ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಶುಭ ದಿನದಂದೇ ತವರಿಗೆ ತೆರಳುತ್ತಿದ್ದ ನವವಿವಾಹಿತೆಯೊಬ್ಬರು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಲಗ್ಗೆರೆ ಬ್ರಿಡ್ಜ್ ಬಳಿ ನಡೆದಿದೆ. ಮೃತ ಮಹಿಳೆಯನ್ನು ಮಲ್ಲೇಶ್ವರಂ ನಿವಾಸಿಯಾದ 23 ವರ್ಷದ ಗೀತಾ ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಗೀತಾ ಅವರ ಪತಿ ಸುನಿಲ್‌ಗೂ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗೀತಾ ಮತ್ತು ಸುನಿಲ್ ದಂಪತಿಗಳು ಕಳೆದ ಮೂರು ತಿಂಗಲುಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ಕುಂಕುಮಕ್ಕಾಗಿ ಸುನಿಲ್‌ರವರ ಅಕ್ಕನ ಮನೆಗೆ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಬೈಕ್‌ನಲ್ಲಿ ತೆರಳುತ್ತಿದ್ದಾಗ ಲಗ್ಗೆರೆ ಬ್ರಿಡ್ಜ್ ಬಳಿ ಲಾರಿಗೆ ಡಿಕ್ಕಿಯಾಗಿದೆ. ಇದರಿಂದ ಗೀತಾ ಅವರ ತಲೆಗೆ ಭಾರೀ ಪೆಟ್ಟಾಗಿ, ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುನಿಲ್‌ಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಸ್ಥಳದಲ್ಲಿ ಗೀತಾ ಅವರ ದೇಹವನ್ನು ತೊಡೆಯ ಮೇಲಿಟ್ಟುಕೊಂಡು ಸುನಿಲ್ ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ಹೃದಯ ವಿದ್ರಾವಕವಾಗಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗೀತಾ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ತನ್ನ ಪತ್ನಿಯನ್ನು ಕಳೆದುಕೊಂಡ ಸುನಿಲ್ ಆಘಾತದಿಂದ ಕುಸಿದುಬಿದ್ದಿದ್ದಾರೆ.
ಪೊಲೀಸರು ಘಟನೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಅಪಘಾತಕ್ಕೆ ಕಾರಣವಾದ ಲಾರಿ ಚಾಲಕ ಸುರೇಶ್‌ನನ್ನು ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದೆ.