ರಾಜ್ಯದಾದ್ಯಂತ ಶುಷ್ಕ ವಾತಾವರಣ: ಬೆಂಗಳೂರು ಸೇರಿ 30ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಒಣಹವೆ

Untitled design 2026 03 05T082358.256

ಬೆಂಗಳೂರು, ಮಾರ್ಚ್ 05: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಮುಂದುವರಿದಿರುವ ಬಿಸಿಲಿನ ತೀವ್ರತೆ ಇಂದೂ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಹವಾಮಾನ ಇಲಾಖೆಯ ವರದಿ ಪ್ರಕಾರ, ಇಂದು ರಾಜ್ಯದ ಬಹುತೇಕ ಭಾಗಗಳಲ್ಲಿ ಶುಷ್ಕ ವಾತಾವರಣ ಮುಂದುವರಿಯಲಿದೆ. ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ತಾಪಮಾನ ಏರಿಕೆಯಾಗುವ ನಿರೀಕ್ಷೆ ಇದ್ದು, ಗರಿಷ್ಠ ತಾಪಮಾನವು 39 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆ ಇದೆ.

ನಗರದಲ್ಲಿ ಇಂದು ಮಧ್ಯಾಹ್ನ ವೇಳೆಗೆ ಬಿಸಿಲಿನ ತಾಪಮಾನ ಮತ್ತಷ್ಟು ತೀವ್ರವಾಗಬಹುದು ಎಂದು ಇಲಾಖೆ ತಿಳಿಸಿದೆ. ಕಳೆದ ಕೆಲವು ದಿನಗಳಿಂದಲೂ ಒಣಗಾಳಿ ಮತ್ತು ಬಿಸಿಲಿನ ಕಾರಣದಿಂದ ಜನಜೀವನದ ಮೇಲೆ ಪರಿಣಾಮ ಬೀಳುತ್ತಿದೆ. ಈ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಕೂಡ ಮುನ್ನೆಚ್ಚರಿಕಾ ಕ್ರಮಗಳನ್ನು ಸೂಚಿಸಿದೆ.

ಎಲ್ಲೆಲ್ಲಿ ಒಣ ಹವಾಮಾನ?

ಹವಾಮಾನ ಇಲಾಖೆ ನೀಡಿದ ಮಾಹಿತಿಯ ಪ್ರಕಾರ, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಶುಷ್ಕ ವಾತಾವರಣ ಮುಂದುವರಿಯಲಿದೆ.

ಇನ್ನು ಕರಾವಳಿ ಭಾಗಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಇಂದು ಒಣ ಹವೆಯ ವಾತಾವರಣವೇ ಇರಲಿದೆ. ಸಾಮಾನ್ಯವಾಗಿ ಈ ಭಾಗಗಳಲ್ಲಿ ಈ ಕಾಲಘಟ್ಟದಲ್ಲಿ ತೇವಾಂಶ ಹೆಚ್ಚಿರುವುದರಿಂದ ಸ್ವಲ್ಪ ತಂಪು ಕಂಡುಬರುತ್ತದೆ. ಆದರೆ ಈ ಬಾರಿ ಕರಾವಳಿ ಪ್ರದೇಶಗಳಲ್ಲಿಯೂ ಬಿಸಿಗಾಳಿ ಹೆಚ್ಚು ಅನುಭವವಾಗುತ್ತಿದೆ.

ಉತ್ತರ ಒಳನಾಡು ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಳೆದ ಹಲವು ದಿನಗಳಿಂದ ಒಣಗಾಳಿ ಮುಂದುವರಿದಿದ್ದು, ಇನ್ನೂ ಕೆಲ ದಿನ ಇದೇ ಸ್ಥಿತಿ ಇರಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಮಾರ್ಚ್ ಎರಡನೇ ವಾರದಿಂದ ಬಿಸಿಲಿನ ತೀವ್ರತೆ ಹೆಚ್ಚಳ

ಮಾರ್ಚ್ ಎರಡನೇ ವಾರದ ಬಳಿಕ ರಾಜ್ಯದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಬಿಸಿಲಿನ ತೀವ್ರತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಹೀಟ್ ಸ್ಟ್ರೋಕ್ ಮತ್ತು ಡಿಹೈಡ್ರೇಶನ್ ಅಪಾಯ ಹೆಚ್ಚಾಗಬಹುದು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಅನಗತ್ಯವಾಗಿ ಹೊರಗೆ ಹೋಗದಂತೆ ಸೂಚಿಸಲಾಗಿದೆ. ವೃದ್ಧರು, ಗರ್ಭಿಣಿಯರು, ಚಿಕ್ಕ ಮಕ್ಕಳು ಹಾಗೂ ಹೃದಯ ಸಂಬಂಧಿ ಕಾಯಿಲೆ ಹೊಂದಿರುವವರು ವಿಶೇಷ ಎಚ್ಚರಿಕೆ ವಹಿಸಬೇಕು. ಬಿಸಿಲಿನ ನೇರ ತಾಪಕ್ಕೆ ಹೆಚ್ಚು ಸಮಯ ಒಳಗಾಗುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು.

ಆರೋಗ್ಯ ತಜ್ಞರ ಸಲಹೆಗಳು

ಬೇಸಿಗೆಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ವೈದ್ಯರು ಕೆಲವು ಸರಳ ಸಲಹೆಗಳನ್ನು ನೀಡಿದ್ದಾರೆ.

ಒಟ್ಟಿನಲ್ಲಿ, ಈ ಬಾರಿ ಬೇಸಿಗೆ ಆರಂಭದಲ್ಲೇ ತನ್ನ ಪ್ರಭಾವ ತೋರಿಸುತ್ತಿದ್ದು, ಮುಂದಿನ ದಿನಗಳಲ್ಲಿ ತಾಪಮಾನ ಇನ್ನಷ್ಟು ಏರಿಕೆಯಾಗುವ ಸೂಚನೆಗಳಿವೆ. ಹೀಗಾಗಿ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ.

Exit mobile version