ಬೆಂಗಳೂರು: ರಾಜ್ಯದಾದ್ಯಂತ ಚಳಿಯ ಪ್ರಮಾಣ ಕ್ರಮೇಣ ಹೆಚ್ಚಾಗುತ್ತಿದ್ದು, ಕೆಲ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಕನಿಷ್ಠ ತಾಪಮಾನ ಕುಸಿತ ಕಂಡುಬಂದಿದ್ದು, ಬೆಳಗಿನ ಹೊತ್ತಿನಲ್ಲಿ ಚಳಿ ಹಾಗೂ ಮಂಜಿನ ವಾತಾವರಣ ಇರಲಿದೆ.
ಐಎಂಡಿ ವರದಿಯ ಪ್ರಕಾರ, ಕರ್ನಾಟಕದ ಒಳನಾಡಿನ ಹಲವೆಡೆ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಒಂದು ಅಥವಾ ಎರಡು ಪ್ರದೇಶಗಳಲ್ಲಿ ಮುಂಜಾನೆ ಸಮಯದಲ್ಲಿ ಮಂಜು ಕವಿದ ವಾತಾವರಣ ಕಾಣಿಸಿಕೊಳ್ಳಲಿದೆ. ಇದರಿಂದ ವಾಹನ ಸವಾರರು ಹಾಗೂ ಬೆಳಗಿನ ಸಮಯದಲ್ಲಿ ಪ್ರಯಾಣ ಮಾಡುವವರು ಎಚ್ಚರಿಕೆ ವಹಿಸುವ ಅಗತ್ಯವಿದೆ.
ರಾಜ್ಯದ ಹವಾಮಾನ ಸ್ಥಿತಿ
ದಕ್ಷಿಣ ಒಳನಾಡಿನ ಕೆಲವೊಂದು ಸ್ಥಳಗಳಲ್ಲಿ ಮಾತ್ರ ಲಘು ಮಳೆಯಾಗಿದೆ. ಆದರೆ ಕರಾವಳಿ ಕರ್ನಾಟಕ ಹಾಗೂ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿದಿದೆ. ಕನಿಷ್ಠ ತಾಪಮಾನವು ಧಾರವಾಡದಲ್ಲಿ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ರಾಜ್ಯದ ಅತಿ ಕಡಿಮೆ ತಾಪಮಾನವೆಂದು ಐಎಂಡಿ ವರದಿ ತಿಳಿಸಿದೆ. ಚಳಿಯ ಪರಿಣಾಮದಿಂದ ಬೆಳಿಗ್ಗೆ ಹಾಗೂ ರಾತ್ರಿ ಸಮಯದಲ್ಲಿ ತಣ್ಣನೆಯ ವಾತಾವರಣ ಹೆಚ್ಚಾಗಿದ್ದು, ಜನರು ಸ್ವೆಟರ್, ಜಾಕೆಟ್‌ಗಳ ಮೊರೆ ಹೋಗಿದ್ದಾರೆ.
ಬೆಂಗಳೂರು ಸೇರಿ ಯಾವ ಜಿಲ್ಲೆಗಳಲ್ಲಿ ಮಳೆ?
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಒಣಹವೆ ಮುಂದುವರಿದರೂ, ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ, ತುಮಕೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ಲಘು ಅಥವಾ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.
ಇನ್ನೊಂದೆಡೆ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಹಾಸನ, ಚಿಕ್ಕಮಗಳೂರು, ಕೊಡಗು, ವಿಜಯನಗರ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿದೆ. ಈ ಜಿಲ್ಲೆಗಳಲ್ಲಿ ಮಳೆಯ ನಿರೀಕ್ಷೆ ಕಡಿಮೆ ಇದ್ದು, ಚಳಿ ಮಾತ್ರ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.
ಮುಂದಿನ 5 ದಿನಗಳ ಹವಾಮಾನ ಮುನ್ಸೂಚನೆ
ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಮುಂದಿನ ಐದು ದಿನಗಳ ವರೆಗೆ ಚಳಿ ಹೆಚ್ಚಾಗಿ ಮುಂದುವರಿಯಲಿದೆ. ಕನಿಷ್ಠ ತಾಪಮಾನದಲ್ಲಿ ಮಹತ್ವದ ಬದಲಾವಣೆ ಇಲ್ಲದಿದ್ದರೂ, ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ರಾತ್ರಿ ಮತ್ತು ಮುಂಜಾನೆ ಸಮಯದಲ್ಲಿ ತಣ್ಣನೆಯ ಗಾಳಿ ಹಾಗೂ ಮಂಜು ಹೆಚ್ಚಾಗಿ ಕಾಣಿಸಿಕೊಳ್ಳಲಿದೆ.
ಬೆಂಗಳೂರು ಹವಾಮಾನ ವರದಿ
ಬೆಂಗಳೂರು ನಗರದಲ್ಲಿ ಮುಂದಿನ 24 ಗಂಟೆಗಳ ಅವಧಿಯಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಕೆಲ ಪ್ರದೇಶಗಳಲ್ಲಿ ಮುಂಜಾನೆ ಸಮಯದಲ್ಲಿ ಮಂಜು ಹಾಗೂ ಮೋಡ ಕವಿದ ವಾತಾವರಣ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ನಗರದಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಮಳೆಯ ಕಾರಣವೇನು?
ಐಎಂಡಿ ಮಾಹಿತಿ ಪ್ರಕಾರ, ಆಗ್ನೆಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ಕೇರಳ ಕರಾವಳಿಯಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿಲೋಮೀಟರ್ ಎತ್ತರದಲ್ಲಿ ಮೇಲ್ಮಟ್ಟದ ವಾಯು ಚಂಡಮಾರುತದ ಪರಿಚಲನೆ ಮುಂದುವರಿದಿದೆ.
