ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ, ಉತ್ತರ ಒಳನಾಡಿನಲ್ಲಿ ಮಳೆ

Untitled design 2025 11 20T083530.344

ಬೆಂಗಳೂರು, ನವೆಂಬರ್ 20: ಕರ್ನಾಟಕದಲ್ಲಿ ಚಳಿಗಾಲದ ಲಕ್ಷಣಗಳು ಕಂಡು ಬಂದಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಒಣ ಹವೆ ಮತ್ತು ತಂಪು ಗಾಳಿ ಮುಂದುವರಿದಿದ್ದು, ಉತ್ತರ ಒಳನಾಡಿನ ಕೆಲವೆಡೆ ಮಾತ್ರ ಗುಡುಗು ಸಹಿತ ಮಳೆಯ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ (KSNDMC) ತಿಳಿಸಿವೆ.

ಇಂದು ರಾಯಚೂರು, ಯಾದಗಿರಿ, ಕಲಬುರಗಿ, ಕೊಪ್ಪಳ ಜಿಲ್ಲೆಗಳಲ್ಲಿ ಗುಡುಗು-ಗಾಳಿ ಸಹಿತ ಸಾಧಾರಣ ಮಳೆಯಾಗುವ ಸಂಭವವಿದೆ. ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ಹೆಚ್ಚಾಗಿ ಕಂಡುಬರಲಿದ್ದು, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ಶಿವಮೊಗ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿಯೂ ತುಂತುರು ಮಳೆಯ ಸಾಧ್ಯತೆ ಇದೆ.

ಬೆಂಗಳೂರಿನ ವಾತಾವರಣ

ನಗರದಲ್ಲಿ ಬೆಳಗ್ಗೆಯಿಂದಲೇ ದಟ್ಟ ಮೋಡ ಕವಿದ ವಾತಾವರಣವಿದೆ. ದಿನವಿಡೀ ಆಗಸದಲ್ಲಿ ಮೋಡಗಳ ಆಟವಿರುತ್ತದೆ ಮತ್ತು ಕೆಲವೆಡೆ ತುಂತುರು ಮಳೆ ಬೀಳಬಹುದು. ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಸುಮಾರಿಗೆ ಇಳಿದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಸುಮಾರಿಗೆ ತಲುಪಲಿದೆ. ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ರಾತ್ರಿ ಮತ್ತು ಬೆಳಗ್ಗೆ ಚಳಿ ಅನುಭವವಾಗುತ್ತಿದೆ.

ಚಳಿಯ ತೀವ್ರತೆ ಏರಿಕೆ

ಉತ್ತರ ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ಇತ್ತೀಚೆಗೆ ರಾಜ್ಯದಲ್ಲೇ ಅತಿ ಕಡಿಮೆ ತಾಪಮಾನ 10 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ವಿಜಯಪುರ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿದಿದ್ದು, ಇಲ್ಲಿ ಚಳಿಯ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ಕರಾವಳಿ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ 2-4 ಡಿಗ್ರಿ ಸೆಲ್ಸಿಯಸ್ ಹೆಚ್ಚು ತಾಪಮಾನ ದಾಖಲಾಗುತ್ತಿದ್ದರೂ, ಒಳನಾಡಿನಲ್ಲಿ ಚಳಿಯ ಝಳಪಾಟ ಆರಂಭವಾಗಿದೆ.

ಕರ್ನಾಟಕ ಚಳಿಗಾಲದ ಮೊದಲ ಝಲಕನ್ನು ಅನುಭವಿಸುತ್ತಿದೆ. ಬೆಂಗಳೂರಿನಲ್ಲಿ ಈಗಾಗಲೇ ಕಂಬಳಿ-ಶಾಲುಗಳ ಮಾರಾಟ ಹೆಚ್ಚಾಗಿದೆ. ಮುಂದಿನ ಕೆಲವು ದಿನಗಳಲ್ಲಿಯೂ ಇದೇ ರೀತಿಯ ತಂಪು-ಚಳಿ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

Exit mobile version