ಕೊಪ್ಪಳ: ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಕುರಿತು ಪರ ವಿರೋಧದ ಚರ್ಚೆ ಎದುರಾಗುತ್ತಿದೆ. ಇದೇ ವೇಳೆ ಖಮೇನಿ ಹತ್ಯೆಯ ಕುರಿತು ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿದ್ದಕ್ಕಾಗಿ ಹಿಂದೂ ಯುವಕನೊಬ್ಬನ ಮೇಲೆ ಮುಸ್ಲಿಂ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಗಂಗಾವತಿ ನಗರದಲ್ಲಿ ನಡೆದಿದೆ.
ಘಟನೆಯ ಹಿನ್ನೆಲೆ
ಗಂಗಾವತಿಯ ನಿವಾಸಿಯಾದ ಚಂದ್ರಶೇಖರ ಎಂಬ ಯುವಕ ವೃತ್ತಿಯಲ್ಲಿ ಖರ್ಜೂರ ವ್ಯಾಪಾರಿಯಾಗಿದ್ದಾನೆ. ಇತ್ತೀಚೆಗೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಅಲಿ ಖಮೇನಿ ಹತರಾದ ಸುದ್ದಿಯನ್ನು ಚಂದ್ರಶೇಖರ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸ್ಟೋರಿಯಾಗಿ ಹಂಚಿಕೊಂಡಿದ್ದನು. ಈ ಪೋಸ್ಟ್‌ನಿಂದ ಕೆರಳಿದ ಐದಾರು ಮುಸ್ಲಿಂ ಯುವಕರ ತಂಡ, ಚಂದ್ರಶೇಖರ ವ್ಯಾಪಾರ ಮಾಡುತ್ತಿದ್ದ ಸ್ಥಳಕ್ಕೆ ಏಕಾಏಕಿ ನುಗ್ಗಿ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.
ನಮ್ಮ ಸಮಾಜಕ್ಕೆ ಮತ್ತು ನಾಯಕರಿಗೆ ಸಂಬಂಧಿಸಿದ ವಿಷಯದ ಬಗ್ಗೆ ಯಾಕೆ ಸ್ಟೋರಿ ಹಾಕಿದೆ? ನಿನ್ನ ಪೋಸ್ಟ್‌ನಿಂದ ನಮಗೆ ನೋವಾಗಿದೆ ಎಂದು ಕೂಗಾಡಿದ ಹಲ್ಲೆಕೋರರು, ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಕೇವಲ ಹಲ್ಲೆಯಷ್ಟೇ ಅಲ್ಲದೆ, ನಿನ್ನ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವಕ
ಹಲ್ಲೆ ಮತ್ತು ಬೆದರಿಕೆಯಿಂದ ತೀವ್ರವಾಗಿ ಭಯಭೀತನಾದ ಚಂದ್ರಶೇಖರ, ತಡರಾತ್ರಿ ಗಂಗಾವತಿ ನಗರ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾನೆ. ನನಗೆ ಇವರಿಂದ ಜೀವಭಯವಿದೆ, ರಕ್ಷಣೆ ನೀಡಿ ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾನೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಖಮೇನಿ ಹತ್ಯೆಯ ನಂತರ ಭಾರತದಾದ್ಯಂತ ಶಿಯಾ ಮುಸ್ಲಿಂ ಸಮುದಾಯದವರಿಂದ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಅಲಿಪುರ ಗ್ರಾಮದಲ್ಲಿ ಮುಸ್ಲಿಮರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ, ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಮೌನ ಮೆರವಣಿಗೆ ನಡೆಸಿದ್ದರು. ಇಂತಹ ಸೂಕ್ಷ್ಮ ಸನ್ನಿವೇಶದಲ್ಲಿ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ಕೋಮು ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿರುವುದು ಆತಂಕಕಾರಿ ವಿಷಯವಾಗಿದೆ.
ಗಂಗಾವತಿಯಲ್ಲಿ ನಡೆದಿರುವ ಈ ಹಲ್ಲೆ ಘಟನೆಯು ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದ್ದು, ಶಾಂತಿ ಕಾಪಾಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
