ಸಿಲಿಂಡರ್ ಸ್ಫೋಟವಾಗಿ ಇಡೀ ಮನೆ ನೆಲಸಮ: ಮನೆಯಲ್ಲಿದ್ದ 7 ಮಂದಿಗೆ ಗಂಭೀರ ಗಾಯ

Untitled design 2025 12 12T123013.602

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಭೀಕರ ಅನಿಲ ದುರಂತವೊಂದು ಸಂಭವಿಸಿದ್ದು, ಹೊಸ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು (Cylinder Explosion) ಸುತ್ತಮುತ್ತಲಿನ ಮನೆಗಳಿಗೂ ಹಾನಿಯಾಗಿ, ಕನಿಷ್ಠ 8 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶುಕ್ರವಾರ ಮುಂಜಾನೆ ನಡೆದ ಈ ಘಟನೆಯು ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.

ಈ ಭಯಾನಕ ಸ್ಫೋಟದಲ್ಲಿ ಗಾಯಗೊಂಡವರನ್ನು ತಕ್ಷಣವೇ ಗಂಗಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಸಾವು ಸಂಭವಿಸದಿದ್ದರೂ, ಗಾಯಾಳುಗಳು ತೀವ್ರ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಗಾಯಗೊಂಡವರು ರಾಜ (38), ಸುರೇಶ್ (35), ದುರುಗಪ್ಪ (27), ಹುಸೇನಮ್ಮ (40), ನಾಗರಾಜ (18), ದುರುಗಮ್ಮ (17), ವಿಷ್ಣು (16), ಶ್ರೀಕಾಂತ್ (22) ಎಂದು ಗುರುತಿಸಲಾಗಿದೆ.

ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಪ್ರಾಥಮಿಕ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಉನ್ನತ ಆಸ್ಪತ್ರಗೆ ದಾಖಲಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ಹುಸೇನಮ್ಮ ಎಂಬುವರ ಮನೆಯಲ್ಲಿ ಸಂಭವಿಸಿದೆ. ಮನೆಯವರು ಇತ್ತೀಚೆಗೆ ಹೊಸದಾಗಿ ಗ್ಯಾಸ್ ಸಿಲಿಂಡರ್ ಅನ್ನು ತೆಗೆದುಕೊಂಡಿದ್ದರು. ಶುಕ್ರವಾರ ಮುಂಜಾನೆ ಅಡುಗೆ ಮಾಡಲು ಗ್ಯಾಸ್ ಸ್ಟೌವ್ ಅನ್ನು ಆನ್‌ ಮಾಡುವಾಗ, ಸಿಲಿಂಡರ್‌ನಿಂದ ತೀವ್ರವಾದ ಸ್ಫೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ಸಿಲಿಂಡರ್‌ನಲ್ಲಿ ಅನಿಲ ಸೋರಿಕೆ ಇತ್ತು ಮತ್ತು ಮನೆಯೊಳಗೆ ಅನಿಲ ತುಂಬಿದ ಕಾರಣ, ಸ್ವಿಚ್ ಆನ್ ಮಾಡಿದ ತಕ್ಷಣ ಬೆಂಕಿ ಮತ್ತು ಸ್ಫೋಟ ಸಂಭವಿಸಿರಬಹುದು ಎಂದು ತಾಂತ್ರಿಕ ತಜ್ಞರು ಶಂಕಿಸಿದ್ದಾರೆ.

ಘಟನೆಯಲ್ಲಿ ಹುಸೇನಮ್ಮ ಅವರ ಇಡೀ ಮನೆ ಸಂಪೂರ್ಣವಾಗಿ ನೆಲಸಮವಾಗಿದೆ. ಮನೆಯಲ್ಲಿದ್ದ ವಸ್ತುಗಳು, ಗೋಡೆಗಳು ಮತ್ತು ಮೇಲ್ಛಾವಣಿಯು ಸಂಪೂರ್ಣವಾಗಿ ನಾಶವಾಗಿವೆ.ಸ್ಫೋಟದ ಒತ್ತಡ ತೀವ್ರವಾಗಿದ್ದರಿಂದ, ನೆಲಸಮವಾದ ಮನೆಯ ಅಕ್ಕಪಕ್ಕದಲ್ಲಿ ನಿಂತಿದ್ದ ಇತರರಿಗೂ ಸುಟ್ಟ ಗಾಯಗಳಾಗಿವೆ. ಅಷ್ಟೇ ಅಲ್ಲದೆ, ನೆರೆಹೊರೆಯ ಕೆಲವು ಮನೆಗಳ ಗೋಡೆಗಳು ಬಿರುಕು ಬಿಟ್ಟಿದೆ.

ಈ ಘಟನೆಯು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸ್ಥಳೀಯ ಅಧಿಕಾರಿಗಳು ಮತ್ತು ವಿಪತ್ತು ನಿರ್ವಹಣಾ ತಂಡವು ನೆಲಸಮವಾದ ಮನೆಯ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರೆಸಿದ್ದಾರೆ.

ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಸ್ಫೋಟಕ್ಕೆ ನಿಖರವಾದ ಕಾರಣ ಮತ್ತು ಗ್ಯಾಸ್ ಏಜೆನ್ಸಿಯ ಕಡೆಯಿಂದ ಯಾವುದೇ ನಿರ್ಲಕ್ಷ್ಯ ಇದೆಯೇ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ಹೊಸ ಸಿಲಿಂಡರ್ ಸ್ಫೋಟಗೊಂಡ ಕಾರಣ, ಗ್ಯಾಸ್ ವಿತರಣೆ ಸಂಸ್ಥೆಯ ಸುರಕ್ಷತಾ ಮಾನದಂಡಗಳ ಬಗ್ಗೆಯೂ ಕೂಲಂಕುಷ ತನಿಖೆ ನಡೆಯುವ ಸಾಧ್ಯತೆ ಇದೆ.

Exit mobile version