ನಾಳೆಯಿಂದ ರಾಜ್ಯದಲ್ಲಿ SIR ಪ್ರಕ್ರಿಯೆ ಆರಂಭ

Untitled design 2026 06 29T162839.857

ಬೆಂಗಳೂರು (ಜೂನ್ 29): ರಾಜ್ಯದ ಮತದಾರರ ಪಟ್ಟಿಯನ್ನು ಮತ್ತಷ್ಟು ನಿಖರ ಮತ್ತು ಪಾರದರ್ಶಕವಾಗಿಸುವ ಉದ್ದೇಶದಿಂದ ಕರ್ನಾಟಕದಲ್ಲಿ ನಾಳೆ ಮಂಗಳವಾರ (ಜೂನ್ 30)ದಿಂದ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆ ಆರಂಭವಾಗಲಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ.

ಈ ವಿಶೇಷ ಪರಿಷ್ಕರಣೆ ವೇಳೆ ರಾಜ್ಯದ 5,55,74,064 ಮತದಾರರ ಮಾಹಿತಿಯನ್ನು ಪರಿಶೀಲಿಸಲಾಗುತ್ತದೆ. ಇದಕ್ಕಾಗಿ 59,050ಕ್ಕೂ ಹೆಚ್ಚು ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ಚುನಾವಣಾ ಆಯೋಗ ನಿಯೋಜಿಸಿದೆ.

ಮನೆಗೆ ಭೇಟಿ ನೀಡುವ ಬಿಎಲ್‌ಒಗಳು ಎರಡು ಎನ್ಯುಮರೇಷನ್ ಫಾರ್ಮ್‌ಗಳನ್ನು ನೀಡಲಿದ್ದು, ಮತದಾರರು ಎರಡನ್ನೂ ಭರ್ತಿ ಮಾಡಿ ಸಹಿ ಮಾಡಬೇಕು. ಬಳಿಕ ಅಧಿಕಾರಿಗಳೂ ಸಹಿ ಮಾಡಿ, ಒಂದು ಪ್ರತಿಯನ್ನು ಮತದಾರರಿಗೆ ಸ್ವೀಕೃತಿ ದಾಖಲೆಯಾಗಿ ನೀಡಲಾಗುತ್ತದೆ. ಮತ್ತೊಂದು ಪ್ರತಿಯನ್ನು ಅಧಿಕಾರಿಗಳು ಪಡೆದು ಡಿಜಿಟಲ್ ರೂಪದಲ್ಲಿ ಸ್ಕ್ಯಾನ್ ಮಾಡಿ ಸಂಗ್ರಹಿಸುತ್ತಾರೆ.

ಈ ಪರಿಷ್ಕರಣೆ ವೇಳೆ ಹೊಸ ಮತದಾರರ ಹೆಸರು ಸೇರ್ಪಡೆ, ಮೃತಪಟ್ಟವರ ಹೆಸರು ತೆಗೆಯುವುದು, ಶಾಶ್ವತವಾಗಿ ಸ್ಥಳಾಂತರಗೊಂಡವರ ಹೆಸರು ಕೈಬಿಡುವುದು, ಎರಡು ಕಡೆ ಹೆಸರು ಹೊಂದಿರುವವರ ಹೆಸರನ್ನು ಒಂದೇ ಸ್ಥಳದಲ್ಲಿ ಉಳಿಸುವುದು ಹಾಗೂ ಹೆಸರು, ವಿಳಾಸ ಅಥವಾ ಇತರೆ ಯಾವುದೇ ವಿವರಗಳಲ್ಲಿ ತಿದ್ದುಪಡಿ ಮಾಡುವ ಅವಕಾಶವೂ ಲಭ್ಯವಿದೆ.

ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಲು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಪ್ರತಿಯೊಂದು ಮತಗಟ್ಟೆಗೆ ಬೂತ್ ಮಟ್ಟದ ಏಜೆಂಟರನ್ನು (BLA) ನೇಮಿಸಿವೆ. ಅವರು ಬಿಎಲ್‌ಒಗಳಿಗೆ ಸಹಕಾರ ನೀಡಲಿದ್ದಾರೆ.

ಬಿಎಲ್‌ಒಗಳು ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ಕರಡು ಪಟ್ಟಿಯಲ್ಲಿ ಹೆಸರು ಅಥವಾ ವಿವರಗಳಲ್ಲಿ ದೋಷ ಕಂಡುಬಂದರೆ ಆಗಸ್ಟ್ 5ರಿಂದ ಸೆಪ್ಟೆಂಬರ್ 4ರವರೆಗೆ ಹಕ್ಕು ಹಾಗೂ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿದ ಬಳಿಕ ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ.

2025 ಮತ್ತು 2002ರ ಮತದಾರರ ಪಟ್ಟಿಗಳಲ್ಲಿ ವಿವರಗಳಲ್ಲಿ ವ್ಯತ್ಯಾಸ ಕಂಡುಬಂದರೆ ಸಂಬಂಧಿಸಿದ ಮತದಾರರಿಗೆ ನೋಟಿಸ್ ನೀಡಲಾಗುತ್ತದೆ. ಆದರೆ ನೋಟಿಸ್ ನೀಡಿದ ತಕ್ಷಣವೇ ಹೆಸರು ಕೈಬಿಡುವುದಿಲ್ಲ. ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಬಳಿಕ ಅರ್ಹರ ಹೆಸರನ್ನು ಪಟ್ಟಿಯಲ್ಲಿ ಮುಂದುವರಿಸಲಾಗುತ್ತದೆ.

ಈ ವಿಶೇಷ ಪರಿಷ್ಕರಣೆಯ ಪ್ರಮುಖ ಉದ್ದೇಶವೇನು?

ಚುನಾವಣಾ ಆಯೋಗದ ಪ್ರಕಾರ, ಮತದಾರರ ಪಟ್ಟಿಯನ್ನು ನಿಖರವಾಗಿಡುವುದು, ಅನರ್ಹ ಹೆಸರುಗಳನ್ನು ತೆಗೆದುಹಾಕುವುದು ಹಾಗೂ ಅರ್ಹ ನಾಗರಿಕರ ಹೆಸರನ್ನು ಸೇರಿಸುವುದು ಈ ವಿಶೇಷ ಪರಿಷ್ಕರಣೆಯ ಪ್ರಮುಖ ಉದ್ದೇಶವಾಗಿದೆ. ಪ್ರತಿಯೊಬ್ಬ ಮತದಾರರೂ ಮನೆಗೆ ಬರುವ ಅಧಿಕಾರಿಗಳಿಗೆ ಅಗತ್ಯ ಮಾಹಿತಿಯನ್ನು ನೀಡಿ, ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳುವಂತೆ ಚುನಾವಣಾ ಆಯೋಗ ಮನವಿ ಮಾಡಿಕೊಂಡಿದೆ.

Exit mobile version