ಬೆಂಗಳೂರು: ಅಕ್ರಮ ಸಂಬಂಧದ ಹಿನ್ನೆಲೆ ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬನನ್ನು ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಜೆಜೆ ನಗರದಲ್ಲಿ ನಡೆದಿದೆ.
ಜೆಜೆ ನಗರದ ಟಿಪ್ಪು ಸರ್ಕಲ್ ಬಳಿ ಬುಧವಾರ ತಡರಾತ್ರಿ 12:30 ರ ಸುಮಾರಿಗೆ ಈ ಘಟನೆ ನಡೆದಿದೆ. ಅಕ್ರಂ ಪಾಷಾ (43) ಕೊಲೆಯಾದ ವ್ಯಕ್ತಿ. ಆರೋಪಿ ಉಮರ್ ಖಾಲೀದ್ (ಸುಮಾರು 45) ಎಂಬಾತ ಅಕ್ರಂ ಪಾಷಾ ಮೇಲೆ ಹಲ್ಲೆ ನಡೆಸಿ, ಅನೇಕ ಕಡೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಘಟನಾ ಸ್ಥಳದಲ್ಲಿಯೇ ಅಕ್ರಂ ಪಾಷಾ ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿಯೇ ಸಾವನ್ನಪ್ಪಿದ್ದಾನೆ.
ಅಕ್ರಮ ಸಂಬಂಧವೇ ಪ್ರಮುಖ ಕಾರಣ
ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್ ಪ್ರತಿಕ್ರಿಯಿಸಿ, ಈ ಕೊಲೆಗೆ ಅಕ್ರಮ ಸಂಬಂಧವೇ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ. ಆರೋಪಿ ಉಮರ್ ಖಾಲೀದ್ ಅವರ ಪತ್ನಿಯೊಂದಿಗೆ ಮೃತ ಅಕ್ರಂ ಪಾಷಾ ಅಕ್ರಮ ಸಂಬಂಧ ಹೊಂದಿದ್ದರು ಎಂದು ಶಂಕಿಸಲಾಗಿದೆ. ಈ ವಿಚಾರವಾಗಿ ಈ ಹಿಂದೆಯೂ ಇಬ್ಬರ ನಡುವೆ ಗಲಾಟೆಯಾಗಿದ್ದು, ಸ್ಥಳೀಯರು ಮಧ್ಯ ಪ್ರವೇಶಿಸಿ ರಾಜಿ ಮಾಡಿಸಿದ್ದರು.
ಘಟನೆ ಹೇಗೆ ನಡೆಯಿತು?
ಸ್ನೇಹಿತರೊಂದಿಗೆ ಊಟ ಮುಗಿಸಿ ಮನೆಗೆ ಮರಳುತ್ತಿದ್ದ ಅಕ್ರಂ ಪಾಷಾ ಟಿಪ್ಪು ಸರ್ಕಲ್ ಬಳಿ ಬಂದಾಗ, ಹಿಂದಿನಿಂದಲೇ ಬಂದ ಆರೋಪಿ ಉಮರ್ ಖಾಲೀದ್ ಏಕಾಏಕಿ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಸುಮಾರು 4-5 ಬಾರಿ ಚಾಕು ಇರಿದು, ಎದೆಗೆ ಚುಚ್ಚಿದ್ದಾನೆ. ಗಾಯಗೊಂಡು ಕುಸಿದು ಬಿದ್ದಾಗ ಸ್ಥಳೀಯರು ಯಾರೂ ಮೊದಲಿಗೆ ಸಹಾಯಕ್ಕೆ ಬರಲಿಲ್ಲ. ನಂತರ ಆಟೋದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಮೃತ ಹಾಗೂ ಆರೋಪಿ ಯಾರು?
ಅಕ್ರಂ ಪಾಷಾ ಹಾಗೂ ಉಮರ್ ಖಾಲೀದ್ ಇಬ್ಬರೂ ಕಾರ್ ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದರು. ಮೃತ ಅಕ್ರಂ ಪಾಷಾ ಹರ್ಬಲ್ ಲೈಫ್ ಕಂಪನಿಯಲ್ಲಿಯೂ ಕೆಲಸ ಮಾಡುತ್ತಿದ್ದನು. ಆರೋಪಿ ಖಾಲೀದ್ ಅವರ ಪತ್ನಿ ಕೂಡ ಅದೇ ಕಂಪನಿಯಲ್ಲಿ ಅಕ್ರಂ ಪಾಷಾ ಜೊತೆಗೆ ಕೆಲಸ ಮಾಡುತ್ತಿದ್ದಳು. ಇದೇ ವೇಳೆಯಲ್ಲಿ ಅವರಿಬ್ಬರು ಒಟ್ಟಿಗೆ ಫೋಟೋ ತೆಗೆಸಿಕೊಂಡಿದ್ದರು. ಅದೇ ಫೋಟೋ ವಿಚಾರವಾಗಿ ಆರೋಪಿಗೆ ಮನಸ್ಸಿನಲ್ಲಿ ಅನುಮಾನ ಮೂಡಿತು. ಮನೆಯವರಿಗೆ ವಿಚಾರ ಗೊತ್ತಾದ ಬಳಿಕ, ಸಮುದಾಯದವರು ರಾಜಿ ಮಾಡಿಸಿದ್ದರು. ಆದರೂ ಆರೋಪಿ ತನ್ನ ಮನಸ್ಸಿನಲ್ಲಿ ಸೇಡನ್ನು ಇಟ್ಟುಕೊಂಡು ಅವಕಾಶಕ್ಕಾಗಿ ಕಾದಿದ್ದನು.
ಮೃತ ಅಕ್ರಂ ಪಾಷಾಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆರೋಪಿ ಉಮರ್ ಖಾಲೀದ್‌ಗೂ ಮದುವೆಯಾಗಿ ಮಕ್ಕಳಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ತಿಳಿದುಕೊಂಡು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಆರೋಪಿ ಉಮರ್ ಖಾಲೀದ್ ನನ್ನು ಬಂಧಿಸಿದ್ದಾರೆ. ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
