿಯಲ್ಲಿ ಲೋಕಾಯುಕ್ತ (Lokayukta) ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಲಂಚ ಪಡೆಯುತ್ತಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ರೆಡ್ ಹ್ಯಾಂಡ್ ಹಿಡಿದು ವಶಕ್ಕೆ ಪಡೆದಿದ್ದಾರೆ. ಈ ಕಾರ್ಯಾಚರಣೆಯನ್ನು ಕರ್ನಾಟಕ ಲೋಕಾಯುಕ್ತ ಎಸ್‌ಪಿ ಸಿದ್ಧರಾಜು ಸಿ. ಅವರ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಅರುಣ್ ಕುಮಾರ್ ಮುರುಗುಂಡಿ ಅವರ ತಂಡ ಯಶಸ್ವಿಯಾಗಿ ನಡೆಸಿದೆ.
ಪೋಕ್ಸೊ (POCSO) ಪ್ರಕರಣವೊಂದರಲ್ಲಿ ಸಂತ್ರಸ್ತೆಗೆ ನೆರವು ನೀಡುವ ನೆಪದಲ್ಲಿ ಹಣ ವಸೂಲಿ ಮಾಡುತ್ತಿದ್ದ ಸ್ಟೇಷನ್ ಬಜಾರ್ ಠಾಣೆಯ ಎಎಸ್ಐ ಶಿವಶರಣಪ್ಪ ಮತ್ತು ಮಹಿಳಾ ಪಿಸಿ ಜ್ಯೋತಿ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ರೋಹಿಣಿ ಎಂಬ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತ ತಂಡ ಕಾರ್ಯಾಚರಣೆಗೆ ಮುಂದಾಗಿದೆ. ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪೋಕ್ಸೊ ಪ್ರಕರಣದಲ್ಲಿ ನೆರವು ನೀಡುವ ನೆಪದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಲಂಚಕ್ಕಾಗಿ ಒತ್ತಡ ಹಾಕುತ್ತಿದ್ದರೆಂದು ಆರೋಪಿಸಲಾಗಿದೆ.
ಆರೋಪಿತರಾದ ಎಎಸ್‌ಐ ಶಿವಶರಣಪ್ಪ ಹಾಗೂ ಮಹಿಳಾ ಪೊಲೀಸ್ ಕಾನ್ಸಟೇಬಲ್ ಜ್ಯೋತಿ ಅವರು ಪ್ರಕರಣದ ಚಾರ್ಜ್‌ಶೀಟ್ ಸಿದ್ಧಪಡಿಸುವಾಗ “ನಿಮ್ಮ ಪರವಾಗಿ ಪ್ರಕರಣ ನಿರ್ವಹಣೆ ಮಾಡಿಸುತ್ತೇವೆ” ಎಂಬ ನೆಪದಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ. ಈ ಇಬ್ಬರು ಸಿಬ್ಬಂದಿ ಸಾವಿರ ರೂಪಾಯಿ ಮುಂಗಡವಾಗಿ ಪಡೆದಿದ್ದರು ಎನ್ನಲಾಗಿದ್ದು, ನಂತರ ಹೆಚ್ಚುವರಿ ಹಣಕ್ಕಾಗಿ ಒತ್ತಡ ಹಾಕಿದ್ದಾರೆ.
ಲಂಚದ ಮೊತ್ತವಾಗಿ ಸುಮಾರು ಹತ್ತು ಸಾವಿರ ರೂಪಾಯಿಯನ್ನು ನೀಡಲು ಸಂತ್ರಸ್ತೆಯನ್ನು ಒತ್ತಾಯಿಸಲಾಗಿತ್ತು. ಹಣ ನೀಡುವ ಬಗ್ಗೆ ನಡೆದ ಸಂವಹನವನ್ನು ಲೋಕಾಯುಕ್ತ ಅಧಿಕಾರಿಗಳು ತಾಂತ್ರಿಕ ಹಾಗೂ ಗುಪ್ತ ಮಾಹಿತಿ ಆಧಾರದ ಮೇಲೆ ಟ್ರ್ಯಾಕ್ ಮಾಡಿದ್ದಾರೆ. ನಂತರ ನಿರ್ದಿಷ್ಟ ಯೋಜನೆಯಂತೆ ಸ್ಟಿಂಗ್ ಆಪರೇಷನ್ ನಡೆಸಲಾಗಿದೆ.
ನಿಗದಿತ ಸ್ಥಳದಲ್ಲಿ ಸಂತ್ರಸ್ತೆಯಿಂದ ಹಣ ಸ್ವೀಕರಿಸುತ್ತಿದ್ದ ಕ್ಷಣದಲ್ಲಿ ಲೋಕಾಯುಕ್ತ ತಂಡ ದಾಳಿ ನಡೆಸಿದೆ. ದಾಳಿಯ ಸಂದರ್ಭದಲ್ಲಿ ಮಹಿಳಾ ಕಾನ್ಸಟೇಬಲ್ ಜ್ಯೋತಿ ಅವರನ್ನು ಸ್ಥಳದಲ್ಲೇ ವಶಕ್ಕೆ ಪಡೆಯಲಾಗಿದೆ. ಆದರೆ ಎಎಸ್‌ಐ ಶಿವಶರಣಪ್ಪ ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ. ಆತನಿಗಾಗಿ ಅಧಿಕಾರಿಗಳು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.
ದಾಳಿಯ ನಂತರ ವಶಕ್ಕೆ ಪಡೆದಿರುವ ಪೊಲೀಸ್ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.. ಆರೋಪ ಸಾಬೀತಾದರೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
