ಕೊಪ್ಪಳ: ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ತುಂಗಭದ್ರಾ ಸೇತುವೆ ಬಳಿ ಶುಕ್ರವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಗು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಹುಲಿಗಮ್ಮ ದೇವಸ್ಥಾನಕ್ಕೆ ತೆರಳುತ್ತಿದ್ದ ಭಕ್ತರಿದ್ದ ಟ್ರ್ಯಾಕ್ಟರ್‌ಗೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಈ ದುರ್ಘಟನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೂ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಯಶವಂತನಗರ ಹಾಗೂ ಕೂಡ್ಲಿಗಿ ತಾಲೂಕಿನ ಮರ್ಲಾಯನಹಳ್ಳಿ ಗ್ರಾಮದ ಸುಮಾರು 19 ಭಕ್ತರು ಟ್ರ್ಯಾಕ್ಟರ್ ಮೂಲಕ ಕೊಪ್ಪಳದ ಪ್ರಸಿದ್ಧ ಹುಲಿಗಮ್ಮ ದೇವಸ್ಥಾನಕ್ಕೆ ಹರಕೆ ತೀರಿಸಲು ಹಾಗೂ ದೇವಿಯ ದರ್ಶನ ಪಡೆಯಲು ತೆರಳುತ್ತಿದ್ದರು. ಬೆಳಗಿನ ಜಾವ ರಾಷ್ಟ್ರೀಯ ಹೆದ್ದಾರಿ ಹೊಸಪೇಟೆ-ಕೊಪ್ಪಳ ಗಡಿಯ ತುಂಗಭದ್ರಾ ಡ್ಯಾಂ ಸೇತುವೆ ಬಳಿ ಬರುತ್ತಿದ್ದಾಗ, ವೇಗವಾಗಿ ಬಂದ ಲಾರಿಯೊಂದು ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಭಾರೀ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆಗೆ ಟ್ರ್ಯಾಕ್ಟರ್ ಚಾಲಕ ನಿಯಂತ್ರಣ ಕಳೆದುಕೊಂಡು ವಾಹನ ಸೇತುವೆಯ ಮೇಲಿಂದ ಕೆಳಗೆ ಉರುಳಿಬಿದ್ದಿದೆ. ಕ್ಷಣಾರ್ಧದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಸ್ಥಳೀಯರು ಹಾಗೂ ಪೊಲೀಸರು ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಹೊರತೆಗೆದರು.
ಅಪಘಾತದಲ್ಲಿ ಒಂದು ವರ್ಷದ ಮಗು ಭರತ್, ಗೌರಮ್ಮ (33), ಗೀತಾ (32), ಮಹಾಂತೇಶ್ (18), ಮಂಜಮ್ಮ (35), ಕೆಂಚಪ್ಪ (35) ಸೇರಿದಂತೆ ಒಟ್ಟು ಏಳು ಮಂದಿ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಒಂದೇ ಕುಟುಂಬದ ಸಂಬಂಧಿಕರಾಗಿದ್ದು, ಬಡ ಕೂಲಿ ಕಾರ್ಮಿಕರಾಗಿದ್ದರು ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಗಾಯಗೊಂಡಿರುವ ಹಲವರನ್ನು ತಕ್ಷಣ ಹೊಸಪೇಟೆ ಹಾಗೂ ಕೊಪ್ಪಳ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ತೀವ್ರ ನಿಗಾ ವಹಿಸಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್. ಅರಸಿದ್ಧಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣವಾದ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ಈ ದುರ್ಘಟನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. “ಕೊಪ್ಪಳದ ಹುಲಿಗೆಮ್ಮ ದೇವಾಲಯಕ್ಕೆ ತೆರಳುತ್ತಿದ್ದ ಭಕ್ತರನ್ನು ಹೊತ್ತ ಟ್ರ್ಯಾಕ್ಟರ್ ತುಂಗಭದ್ರಾ ಸೇತುವೆಯಿಂದ ಕೆಳಗೆ ಬಿದ್ದ ಪರಿಣಾಮ ಚಿಕ್ಕ ಮಕ್ಕಳು ಸೇರಿದಂತೆ ಹಲವು ಮಂದಿ ಸಾವನ್ನಪ್ಪಿರುವುದು ಅತ್ಯಂತ ದುಃಖಕರ ಸಂಗತಿ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ,” ಎಂದು ಅವರು ತಿಳಿಸಿದ್ದಾರೆ.
ಮೃತರೆಲ್ಲರೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೇರಿದವರಾಗಿರುವ ಹಿನ್ನೆಲೆ ಪ್ರತಿಯೊಬ್ಬ ಮೃತರ ಕುಟುಂಬಕ್ಕೂ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ. ಜೊತೆಗೆ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
