ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಅನಧಿಕೃತವಾಗಿ ನಿರ್ಮಾಣವಾದ ಆಸ್ತಿಗಳಿಗೆ ‘ಬಿ ಖಾತಾ’ ಕಡ್ಡಾಯಗೊಳಿಸುವ ಮೂಲಕ ಸರ್ಕಾರವು ತೆರಿಗೆ ಸಂಗ್ರಹವನ್ನು ಹೆಚ್ಚಿಸಲು ಹೊಸ ನೀತಿ ಜಾರಿಗೆ ತಂದಿದೆ. ಕರ್ನಾಟಕ ಸರ್ಕಾರದ ಸಚಿವಸಂಪುಟವು ಶುಕ್ರವಾರ ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ-2025’ಕ್ಕೆ ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಈ ತಿದ್ದುಪಡಿಯು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಸ್ಥಿರಾಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರುವುದರೊಂದಿಗೆ, ಪಂಚಾಯಿತಿಗಳ ಆದಾಯವನ್ನು ಸಾವಿರಾರು ಕೋಟಿ ರೂಪಾಯಿಗಳಷ್ಟು ಹೆಚ್ಚಿಸಲು ತಿರ್ಮಾನಿಸಿದೆ.
ಅನಧಿಕೃತ ಆಸ್ತಿಗಳಿಗೆ ‘ಬಿ-ಖಾತಾ’
ನಗರ ಪ್ರದೇಶಗಳಲ್ಲಿ ಬಿಬಿಎಂಪಿ (BBMP) ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಅನಧಿಕೃತ ಬಡಾವಣೆಗಳು, ನಿವೇಶನಗಳು, ಕಟ್ಟಡಗಳಿಗೆ ‘ಬಿ-ಖಾತಾ’ ನೀಡುವಂತೆ ಈಗ ಗ್ರಾಮೀಣ ಪ್ರದೇಶಗಳಲ್ಲಿಯೂ ಈ ವಿಧಾನ ಅನುಸರಿಸಲಾಗುತ್ತಿದೆ. ಇದರಿಂದ, ಈಗಾಗಲೇ ನಿರ್ಮಾಣಗೊಂಡ ಅನಧಿಕೃತ ಬಡಾವಣೆಗಳನ್ನು ತೆರಿಗೆ ವ್ಯಾಪ್ತಿಗೆ ತಂದು ಪಂಚಾಯಿತಿಗಳಿಗೆ ಆದಾಯ ವೃದ್ಧಿ ಮಾಡಬಹುದು. ಸರ್ಕಾರದ ಈ ಹೆಜ್ಜೆಯಿಂದ ವರ್ಷಕ್ಕೆ ಸಾವಿರಾರು ಕೋಟಿ ರೂ. ತೆರಿಗೆ ಸಂಗ್ರಹ ಸಾಧ್ಯವಾಗಲಿದೆ.
ಇ-ಸ್ವತ್ತು ಮತ್ತು ತೆರಿಗೆ ವೃದ್ಧಿ
ಅನಧಿಕೃತ ಬಡಾವಣೆಗಳನ್ನು ನಿಯಂತ್ರಿಸಲು 2013ರ ಜೂನ್ 15ರಿಂದ ‘ಇ-ಸ್ವತ್ತು’ ತಂತ್ರಾಂಶ ಜಾರಿಗೆ ತಂದ ಸರ್ಕಾರ, ‘ಪಂಚತಂತ್ರ’ ತಂತ್ರಾಂಶದಲ್ಲಿ 1.40 ಕೋಟಿ ಆಸ್ತಿಗಳ ದಾಖಲೆ ಸೇರಿಸಿದೆ. ಆದರೆ, ಇದರಲ್ಲಿ ಕೇವಲ 40 ಲಕ್ಷ ಆಸ್ತಿಗಳು ಮಾತ್ರ ‘ಇ-ಸ್ವತ್ತು’ ವ್ಯಾಪ್ತಿಯಲ್ಲಿವೆ. ಉಳಿದ 96 ಲಕ್ಷ ಆಸ್ತಿಗಳು ಇ- ಸ್ವತ್ತು ವ್ಯಾಪ್ತಿಯಿಂದ ಹೊರಗಿವೆ. ಇವುಗಳಿಗೆ ‘ಬಿ-ಖಾತಾ’ ನೀಡುವುದರಿಂದ ಸರ್ಕಾರಕ್ಕೆ ಹೆಚ್ಚುವರಿ ಆದಾಯ ಲಭ್ಯವಾಗಲಿದೆ. ಈಗಾಗಲೇ 34 ಲಕ್ಷ ಆಸ್ತಿಗಳಿಂದ 800 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಬಾಕಿ 96 ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬಂದರೆ, ಈ ಆದಾಯ ಮೂರು ಪಟ್ಟು ಹೆಚ್ಚಾಗಬಹುದು.
ಕಾನೂನು ತಿದ್ದುಪಡಿ ಪ್ರಸ್ತಾವನೆ
ಈ ಕ್ರಮದ ಅನುಷ್ಠಾನಕ್ಕಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಕಾಯಿದೆಗೆ ಸೆಕ್ಷನ್ 199(ಬಿ) ಮತ್ತು 199(ಸಿ) ಸೇರಿಸಿ ತಿದ್ದುಪಡಿ ಮಾಡಲಾಗುತ್ತಿದೆ. ಈ ತಿದ್ದುಪಡಿ ಪ್ರಸ್ತಾಪವನ್ನು ಈಗಾಗಲೇ ಸಚಿವ ಸಂಪುಟ ಸಭೆ ಅನುಮೋದಿಸಿದೆ ಮತ್ತು ಇದನ್ನು ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು ತಯಾರಿ ನಡೆಸಲಾಗಿದೆ.
ಇ-ಖಾತಾ ಸೇವೆಗೆ ಪ್ರೋತ್ಸಾಹ
ಇದೇ ವೇಳೆ, ಬಿಬಿಎಂಪಿ ಹೊಸ ಯೋಜನೆಯೊಂದಿಗೆ ಮುಂದೆ ಬಂದಿದೆ – ಅದು ‘ಇ-ಖಾತಾ’ ಸೇವೆಗೆ ಪ್ರೋತ್ಸಾಹ ನೀಡುವ ಯೋಜನೆ. ಆಸ್ತಿಗಳ ಮಾಲೀಕರಿಗೆ ಇ ಖಾತಾ ಸಿಗುವಂತೆ ಸಹಾಯ ಮಾಡುವವರಿಗೆ ಬಿಬಿಎಂಪಿ ಹಣ ನೀಡಲಿದೆ. ಒಂದು ಖಾತೆಗೆ 45 ರೂ.ಗಳಂತೆ ಹಣ ನೀಡುತ್ತದೆ. ಮೊಬೈಲ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಮೂಲಕ ನೋಂದಣಿ ಮಾಡಿಕೊಂಡು, ಈ ಸೇವೆಯನ್ನು ಪಡೆಯಬಹುದು. ಈ ಮೂಲಕ ಸರ್ಕಾರದ ಆಸ್ತಿ ದಾಖಲಾತಿಗಳನ್ನು ಸುಗಮಗೊಳಿಸಲು ಹೊಸ ತಂತ್ರಗಾರಿಕೆಯನ್ನು ಬಳಸಲಾಗುತ್ತಿದೆ.
ಈ ಹೊಸ ತೀರ್ಮಾನಗಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆಸ್ತಿಗಳ ನೋಂದಣಿ ಮತ್ತು ತೆರಿಗೆ ಸಂಗ್ರಹವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ.
