ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆಯಿಂದ UPI ಮೂಲಕ 40 ಲಕ್ಷ ರೂಪಾಯಿಗಿಂತ ಹೆಚ್ಚಿನ ವಹಿವಾಟು ನಡೆಸಿದ ವ್ಯಾಪಾರಿಗಳಿಗೆ ಜಾರಿಗೊಂಡ ತೆರಿಗೆ ನೋಟಿಸ್‌ಗಳು ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿವೆ. ತಳ್ಳುಗಾಡಿಯಲ್ಲಿ ಹೂವಿನ ವ್ಯಾಪಾರ ಮಾಡುವ ಉಳ್ಳಾಲದ ಸೋಮೆಗೌಡರಿಗೆ 52 ಲಕ್ಷ ರೂಪಾಯಿ ತೆರಿಗೆ ಪಾವತಿಸುವಂತೆ ಶೋಕಾಸ್ ನೋಟಿಸ್ ಬಂದಿದ್ದು, ಸಣ್ಣ ವ್ಯಾಪಾರಿಗಳಲ್ಲಿ ಆತಂಕ ಮೂಡಿಸಿದೆ.
ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆಯು UPI ಪ್ಲಾಟ್‌ಫಾರ್ಮ್‌ಗಳ ಮೂಲಕ ವಹಿವಾಟಿನ ಮಾಹಿತಿಯನ್ನು ಸಂಗ್ರಹಿಸಿ, ರಾಜ್ಯದಾದ್ಯಂತ 65,000 ವರ್ತಕರ ಡೇಟಾವನ್ನು ಸಂಗ್ರಹಿಸಿದೆ. ಇದರಲ್ಲಿ ಸುಮಾರು 5,900 ವರ್ತಕರಿಗೆ GST ನೋಂದಣಿಗೆ ಸಂಬಂಧಿಸಿದಂತೆ ತೆರಿಗೆ ಪಾವತಿಸುವಂತೆ ನೋಟಿಸ್‌ಗಳನ್ನು ಜಾರಿಗೊಳಿಸಿದೆ. ಬೇಕರಿ, ಕಾಂಡಿಮೆಂಟ್ ಅಂಗಡಿಗಳು, ಬೀಡಿ ಅಂಗಡಿಗಳು ಮತ್ತು ತಳ್ಳುಗಾಡಿ ವ್ಯಾಪಾರಿಗಳೂ ಈ ನೋಟಿಸ್‌ಗೆ ಒಳಗಾಗಿದ್ದಾರೆ.
ವ್ಯಾಪಾರಿಗಳ ಆತಂಕ
ಸೋಮೆಗೌಡ, ಕಳೆದ 10 ವರ್ಷಗಳಿಂದ ತಳ್ಳುಗಾಡಿಯಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದಾರೆ. “ಒಂದು ತಿಂಗಳ ಹಿಂದೆ ಮೊದಲ ನೋಟಿಸ್ ಬಂದಿತ್ತು, ಈಗ ವಾಟ್ಸ್‌ಆ್ಯಪ್ ಮೂಲಕ ಎರಡನೇ ನೋಟಿಸ್ ಬಂದಿದೆ. ಇಷ್ಟೊಂದು ಹಣ ಎಲ್ಲಿಂದ ಕಟ್ಟಲಿ? ನಾವು ಪ್ರಾಣ ಬಿಡಬೇಕಾಗುತ್ತದೆ,” ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಇದೇ ರೀತಿ, ನಂದಿನಿ ಬೂತ್‌ನಲ್ಲಿ ಹಾಲಿನ ವ್ಯಾಪಾರ ಮಾಡುವ ಅಭಿಷೇಕ್ ಎಂಬ ವ್ಯಾಪಾರಿಗೆ 50 ಲಕ್ಷ ರೂಪಾಯಿ ತೆರಿಗೆ ಪಾವತಿಗೆ ನೋಟಿಸ್ ಬಂದಿದೆ. “ಕಳೆದ ಮೂರು ವರ್ಷಗಳಿಂದ ಹಾಲಿನ ವ್ಯಾಪಾರ ಮಾಡುತ್ತಿದ್ದೇನೆ. ಇಷ್ಟೊಂದು ಹಣ ಎಲ್ಲಿಂದ ತರಲಿ? ಇದು ಫೇಕ್ ಎಂದು ಭಾವಿಸಿದ್ದೆ, ಆದರೆ ಈಗ ಅಧಿಕಾರಿಗಳು ಆಫೀಸ್‌ಗೆ ಬರಲು ಸೂಚಿಸಿದ್ದಾರೆ,” ಎಂದು ಅವರು ತಮ್ಮ ಗೋಳು ತೋಡಿಕೊಂಡಿದ್ದಾರೆ.
ನಗದು ವ್ಯವಹಾರಕ್ಕೆ ಮರಳಿದ ವರ್ತಕರು
ತೆರಿಗೆ ಇಲಾಖೆಯ ಕಟ್ಟುನಿಟ್ಟಿನ ಕ್ರಮದಿಂದ ಭಯಗೊಂಡ ವ್ಯಾಪಾರಿಗಳು UPI ವಹಿವಾಟು ಬಿಟ್ಟು ನಗದು ವ್ಯವಹಾರಕ್ಕೆ ಮರಳುತ್ತಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಚಿಲ್ಲರೆ ವ್ಯಾಪಾರಿಗಳು ‘ನೋ ಗೂಗಲ್, ಫೋನ್‌ಪೇ, ಓನ್ಲಿ ಕ್ಯಾಶ್’ ಎಂಬ ಬೋರ್ಡ್‌ಗಳನ್ನು ಹಾಕಿದ್ದಾರೆ. ಅನೇಕರು ತಮ್ಮ ಅಂಗಡಿಗಳಿಂದ UPI QR ಕೋಡ್ ಸ್ಟಿಕ್ಕರ್‌ಗಳನ್ನು ತೆಗೆದುಹಾಕಿದ್ದಾರೆ. “ನಾಳೆ ನಮಗೂ ಇಂತಹ ನೋಟಿಸ್ ಬಂದರೆ ಏನು ಮಾಡುವುದು? UPI ಬೇಡ, ಕ್ಯಾಶ್‌ನಿಂದಲೇ ವ್ಯಾಪಾರ ಮಾಡುತ್ತೇವೆ,” ಎಂದು ಮಹಿಳಾ ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ತೆರಿಗೆ ಇಲಾಖೆಯ ಸ್ಪಷ್ಟನೆ
ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಚಂದ್ರ ಶೇಖರ್ ನಾಯಕ್ ಅವರು, “ವರ್ಷಕ್ಕೆ 40 ಲಕ್ಷ ರೂಪಾಯಿಗಿಂತ ಹೆಚ್ಚಿನ ವಹಿವಾಟು ನಡೆಸಿದವರಿಗೆ ಮಾತ್ರ ನೋಟಿಸ್‌ಗಳನ್ನು ಕಳುಹಿಸಲಾಗಿದೆ. ಸೂಕ್ತ ದಾಖಲೆ ಮತ್ತು ವಿವರಣೆ ನೀಡಿದರೆ ಪ್ರಕರಣವನ್ನು ಮುಕ್ತಾಯಗೊಳಿಸಲಾಗುವುದು. ಸಣ್ಣ ವ್ಯಾಪಾರಿಗಳಿಗೆ ಯಾವುದೇ ತೊಂದರೆಯಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.
ಆದರೂ, ಈ ತೆರಿಗೆ ನೋಟಿಸ್‌ಗಳಿಂದ ಸಣ್ಣ ವ್ಯಾಪಾರಿಗಳಲ್ಲಿ ಆತಂಕ ಮನೆಮಾಡಿದ್ದು, ಡಿಜಿಟಲ್ ವಹಿವಾಟಿನಿಂದ ದೂರವಾಗಿ ನಗದು ವ್ಯವಹಾರಕ್ಕೆ ಮರಳುವ ಪ್ರವೃತ್ತಿ ಹೆಚ್ಚಾಗುತ್ತಿದೆ.