ಹಬ್ಬದ ಸಂಭ್ರಮ: ಕೆಆರ್ ಮಾರ್ಕೆಟ್‌ನಲ್ಲಿ ಹೂವು-ಹಣ್ಣು ಖರೀದಿಗೆ ಮುಗಿಬಿದ್ದ ಜನ!

ಯ್ಯ (1)

ಹಬ್ಬದ ಸಂಭ್ರಮಕ್ಕೆ ಸಿಲಿಕಾನ್ ಸಿಟಿ ಸಜ್ಜಾಗುತ್ತಿದ್ದು, ಹಬ್ಬದ ಖರೀದಿಗಾಗಿ ಬೆಂಗಳೂರಿನ ಕೆಆರ್ ಮಾರ್ಕೆಟ್‌ನಲ್ಲಿ ಜನಸಾಗರವೇ ಹರಿದುಬಂದಿದೆ. ಬೆಳಗ್ಗೆಯಿಂದಲೇ ಸಾವಿರಾರು ಜನರು ಮಾರುಕಟ್ಟೆಗೆ ಆಗಮಿಸಿ ಹೂವು, ಹಣ್ಣು, ತರಕಾರಿ ಹಾಗೂ ಪೂಜಾ ಸಾಮಗ್ರಿಗಳನ್ನು ಖರೀದಿಸುತ್ತಿದ್ದಾರೆ. ಆದರೆ ಹಬ್ಬದ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೂವು, ತೋರಣ ಸೇರಿದಂತೆ ಹಲವು ವಸ್ತುಗಳ ಬೆಲೆ ಸಾಮಾನ್ಯ ದಿನಗಳಿಗಿಂತ ಏರಿಕೆಯಾಗಿದೆ.

ಹಬ್ಬದ ದಿನಗಳಲ್ಲಿ ಮನೆ ಅಲಂಕಾರ ಹಾಗೂ ಪೂಜೆಗೆ ಹೂವು ಮತ್ತು ತೋರಣಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಇದೇ ಕಾರಣಕ್ಕೆ ಕೆಆರ್ ಮಾರ್ಕೆಟ್‌ನಲ್ಲಿ ಹೂವಿನ ದರದಲ್ಲಿ ಏರಿಕೆ ಕಂಡುಬಂದಿದೆ. ಬೆಲೆ ಏರಿಕೆಯ ನಡುವೆಯೂ ಗ್ರಾಹಕರು ಹಬ್ಬದ ಅಗತ್ಯ ವಸ್ತುಗಳನ್ನು ಖರೀದಿಸಲು ಮುಗಿಬಿದ್ದಿದ್ದಾರೆ.

ಹೂವು ಹಾಗೂ ತೋರಣಗಳ ದರ ಎಷ್ಟು?

ಮಾರುಕಟ್ಟೆಯಲ್ಲಿ ಸೇವಂತಿಗೆ ಹೂವು ಕೆ.ಜಿ.ಗೆ ಸುಮಾರು 350 ರೂ.ಗೆ ಮಾರಾಟವಾಗುತ್ತಿದೆ. ಗುಲಾಬಿ ಬಟನ್ ಹೂವು ಕೂಡ ಕೆ.ಜಿ.ಗೆ 350 ರೂ. ಇದೆ. ಮಿಕ್ಸ್ ಹೂವಿನ ದರ ಕೆ.ಜಿ.ಗೆ 300ರಿಂದ 400 ರೂ.ವರೆಗೆ ಇದೆ. ತಾವರೆ ಹೂವಿನ ಒಂದು ಜೋಡಿಗೆ 50 ರೂ. ದರ ನಿಗದಿಯಾಗಿದೆ.

ಕನಕಾಂಬರ ಹೂವು ಒಂದು ಮೊಳಕ್ಕೆ 50 ರೂ. ಇದ್ದು, ಕೆ.ಜಿ.ಗೆ ಸುಮಾರು 2,000 ರೂ.ವರೆಗೆ ಮಾರಾಟವಾಗುತ್ತಿದೆ. ಮಲ್ಲಿಗೆ ಹೂವು ಒಂದು ಮೊಳಕ್ಕೆ 50 ರೂ. ಹಾಗೂ ಕೆ.ಜಿ.ಗೆ ಸುಮಾರು 1,000 ರೂ. ದರದಲ್ಲಿದೆ. ತುಳಸಿ ತೋರಣ ಒಂದು ಮೊಳಕ್ಕೆ 60 ರೂ. ಇದ್ದರೆ, ಮಾವಿನ ಎಲೆ ಕಟ್ಟು 10ರಿಂದ 30 ರೂ.ವರೆಗೆ ಮಾರಾಟವಾಗುತ್ತಿದೆ. ಬಾಳೆ ದಿಂಡು ಜೋಡಿಗೆ 50ರಿಂದ 80 ರೂ. ದರವಿದೆ.

ತರಕಾರಿ ದರದಲ್ಲೂ ಏರಿಕೆ

ಹಬ್ಬದ ಅಡುಗೆಗೆ ಅಗತ್ಯವಿರುವ ಹಲವು ತರಕಾರಿಗಳ ಬೆಲೆಯಲ್ಲೂ ಬದಲಾವಣೆ ಕಂಡುಬಂದಿದೆ. ಈರುಳ್ಳಿ ಕೆ.ಜಿ.ಗೆ 60ರಿಂದ 70 ರೂ., ಹಸಿ ಮೆಣಸಿನಕಾಯಿ 40ರಿಂದ 60 ರೂ., ಬೀಟ್‌ರೂಟ್ 50ರಿಂದ 60 ರೂ. ಹಾಗೂ ಬೆಳ್ಳುಳ್ಳಿ 200ರಿಂದ 250 ರೂ.ವರೆಗೆ ಮಾರಾಟವಾಗುತ್ತಿದೆ. ನಿಂಬೆಹಣ್ಣು ಒಂದಕ್ಕೆ 8ರಿಂದ 15 ರೂ., ನುಗ್ಗೆಕಾಯಿ ಒಂದಕ್ಕೆ 10ರಿಂದ 15 ರೂ. ಹಾಗೂ ಕ್ಯಾಪ್ಸಿಕಂ 50ರಿಂದ 70 ರೂ. ದರದಲ್ಲಿದೆ. ಬಟಾಣಿ ಕೆ.ಜಿ.ಗೆ 140ರಿಂದ 160 ರೂ.ವರೆಗೆ ಇದೆ.

ದಿನಸಿ ವಸ್ತುಗಳ ದರವೂ ಹೆಚ್ಚಳ

ಹಬ್ಬದ ಸಿಹಿ, ತಿಂಡಿ ಹಾಗೂ ಅಡುಗೆಗೆ ಬೇಕಾಗುವ ದಿನಸಿ ವಸ್ತುಗಳ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ. ಬೆಲ್ಲ ಕೆ.ಜಿ.ಗೆ 50ರಿಂದ 55 ರೂ., ತೊಗರಿಬೇಳೆ 160ರಿಂದ 170 ರೂ., ಹುರಿಗಡಲೆ 150ರಿಂದ 180 ರೂ. ಹಾಗೂ ಕಡಲೆಬೀಜ 100ರಿಂದ 140 ರೂ.ವರೆಗೆ ಇದೆ. ಸಕ್ಕರೆ 60ರಿಂದ 80 ರೂ., ಚಿರೋಟಿ ರವೆ 90ರಿಂದ 100 ರೂ., ಮೈದಾ ಹಿಟ್ಟು 45ರಿಂದ 50 ರೂ. ಹಾಗೂ ಕಡಲೆಕಾಳು 90ರಿಂದ 100 ರೂ. ದರದಲ್ಲಿದೆ. ಅಡುಗೆ ಎಣ್ಣೆ ಲೀಟರ್‌ಗೆ 190ರಿಂದ 210 ರೂ.ವರೆಗೆ ಮಾರಾಟವಾಗುತ್ತಿದೆ.

 ಹಬ್ಬದ ಖರೀದಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಬರುತ್ತಿರುವುದರಿಂದ ಬೇಡಿಕೆ ಹೆಚ್ಚಾಗಿದೆ. ಬೆಲೆ ಏರಿಕೆಯ ನಡುವೆಯೂ ಹಬ್ಬದ ಸಂಭ್ರಮಕ್ಕೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಲು ಗ್ರಾಹಕರು ಉತ್ಸಾಹದಿಂದ ಮುಂದಾಗಿದ್ದಾರೆ.

Exit mobile version