ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಶುಕ್ರವಾರ) ಮಂಡಿಸಲಿರುವ 2026-27ನೇ ಸಾಲಿನ ರಾಜ್ಯ ಬಜೆಟ್ ಮೇಲೆ ಕೊಡಗು ಜಿಲ್ಲೆಯ ಜನರು ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಇದು ಸಿದ್ದರಾಮಯ್ಯ ಅವರ 17ನೇ ಬಜೆಟ್ ಆಗಿರುವುದರಿಂದ, ಜಿಲ್ಲೆಗೆ ವಿಶೇಷ ಗಮನ ಸಿಗಬಹುದು ಎಂಬ ಆಶಾಭಾವನೆ ಇದೆ.
ಕೊಡಗು ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರಗಳಾದ ವಿರಾಜಪೇಟೆ ಮತ್ತು ಮಡಿಕೇರಿಯಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ವಿರಾಜಪೇಟೆಯ ಶಾಸಕ ಎ.ಎಸ್. ಪೊನ್ನಣ್ಣ ಅವರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿದ್ದು, ಸಿಎಂಗೆ ಹತ್ತಿರದವರು. ಮಡಿಕೇರಿಯ ಶಾಸಕ ಡಾ. ಮಂತರ್ ಗೌಡ ಅವರೂ ಸಹ ಆತ್ಮೀಯರು. ಇದರಿಂದ ಜಿಲ್ಲೆಗೆ ಈ ಬಾರಿ ಪ್ರಮುಖ ಯೋಜನೆಗಳು ಘೋಷಣೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರು ಹೇಳಿದ್ದಾರೆ.
ಕೊಡಗಿನ ಮುಖ್ಯ ನಿರೀಕ್ಷೆಗಳು :
- ವನ್ಯಪ್ರಾಣಿ-ಮಾನವ ಸಂಘರ್ಷ ನಿಯಂತ್ರಣ ಇತ್ತೀಚಿನ ದಿನಗಳಲ್ಲಿ ಕಾಡಾನೆ ದಾಳಿಯಿಂದ ಮೃತ್ಯು ಸಂಖ್ಯೆ ಹೆಚ್ಚಾಗಿದೆ. ಶಾಶ್ವತ ಪರಿಹಾರಕ್ಕಾಗಿ ಅರಣ್ಯ ಗಡಿಯಲ್ಲಿ ರೈಲ್ವೇ ಬೇಲಿ, ಸೌರ ಬೇಲಿ, ಎಲೆಕ್ಟ್ರಿಕ್ ಫೆನ್ಸಿಂಗ್ ಮತ್ತು ಇತರ ಕ್ರಮಗಳಿಗೆ ಹೆಚ್ಚಿನ ಅನುದಾನದ ನಿರೀಕ್ಷೆ ಇದೆ.
- ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಜಿಲ್ಲೆಯಲ್ಲಿ ಯಾವುದೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದ ಕಾರಣ ಗಂಭೀರ ರೋಗಿಗಳು ಮೈಸೂರು ಅಥವಾ ಮಂಗಳೂರಿಗೆ ತೆರಳಬೇಕಾಗುತ್ತದೆ. ಈ ಬಾರಿ ಮಡಿಕೇರಿಯಲ್ಲಿ ಅಥವಾ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆಯಾಗಬಹುದು ಎಂಬ ಆಶಯ ಹೆಚ್ಚಾಗಿದೆ.
- ರಸ್ತೆ ಅಭಿವೃದ್ಧಿ ಜಿಲ್ಲೆಯ ಬಹುತೇಕ ರಸ್ತೆಗಳು ಹಾನಿಗೊಳಗಾಗಿವೆ. ಕಳೆದ ಬಜೆಟ್‌ನಲ್ಲಿ ಕೆಲವು ಅನುದಾನ ಬಂದಿತ್ತು. ಈ ಬಾರಿ ಮತ್ತಷ್ಟು ರಸ್ತೆಗಳ ಪುನರ್ನಿರ್ಮಾಣ, ಎನ್‌ಎಚ್-75 ಸೇರಿದಂತೆ ಕೆ-ಶಿಪ್ ಯೋಜನೆಯಡಿ ಹೆಚ್ಚಿನ ಹಂಚಿಕೆಯ ನಿರೀಕ್ಷೆ ಇದೆ.
- ಪ್ರವಾಸೋದ್ಯಮ ಅಭಿವೃದ್ಧಿ ಕೊಡಗು ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿದ್ದರೂ, ಮೂಲಸೌಕರ್ಯ ಕೊರತೆ ಇದೆ. ಪ್ರವಾಸಿ ತಾಣಗಳ ಅಭಿವೃದ್ಧಿ, ರಸ್ತೆ ಸಂಪರ್ಕ, ಸೌಲಭ್ಯಗಳಿಗೆ ವಿಶೇಷ ಅನುದಾನದ ಆಶಯ ಇದೆ.
- ಕ್ರೀಡಾ ಕ್ಷೇತ್ರ ಜಿಲ್ಲೆಯ ಕ್ರೀಡಾಪಟುಗಳು ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದರೂ, ಜಿಲ್ಲಾ ಕ್ರೀಡಾಂಗಣದ ಸ್ಥಿತಿ ಶೋಚನೀಯವಾಗಿದೆ. ಮಡಿಕೇರಿಯಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನದ ನಿರೀಕ್ಷೆ ಇದೆ.
ಕಳೆದ ಬಜೆಟ್‌ನಲ್ಲಿ ಕೊಡಗಿಗೆ ದೊರಕಿದ ಕೊಡುಗೆಗಳು ಕಳೆದ ಬಜೆಟ್‌ನಲ್ಲಿ ವಿರಾಜಪೇಟೆಯಲ್ಲಿ 400 ಹಾಸಿಗೆಗಳ ಆಸ್ಪತ್ರೆ, ಪೊನ್ನಂಪೇಟೆ ಸಮುದಾಯ ಆರೋಗ್ಯ ಕೇಂದ್ರ, ಕುಶಾಲನಗರ ತಾಲೂಕು ಆಸ್ಪತ್ರೆ ನವೀಕರಣ, ಮಳೆ ಹಾನಿಗೊಳಗಾದ ರಸ್ತೆ-ಸೇತುವೆಗಳ ಪುನರ್ನಿರ್ಮಾಣಕ್ಕೆ ₹200 ಕೋಟಿ, ಕೂಡಿಗೆ ಶಾಲೆ ಉನ್ನತೀಕರಣಕ್ಕೆ ₹3 ಕೋಟಿ, ಮಡಿಕೇರಿ-ದೋಣಿಗಲ್ ರಸ್ತೆ ಸೇರಿದಂತೆ 95 ಕಿ.ಮೀ ರಸ್ತೆ ಅಭಿವೃದ್ಧಿ ಮತ್ತಿತರ ಯೋಜನೆಗಳು ಘೋಷಣೆಯಾಗಿದ್ದವು.
ಈ ಬಾರಿ ಶಾಸಕರು ಸರ್ಕಾರಕ್ಕೆ ಮನವಿ ಮಾಡಿರುವುದರಿಂದ, ಕೊಡಗು ಜಿಲ್ಲೆಗೆ ವಿಶೇಷ ಗಮನ ಸಿಗುವ ಸಾಧ್ಯತೆ ಇದೆ ಎಂಬ ಭರವಸೆ ಜಿಲ್ಲೆಯ ಜನರಲ್ಲಿದೆ. ಇಂದಿನ ಬಜೆಟ್ ಮಂಡನೆಯ ನಂತರ ಈ ನಿರೀಕ್ಷೆಗಳಿಗೆ ಉತ್ತರ ಸಿಗಲಿದೆ.
