ಮದುವೆ ನಿರಾಕರಿಸಿದಕ್ಕೆ ಇಬ್ಬರು ಮಕ್ಕಳ ತಾಯಿಯ ಬರ್ಬರ ಹ*ತ್ಯೆ

Untitled design 2026 01 15T165113.875

ಕೋಲಾರ: ಪ್ರೀತಿಯ ಹೆಸರಿನಲ್ಲಿ ವ್ಯಕ್ತಿಯೊಬ್ಬ, ಮದುವೆಗೆ ನಿರಾಕರಿಸಿದ ಮಹಿಳೆಯನ್ನು ರಸ್ತೆಯಲ್ಲೇ ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕೋಲಾರ ಹೊರವಲಯದ ಬಂಗಾರಪೇಟೆ ಜಿಗ್ ಜಾಗ್ ರಸ್ತೆಯಲ್ಲಿ ನಡೆದಿದೆ. ಆರೋಪಿಯ ಕಿರುಕುಳದ ಬಗ್ಗೆ ಮೊದಲೇ ದೂರು ನೀಡಿದ್ದರೂ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರು. ಹೀಗಾಗಿ ಈ ಕೊಲೆ ಆಗಿದೆ ಎಂದು ಮೃತ ಮಹಿಳೆಯ ಕುಟುಂಬಸ್ಥರು ಪೊಲೀಸರು ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಘಟನೆಯ ಹಿನ್ನೆಲೆ

ಬಂಗಾರಪೇಟೆ ತಾಲೂಕಿನ ಕತ್ತಹಳ್ಳಿ ಗ್ರಾಮದ ಸುಜಾತ (27) ಕೊಲೆಯಾದ ದುರ್ದೈವಿ. ಈಕೆ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಆರೋಪಿ ಚಿರಂಜೀವಿ ಹೊಸಕೋಟೆಯ ಇಂಡಸ್ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದಾನೆ. ಈ ಹಿಂದೆ ಹಣಕಾಸು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಸುಜಾತ ಅವರ ಪರಿಚಯವಾಗಿತ್ತು. ಇಬ್ಬರಿಗೂ ಈ ಮೊದಲೇ ಮದುವೆಯಾಗಿದ್ದು, ತಲಾ ಇಬ್ಬರು ಮಕ್ಕಳಿದ್ದಾರೆ. ಆದರೆ ಸುಜಾತ ಪತಿಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸವಿದ್ದರು.

ಸುಜಾತ ಅವರನ್ನು ಮದುವೆಯಾಗುವಂತೆ ಚಿರಂಜೀವಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಪೀಡಿಸುತ್ತಿದ್ದ. ಆದರೆ ಸುಜಾತ ಇದಕ್ಕೆ ಯಾವುದೇ ಆಸಕ್ತಿ ತೋರದೆ ನಿರಾಕರಿಸಿದ್ದರು. ಇದರಿಂದ ಕೋಪಗೊಂಡಿದ್ದ ಚಿರಂಜೀವಿ, ಕಳೆದ ರಾತ್ರಿ ಸುಜಾತ ಅವರ ಮನೆಗೆ ಹೋಗಿ ಗಲಾಟೆ ಮಾಡಿದ್ದ. ಇಂದು ಬೆಳಿಗ್ಗೆ ಸುಜಾತ ಅವರು ಕೆಲಸಕ್ಕೆಂದು ನರಸಾಪುರದ ಕಡೆಗೆ ಹೊರಟಿದ್ದಾಗ, ಬಂಗಾರಪೇಟೆಯ ಜಿಗ್ ಜಾಗ್ ರಸ್ತೆಯ ಬಳಿ ಅಡ್ಡಗಟ್ಟಿದ ಆರೋಪಿ ಚಿರಂಜೀವಿ, ಯಾವುದೇ ಭಯವಿಲ್ಲದೇ ಜನವಿರುವ ಪ್ರದೇಶದಲ್ಲೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕೃತ್ಯದ ಬೆನ್ನಲ್ಲೇ ಸ್ಥಳೀಯರು ಆರೋಪಿ ಚಿರಂಜೀವಿಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಹಿಂದೆ ಹಣಕಾಸಿನ ವಿಚಾರಕ್ಕೆ ನನ್ನ ಮಗಳ ಮೇಲೆ ಚಿರಂಜೀವಿ ಹಲ್ಲೆ ಮಾಡಿದ್ದ. ಈ ಬಗ್ಗೆ ನಾವು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಿದ್ದೆವು. ಆದರೆ ಪೊಲೀಸರು ಆಗಲೇ ಸರಿಯಾದ ಕ್ರಮ ಕೈಗೊಂಡಿದ್ದರೆ ಇಂದು ನನ್ನ ಮಗಳು ಬದುಕಿರುತ್ತಿದ್ದಳು ಎಂದು ಸುಜಾತ ಅವರ ತಂದೆ ಕಣ್ಣೀರಿಡುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಕೋಲಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಪೋಷಕರು ಮತ್ತು ಸ್ಥಳೀಯರು ಆಗ್ರಹಿಸಿದ್ದಾರೆ.

 

Exit mobile version