ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಸಾಧಾರಣ ಮಳೆ: ಬೆಂಗಳೂರಿನಲ್ಲಿ ಮಂಜು, ಚಳಿ ವಾತಾವರಣ

Untitled design 2025 12 02T081824.894

ಬೆಂಗಳೂರು, ಡಿಸೆಂಬರ್ 02: ಕರ್ನಾಟಕದಲ್ಲಿ ಚಳಿಗಾಲ ಜೋರಾದ ಲಕ್ಷಣಗಳು ಕಾಣುತ್ತಿವೆ. ಡಿಸೆಂಬರ್ ತಿಂಗಳ ಆರಂಭದಲ್ಲೇ ರಾಜ್ಯದ ಹಲವೆಡೆ ಮಂಜು ಕವಿದ ವಾತಾವರಣವಿದ್ದು, ಬೆಂಗಳೂರು ನಗರದಲ್ಲಿ ಚಳಿಯ ತೀವ್ರತೆ ಜನರನ್ನು ಬೆಚ್ಚಿ ಬೀಳಿಸಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಇತ್ತೀಚಿನ ಮುನ್ಸೂಚನೆ ಪ್ರಕಾರ, ಇಂದು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ಸಾಧ್ಯತೆಯಿದೆ. ಆದರೆ ಉತ್ತರ ಒಳನಾಡು, ಕರಾವಳಿ ಹಾಗೂ ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಸಂಪೂರ್ಣ ಒಣ ಹವೆಯ ವಾತಾವರಣ ಮುಂದುವರಿಯಲಿದೆ.

ಯಾವ ಜಿಲ್ಲೆಗಳಲ್ಲಿ ಮಳೆ?

ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ ಮತ್ತು ಚಿಕ್ಕಬಳ್ಳಾಪುರ – ಈ ಐದು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದು ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ. ಈ ಭಾಗಗಳಲ್ಲಿ  ದಟ್ಟ ಮೋಡ ಕವಿದ್ದು, ಕೆಲವೆಡೆ ಗುಡುಗು-ಸಿಡಿಲಿನ ಸಾಧ್ಯತೆಯೂ ಇದೆ ಎಂದು ತಿಳಿಸಲಾಗಿದೆ.

ಯಾವ ಜಿಲ್ಲೆಗಳಲ್ಲಿ ಒಣ ಹವೆ?

ರಾಜ್ಯದ ಉಳಿದ 25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇಂದು ಮಳೆಯ ಸಾಧ್ಯತೆ ಕಡಿಮೆ ಇದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ತುಮಕೂರು, ಕೋಲಾರ, ಚಿತ್ರದುರ್ಗ, ದಾವಣಗೆರೆ, ವಿಜಯನಗರ ಮತ್ತು ಬಳ್ಳಾರಿ ಒಳಗೊಂಡಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳೂ ಒಣ ಹವೆ ಮುಂದುವರೆಯಲಿದೆ.

ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೂ ಯಾವುದೇ ಮಳೆಯ ಲಕ್ಷಣ ಕಾಣುತ್ತಿಲ್ಲ. ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲೂ ಒಣ ಹವೆ ಮುಂದುವರಿಯಲಿದೆ.

ಬೆಂಗಳೂರಿನಲ್ಲಿ ಮಂಜು, ಚಳಿ ಜೋರು

ನಗರದಲ್ಲಿ ಬೆಳಗ್ಗೆಯಿಂದಲೇ ದಟ್ಟ ಮಂಜು ಕವಿದ ವಾತಾವರಣವಿದ್ದು, ರಸ್ತೆಗಳಲ್ಲಿ ವಾಹನ ಸವಾರರು ಹೆಡ್‌ಲೈಟ್ ಹಚ್ಚಿ ಓಡಾಡುವಂತಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಇಂದು ಬೆಂಗಳೂರಿನ ಕನಿಷ್ಠ ತಾಪಮಾನ 17° ಸೆಲ್ಸಿಯಸ್‌ಗೆ ಇಳಿದು, ಗರಿಷ್ಠ ತಾಪಮಾನ 28° ಸೆಲ್ಸಿಯಸ್ ಸುಮಾರಿಗೆ ಇರಲಿದೆ. ಗಾಳಿಯ ವೇಗ ಗಂಟೆಗೆ 10-11 ಕಿ.ಮೀ ಮಾತ್ರ ಇರುವುದರಿಂದ ಚಳಿಯ ಅನುಭವ ಇನ್ನಷ್ಟು ತೀವ್ರವಾಗಿ ಭಾಸವಾಗುತ್ತಿದೆ. ಮುಂದಿನ ಮೂರು-ನಾಲ್ಕು ದಿನಗಳವರೆಗೂ ಇದೇ ರೀತಿಯ ಮಂಜು ಮತ್ತು ಚಳಿಯ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ ಎಂದು ತಜ್ಞರು ತಿಳಿಸಿದ್ದಾರೆ.

ಒಣ ಹವೆ ಮತ್ತು ತಂಪಾದ ಗಾಳಿಯಿಂದಾಗಿ ರಾಜ್ಯದ ಹಲವೆಡೆ ರಾತ್ರಿ ಹಾಗೂ ಬೆಳಗ್ಗೆ ತಾಪಮಾನ ಗಣನೀಯವಾಗಿ ಇಳಿಯುತ್ತಿದೆ. ಇದರಿಂದ ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಯಿದೆ. ವಿಶೇಷವಾಗಿ ಮಕ್ಕಳು ಮತ್ತು ಹಿರಿಯ ನಾಗರಿಕರು ಬೆಚ್ಚಿಗೆ ಉಡುಪು ಧರಿಸಿ, ಆರೋಗ್ಯದ ಬಗ್ಗೆ ಎಚ್ಚರ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಾತ್ರ ಮಳೆಯ ಸ್ಪರ್ಶ, ಉಳಿದೆಲ್ಲೆಡೆ ಚಳಿಗಾಲದ ಒಣ ಹವೆ ಮುಂದುವರೆಯಲಿದೆ.

Exit mobile version