ಮಲ್ಟಿಪ್ಲೆಕ್ಸ್‌ಗೆ ಮೂಗುದಾರ.. ಫಿಕ್ಸ್ ಆಯ್ತು 200 ಟಿಕೆಟ್ ದರ

ಸರ್ಕಾರದ ಆದೇಶ ಆಗಿದೆ.. 15ದಿನದಲ್ಲಿ ರಾಜ್ಯಪತ್ರ ಪ್ರಕಟಣೆ

0 (1)

ಆಂಧ್ರ, ತಮಿಳುನಾಡು ಹಾಗೂ ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ಏಕರೂಪ ಟಿಕೆಟ್ ದರ ನೀತಿ ಜಾರಿಗೆ ತರುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲಿ ಇನ್ಮೇಲೆ 200 ರೂಪಾಯಿ ಟೆಕೆಟ್ ದರ ಮೀರುವಂತಿಲ್ಲ. ಇದು ಯಾವಾಗಿಂದ ಅಧಿಕೃತವಾಗಿ ಜಾರಿ ಆಗಲಿದೆ? ಪರಭಾಷಾ ಸಿನಿಮಾಗಳ ಹಾವಳಿ ಜೊತೆ ಮಲ್ಟಿಪ್ಲೆಕ್ಸ್‌‌‌ಗಳಿಗೂ ಮೂಗುದಾರ ಹಾಕ್ತಿರೋ ಈ ಮಹತ್ವದ ಬೆಳವಣಿಗೆ ಚಿತ್ರರಂಗಕ್ಕೆ ವರವಚೋ ಶಾಪವೋ ಅನ್ನೋದ್ರ ಡಿಟೈಲ್ಡ್ ರಿಪೋರ್ಟ್‌ ಇಲ್ಲಿದೆ ನೋಡಿ.

ಚಿತ್ರಮಂದಿರಗಳಿಗೆ ಜನ ಬರ್ತಿಲ್ಲ. ಸಿನಿಮಾಗಳ ಬಾಕ್ಸ್ ಆಫೀಸ್ ಕಲೆಕ್ಷನ್ ಆಗ್ತಿಲ್ಲ. ನಿರ್ಮಾಪಕರಿಗೆ ಹಾಕಿರೋ ಬಂಡವಾಳ ಬರ್ತಿಲ್ಲ ಅನ್ನೋ ಆರೋಪಗಳಿಗೆಲ್ಲಾ ಶಾಶ್ವತ ಪರಿಹಾರ ದೊರಕಿದೆ. ಆಂಧ್ರ, ತಮಿಳುನಾಡು, ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ಏಕರೂಪ ಟಿಕೆಟ್ ದರ ನೀತಿ ಜಾರಿ ಆಗಿದೆ. ಇನ್ಮೇಲೆ ಮಲ್ಟಿಪ್ಲೆಕ್ಸ್‌‌ಗಳು ಸೇರಿದಂತೆ ಚಿತ್ರಮಂದಿರಗಳಲ್ಲಿ 200 ರೂಪಾಯಿ ಟಿಕೆಟ್ ದರ ಮೀರುವಂತಿಲ್ಲ.

ಹೌದು, ಇತ್ತೀಚೆಗೆ ನಡೆದ ಸ್ಟೇಟ್ ಬಜೆಟ್‌‌ನಲ್ಲಿ ಸಿಎಂ ಸಿದ್ದರಾಮಯ್ಯನವರು ಏಕರೂಪ ಟಿಕೆಟ್ ದರ ನೀತಿಯನ್ನ ನೆರೆ ರಾಜ್ಯಗಳಂತೆ ಇಲ್ಲಿಯೂ ಜಾರಿಗೊಳಿಸಲಾಗುವುದು ಅಂತ ಹೇಳಿದ್ದರು. ಇದೀಗ ನುಡಿದಂತೆ ನಡೆದಿದ್ದಾರೆ ಸಿಎಂ ಸಿದ್ದರಾಮಯ್ಯ. ಕ್ಯಾಬಿನೆಟ್‌‌‌ನಲ್ಲಿ ಒಮ್ಮತದ ನಿರ್ಧಾರದೊಂದಿಗೆ ಸರ್ಕಾರ ಅಧಿಕೃತ ಆದೇಶ ಮಾಡಿ ಆಗಿದೆ. ಇದು ಮುಂದಿನ 15 ದಿನದಲ್ಲಿ ರಾಜ್ಯಪತ್ರದಲ್ಲಿ ಪ್ರಕಟಣೆ ಆಗಬೇಕಿದೆ. ಸಿಎಂ ಮುಖ್ಯ ಕಾರ್ಯದರ್ಶಿ ಸಹಿ ಹಾಕಿ, ಅದನ್ನ ರಾಜ್ಯಪಾಲರ ಅನುಮೋದನೆಗೆ ಕಳುಹಿಸುತ್ತಾರೆ. ಅಲ್ಲಿ ರಾಜ್ಯಪಾಲರ ಒಪ್ಪಿಗೆ ಮೇರೆಗೆ ರಾಜ್ಯಪತ್ರ ಹೊರಡಿಸಲಾಗುತ್ತೆ. ಅಲ್ಲಿಗೆ ಅದು ಅಧಿಕೃತ ಆಗಲಿದೆ.

ಎಲ್ಲಾ ಅಂದುಕೊಂಡಂತೆ ಆದ್ರೆ ಇದೇ ಆಗಸ್ಟ್ ಮೊದಲ ವಾರದಿಂದ ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್‌‌‌ ಹಾಗೂ ಚಿತ್ರಮಂದಿರಗಳಲ್ಲಿ ಟ್ಯಾಕ್ಸ್ ಸೇರಿ 200ರೂ ಟಿಕೆಟ್ ದರ ಕಡ್ಡಾಯಗೊಳ್ಳಲಿದೆ. ಇದರಿಂದ ಲಂಗು ಲಗಾಮು ಇಲ್ಲದೆ ಟಿಕೆಟ್ ಪ್ರೈಸ್ ಇಡ್ತಿದ್ದ ಪಿವಿಆರ್, ಐನಾಕ್ಸ್ ಅಂತಹ ಮುಂಬೈ ಬೇಸ್ಡ್ ಮಲ್ಟಿಪ್ಲೆಕ್ಸ್‌‌‌ಗಳ ಮೇಲೆ ಹಿಡಿತ ಸಾಧಿಸಿದಂತಾಗಲಿದೆ. ಅದರಲ್ಲೂ ಇದು ಕನ್ನಡ ಸಿನಿಮಾಗಳ ಮೇಲೆ ಹೆಚ್ಚು ಪ್ರಭಾವ ಬೀರಲ್ಲ. ಬದಲಿಗೆ ಪರಭಾಷಾ ಸೂಪರ್ ಸ್ಟಾರ್‌‌ಗಳ ಸಿನಿಮಾಗಳ ಬಾಕ್ಸ್ ಆಫೀಸ್ ಕಲೆಕ್ಷನ್‌ಗೆ ನೇರವಾಗಿ ಹೊಡೆತ ಕೊಡಲಿದೆ.

ಆಂಧ್ರ, ಕೇರಳ ಹಾಗೂ ತಮಿಳುನಾಡಿನಲ್ಲಿ ಕುಟುಂಬ ಸಮೇತ ಥಿಯೇಟರ್‌ಗಳಿಗೆ ಹೋಗಿ ಸಿನಿಮಾಗಳನ್ನ ನೋಡ್ತಾರೆ. ವಾರವಿಡೀ ಕೆಲಸ ಕಾರ್ಯಗಳನ್ನ ಮಾಡುವ ಜನ ವಾರಾಂತ್ಯದಲ್ಲಿ ಮನರಂಜನೆಗಾಗಿ ಥಿಯೇಟರ್‌ಗೆ ಹೋಗ್ತಾರೆ. ಅಲ್ಲಿ ಟಿಕೆಟ್ ದರ ಕಮ್ಮಿ ಇರೋದ್ರಿಂದ ಎಲ್ಲರೂ ಒಟ್ಟಿಗೆ ಚಿತ್ರಗಳನ್ನು ವೀಕ್ಷಿಸ್ತಾರೆ. ಆದ್ರೆ ನಮ್ಮ ಕರ್ನಾಟಕದಲ್ಲಿ ಪರಭಾಷಾ ಸ್ಟಾರ್‌ಗಳ ಚಿತ್ರಗಳು ಬಂದ್ರೆ ಸಾಲು ಒಂದ್ಕಡೆ ಡಿಸ್ಟ್ರಿಬ್ಯೂಟರ್‌ಗಳು, ಮತ್ತೊಂದ್ಕಡೆ ಮಲ್ಟಿಪ್ಲೆಕ್ಸ್‌‌ಗಳು.. ಹೇಳೋರಿಲ್ಲ ಕೇಳೋರಿಲ್ಲ. ಇಷ್ಟ ಬಂದಷ್ಟು ಟಿಕೆಟ್ ದರ ಫಿಕ್ಸ್ ಮಾಡ್ತಿದ್ರು. ಆದ್ರೀಗ ಅದಕ್ಕೆಲ್ಲಾ ಬ್ರೇಕ್ ಬೀಳಲಿದೆ.

ಯಾವ್ಯಾವ ರಾಜ್ಯದಲ್ಲಿ ಎಷ್ಟಿದೆ ಟಿಕೆಟ್ ದರ..?

ರಾಜ್ಯ

ಟಿಕೆಟ್ ದರ (ರೂಪಾಯಿ)

ಆಂಧ್ರಪ್ರದೇಶ

195

ತಮಿಳುನಾಡು

196

ಕೇರಳ

190

ತೆಲಂಗಾಣ

190

ಕರ್ನಾಟಕ

200

ಅಂದಹಾಗೆ ಬಾಲಿವುಡ್ ಸೇರಿದಂತೆ ಸೌತ್ ಸಿನಿದುನಿಯಾದ ನೆರೆ ಚಿತ್ರರಂಗಗಳಿಗೆ ಬಿಗ್ ಮಾರ್ಕೆಟ್ ಕರ್ನಾಟಕ ಆಗಿತ್ತು. ಕಾರಣ ಇಲ್ಲಿ ಏಕರೂಪ ಟಿಕೆಟ್ ದರ ನೀತಿ ಇಲ್ಲದಿರೋದು. ಈಗ 200 ರೂಪಾಯಿಗೆ ಸೀಮಿತಗೊಳಿಸಿರೋದ್ರಿಂದ ಇದು ಮುಂಬರುವ ಪರಭಾಷಾ ಬಿಗ್ ಸ್ಟಾರ್ಸ್‌ ಬಿಗ್ ಮೂವೀಸ್ ಮೇಲೆ ನೇರವಾಗಿ ಪರಿಣಾಮ ಬೀಳಲಿದೆ. ಇದೇ ಜುಲೈ 24ಕ್ಕೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ನಟನೆಯ ಹರಿಹರವೀರ ಮಲ್ಲು ಸಿನಿಮಾ ಬರ್ತಿದೆ. ಜುಲೈ 31ಕ್ಕೆ ವಿಜಯ್ ದೇವರಕೊಂಡ ಕಿಂಗ್‌ಡಮ್ ಚಿತ್ರವೂ ತೆರೆಗೆ ಬರ್ತಿದೆ. ಬಹುಶಃ ಇವುಗಳ ಕಲೆಕ್ಷನ್‌ಗೆ ಹೊಡೆತ ಬೀಳಲ್ಲ. ಅಲ್ಲಿಗೆ ಇವರುಗಳು ಬಚಾವ್.

ಆದ್ರೆ ಆಗಸ್ಟ್‌ 14ಕ್ಕೆ ರಿಲೀಸ್ ಆಗ್ತಿರೋ ತಲೈವಾ ರಜನೀಕಾಂತ್‌ರ ಕೂಲಿ ಸಿನಿಮಾ ಹಾಗೂ ಹೃತಿಕ್-ಜೂನಿಯರ್ ಎನ್‌ಟಿಆರ್ ಕಾಂಬೋನ ವಾರ್-2 ಸಿನಿಮಾಗಳ ಬಾಕ್ಸ್ ಆಫೀಸ್‌‌ಗೆ ಕರ್ನಾಟಕದಲ್ಲಿ ಬಿಗ್ ಲಾಸ್ ಆಗಲಿದೆ. ಅದೇನೇ ಇರಲಿ, ಟಿಕೆಟ್ ದರ ಕಡಿಮೆ ಆದಲ್ಲಿ ನೋಡುಗರ ಸಂಖ್ಯೆ ಗಣನೀಯವಾಗಿ ಹೆಚ್ಚಲಿದೆ. ಇದ್ರಿಂದ ಚಿತ್ರರಂಗಕ್ಕೂ ಪ್ಲಸ್ ಆಗಲಿದೆ. ಸಿದ್ದು ಸರ್ಕಾರದ ಈ ನಿರ್ಧಾರದಿಂದ ಚಿತ್ರಪ್ರೇಮಿಗಳಂತೂ ದಿಲ್‌ಖುಷ್ ಆಗಿದ್ದಾರೆ. ಇದಕ್ಕೆ ಹದಿನೈದು ದಿನದಲ್ಲಿ ಯಾರಾದ್ರೂ ಆಕ್ಷೇಪಣೆ ವ್ಯಕ್ತಪಡಿಸ್ತಾರಾ, ಸಲಹೆಗಳನ್ನ ನೀಡ್ತಾರಾ ಅಥ್ವಾ ಸಮ್ಮತಿ ಸೂಚಿಸಿ, ರಾಜ್ಯಪತ್ರ ಹೊರಡಿಸೋಕೆ ಜೈ ಅಂತಾರಾ ಅನ್ನೋದನ್ನ ನಿರೀಕ್ಷಿಸಬೇಕಿದೆ.

Exit mobile version