ಬೆಂಗಳೂರು, ಫೆಬ್ರವರಿ 11: ಕಳೆದ ಹಲವು ದಿನಗಳಿಂದ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮನೆಮಾಡಿರುವ ಚಳಿ ಮತ್ತು ಶುಷ್ಕ ವಾತಾವರಣ (Dry Weather) ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಪ್ರದೇಶಗಳಲ್ಲೂ ಮಳೆಯ ಲಕ್ಷಣಗಳು ಕಾಣಿಸದೆ, ಒಣಹವೆ ಮತ್ತು ತಣ್ಣನೆಯ ವಾತಾವರಣವೇ ಮೇಲುಗೈ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಹಾಗೂ ವೈದ್ಯರು ಸಲಹೆ ನೀಡಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆಗಿಂತ ಇಂದು ಚಳಿಯ ಪ್ರಮಾಣ ಸ್ವಲ್ಪ ಕಡಿಮೆಯಾಗಿದ್ದರೂ, ಬೆಳಿಗ್ಗೆ ಹಾಗೂ ರಾತ್ರಿ ವೇಳೆ ತಣ್ಣನೆಯ ವಾತಾವರಣ ಮುಂದುವರಿದಿದೆ. ನಗರದಲ್ಲಿ ಇಂದಿನ ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆ ಇದೆ. ಬೆಳಗ್ಗಿನ ವೇಳೆ ಒಣಹವೆ ಹೆಚ್ಚಿರುವುದರಿಂದ ಚರ್ಮ ಒಣಗುವುದು, ಗಂಟಲು ನೋವು, ಶೀತ–ಕೆಮ್ಮು ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಉತ್ತರ ಒಳನಾಡಿನಲ್ಲಿ ಚಳಿ–ಒಣಹವೆ
ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕಳೆದ ಹಲವು ದಿನಗಳಿಂದ ಒಣಹವೆ ವಾತಾವರಣ ಕಂಡುಬರುತ್ತಿದ್ದು, ಇಂದೂ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾತ್ರಿ ವೇಳೆ ತಾಪಮಾನ ಗಣನೀಯವಾಗಿ ಇಳಿಯುತ್ತಿರುವುದರಿಂದ ಚಳಿಯ ಅನುಭವ ಹೆಚ್ಚಾಗಿದೆ. ಬೆಳಗಿನ ಸಮಯದಲ್ಲಿ ಮಂಜಿನ ಪ್ರಭಾವವೂ ಕೆಲವು ಕಡೆಗಳಲ್ಲಿ ಕಾಣಿಸಿಕೊಳ್ಳುತ್ತಿದೆ.
ಕರಾವಳಿಯಲ್ಲೂ ಒಣಹವೆ
ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲೂ ಈ ಬಾರಿ ಒಣಹವೆ ಹೆಚ್ಚಾಗಿದೆ. ತಾಪಮಾನದಲ್ಲಿ ಹೆಚ್ಚಿನ ಏರಿಳಿತವಿಲ್ಲದಿದ್ದರೂ, ಗಾಳಿಯಲ್ಲಿ ತೇವಾಂಶ ಕಡಿಮೆಯಿರುವುದರಿಂದ ಬಿಸಿಲಿನ ತೀವ್ರತೆ ಹೆಚ್ಚಾಗಿ ಅನುಭವವಾಗುತ್ತಿದೆ. ಮೀನುಗಾರರು ಹಾಗೂ ಕರಾವಳಿ ಪ್ರದೇಶದ ಜನರು ಆರೋಗ್ಯದ ಬಗ್ಗೆ ಹೆಚ್ಚು ಎಚ್ಚರ ವಹಿಸುವಂತೆ ಸೂಚಿಸಲಾಗಿದೆ.
ದಕ್ಷಿಣ ಒಳನಾಡಿನ ಸ್ಥಿತಿ
ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಚಿತ್ರದುರ್ಗ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳಲ್ಲಿಯೂ ಶುಷ್ಕ ವಾತಾವರಣ ಮುಂದುವರಿಯಲಿದೆ. ಕೆಲವು ಪ್ರದೇಶಗಳಲ್ಲಿ ಬೆಳಿಗ್ಗೆ ಚಳಿ ಹೆಚ್ಚಾಗಿ ಕಂಡುಬಂದರೂ, ಮಧ್ಯಾಹ್ನದ ವೇಳೆಗೆ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿದೆ.
ಆರೋಗ್ಯದ ಬಗ್ಗೆ ಎಚ್ಚರಿಕೆ
ಚಳಿ ಮತ್ತು ಒಣಹವೆ ಹಿನ್ನೆಲೆಯಲ್ಲಿ ಜನರಲ್ಲಿ ಶೀತ, ಕೆಮ್ಮು, ಜ್ವರ, ಚರ್ಮದ ಒಣತನ, ಉಸಿರಾಟದ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಬೆಳಿಗ್ಗೆ ಹಾಗೂ ರಾತ್ರಿ ವೇಳೆ ಬೆಚ್ಚಗಿನ ಉಡುಪು ಧರಿಸುವುದು, ಬಿಸಿ ಆಹಾರ ಮತ್ತು ಪಾನೀಯಗಳನ್ನು ಸೇವಿಸುವುದು, ಸಾಕಷ್ಟು ನೀರು ಕುಡಿಯುವುದು ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಮಕ್ಕಳ ಹಾಗೂ ವೃದ್ಧರ ಆರೋಗ್ಯದ ಮೇಲೆ ಹೆಚ್ಚಿನ ಗಮನ ನೀಡಬೇಕು ಎಂದು ಸೂಚಿಸಲಾಗಿದೆ.
