ಕೆಆರ್ ಪುರಂ ತ್ರಿವಳಿ ಹತ್ಯೆ ಪ್ರಕರಣ: ಆರೋಪಿ ಶ್ವೇತಾ ಅರೆಸ್ಟ್

Web Photo Editor (32)

ಬೆಂಗಳೂರು: ಕೆಆರ್ ಪುರಂ ತ್ರಿಬಲ್ ಮರ್ಡರ್ ಪ್ರಕರಣದ ಪ್ರಮುಖ ಆರೋಪಿ ಶ್ವೇತಾಳನ್ನು ಪುದುಚೇರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ತಂದೆ, ತಾಯಿ ಮತ್ತು ತಂಗಿಯನ್ನು ಕೊಲೆ ಮಾಡಿದ ಬಳಿಕ ಶ್ವೇತಾ ತನ್ನ ಪ್ರಿಯಕರ ಕೆನತ್ ಜೊತೆ ತಲೆಮರೆಸಿಕೊಂಡಿದ್ದಳು. ಆಕೆಯ ಬಂಧನದ ಬಳಿಕ ಇನ್ನೋರ್ವ ಆರೋಪಿ ಕೆನತ್ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಕಳೆದ ಎರಡು ದಿನಗಳಿಂದ ಶ್ವೇತಾ ಮತ್ತು ಕೆನತ್ ಒಂದು ಕಡೆ ನಿಲ್ಲದೇ ಸಂಚರಿಸುತ್ತಿದ್ದರು. ಈ ಇಬ್ಬರ ಪತ್ತೆಗಾಗಿ ವೈಟ್ಫೀಲ್ಡ್ ವಿಭಾಗದ ಆರು ವಿಶೇಷ ಪೊಲೀಸ್ ತಂಡಗಳು ಕಾರ್ಯಾಚರಣೆ ನಡೆಸಿದ್ದವು. ಈಗ ಶ್ವೇತಾ ಪೊಲೀಸರ ವಶಕ್ಕೆ ಸಿಕ್ಕಿದ್ದು, ಕೆನತ್ ಪತ್ತೆಗೆ ಬಲೆ ಬೀಸಲಾಗಿದೆ.

ಶ್ವೇತಾ ಹಾಗೂ ಕೆನತ್ ನ್ಯೂ ಹರಿಜನ್ ಕಾಲೇಜ್ ನಲ್ಲಿ ಬಿ.ಟೆಕ್ ಓದುವಾಗ ಪ್ರೇಮಾಂಕುರವಾಗಿತ್ತು. ಬಿ.ಟೆಕ್ ಮುಗಿಸಿದ ಬಳಿಕ ಇಬ್ಬರು ಕೆಲಸಕ್ಕೆ ಸೇರಿ ಲಿವ್-ಇನ್ ಸಂಬಂಧದಲ್ಲಿದ್ದರು. ಆದರೆ ಕೆಲವು ಕಾರಣಗಳಿಂದ ಇಬ್ಬರೂ ಕೆಲಸ ಬಿಟ್ಟಿದ್ದರು. ಸ್ವಂತ ಉದ್ಯಮ ಪ್ರಾರಂಭಿಸುವ ಯೋಜನೆಯಲ್ಲಿ, ಶ್ವೇತಾ ಪೋಷಕರ ಹೆಸರಿನಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್ ನಿಂದ ₹30 ಲಕ್ಷ ಸಾಲ ಪಡೆದಿದ್ದರು. ಆದರೆ ಬಡ್ಡಿ ಸೇರಿದಂತೆ ಯಾವುದೇ ಮರುಪಾವತಿ ಮಾಡದ ಕಾರಣ ಬ್ಯಾಂಕ್ ನಿಂದ ಪೋಷಕರಿಗೆ ನೋಟಿಸ್ ಕಳುಹಿಸಲಾಗಿತ್ತು. ಆ ತನಕ ಸಾಲದ ವಿಚಾರ ಪೋಷಕರಿಗೆ ಗೊತ್ತಿರಲಿಲ್ಲ. ನೋಟಿಸ್ ಬಂದ ಬಳಿಕ ವಿಷಯ ತಿಳಿದು ಪೋಷಕರು ಮನೆಗೆ ಆಗಮಿಸಿ ಶ್ವೇತಾಳನ್ನು ಪ್ರಶ್ನಿಸಿದ್ದರು.

ಇನ್ನು, ಆರೋಪಿ ಕೆನತ್ ಪೋಷಕರಿಗೆ ಅವರ ಲಿವ್-ಇನ್ ಸಂಬಂಧದ ವಿಚಾರ ತಿಳಿದಿರಲಿಲ್ಲ. ಕೆನತ್ ತಂದೆ ಎಚ್ಎಎಲ್ ಉದ್ಯೋಗಿಯಾಗಿದ್ದಾರೆ. ಪೋಷಕರಿಂದ ಸಹಕಾರ ಸಿಗದೇ ಇದ್ದ ಕಾರಣಕ್ಕೆ ಕೆನತ್ ಅಸಮಾಧಾನಗೊಂಡಿದ್ದ ಎಂದು ಹೇಳಲಾಗುತ್ತಿದೆ. ಮಂಗಳವಾರ ಈ ಸಾಲದ ಬಗ್ಗೆಯೇ ಗಲಾಟೆ ನಡೆದು ನಂತರ ಹತ್ಯೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ವ್ಯಕ್ತವಾಗಿದೆ. ಮೂವರಿಗೂ ಆರೋಪಿಗಳು ಸುಮಾರು 30 ಬಾರಿ ಚುಚ್ಚಿದ್ದು, ಇದು ಪೂರ್ವ ಯೋಜಿತ ಕೊಲೆ ಎಂಬ ಶಂಕೆ ಬಲಗೊಂಡಿದೆ.

ತಂದೆ-ತಾಯಿ-ತಂಗಿಯನ್ನು ಕೊಲೆ ಮಾಡಿ ಪ್ರಿಯಕರನ ಜೊತೆ ಪರಾರಿಯಾಗಿದ್ದ ಶ್ವೇತಾಳನ್ನು ಈಗ ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಕೆನತ್ ಪತ್ತೆಗೆ ಶೋಧ ಕಾರ್ಯ ಮುಂದುವರೆದಿದೆ.

ಈ ಭೀಕರ ಕೃತ್ಯದ ಹಿಂದಿನ ನಿಜವಾದ ಕಾರಣವೇನು?

“ನನ್ನ ತಾಯಿಯೇ ನನ್ನ ಜೀವನವನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಿದ್ದರು. ನಾನು ಯಾವ ಕೆಲಸ ಮಾಡಿದರೂ, ಯಾವ ನಿರ್ಧಾರ ತೆಗೆದುಕೊಂಡರೂ ಅವರು ನನಗೆ ಸ್ವಾತಂತ್ರ್ಯವನ್ನು ನೀಡುತ್ತಿರಲಿಲ್ಲ. ಪ್ರತಿಯೊಂದು ವಿಷಯದಲ್ಲೂ ಅವರ ಹಸ್ತಕ್ಷೇಪವಿತ್ತು. ಅವರ ನಿಯಂತ್ರಣವೇ ನನ್ನ ಬದುಕನ್ನು ಹಾಳುಮಾಡಿತು. ಹೀಗಾಗಿಯೇ ನಾನು ನನ್ನ ತಾಯಿಯನ್ನು ಕೊಲೆ ಮಾಡಿದೆ” ಎಂದು ಆರೋಪಿ ಶ್ವೇತಾ ತನ್ನ ವಿಚಾರಣೆಯ ವೇಳೆ ಹೇಳಿದ್ದಾಳೆ.

Exit mobile version