ಬೆಂಗಳೂರು: ರಾಜ್ಯ ಶಿಕ್ಷಣ ನೀತಿ (SEP) ಆಯೋಗದ ಅಂತಿಮ ವರದಿ ಸಲ್ಲಿಕೆಯಾದ ಮೂರು ತಿಂಗಳು ಕಳೆದರೂ ಇದುವರೆಗೆ ಸಂಪುಟದ ಮುಂದೆ ಬಂದಿಲ್ಲ. ಈ ವಿಳಂಬಕ್ಕೆ ಕಾರಣ ಪ್ರಧಾನ ಕಾರ್ಯದರ್ಶಿಗಳ ಆಗಾಗ ಬದಲಾವಣೆ ಎಂಬುದನ್ನು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಒಪ್ಪಿಕೊಂಡಿದ್ದಾರೆ. ಆದರೆ ಈಗ ಎಲ್ಲ ವಿಳಂಬಗಳಿಗೆ , ತಾಂತ್ರಿಕ ತೊಡಕುಗಳಿಗೆ ತೆರೆ ಎಳೆಯಲು ಸಿದ್ಧತೆ ನಡೆದಿದೆ. ಮುಂದಿನ ಎರಡೇ ದಿನಗಳಲ್ಲಿ ವರದಿ ಪರಿಶೀಲನಾ ಸಮಿತಿ ರಚನೆಯಾಗಲಿದೆ ಎಂದು ಸಚಿವರು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಘೋಷಿಸಿದರು.
ಸುಖದೇವ್ ಥೋರಟ್ ನೇತೃತ್ವದ ರಾಜ್ಯ ಶಿಕ್ಷಣ ನೀತಿ ಆಯೋಗ ಆಗಸ್ಟ್ ತಿಂಗಳಲ್ಲೇ ತನ್ನ ಅಂತಿಮ ವರದಿಯನ್ನು ಸಲ್ಲಿಸಿತ್ತು. ಈ ವರದಿಯನ್ನು ಕೂಲಂಕುಷವಾಗಿ ಪರಿಶೀಲಿಸಿ, ಸಚಿವ ಸಂಪುಟದ ಅನುಮೋದನೆಗೆ ಸಿದ್ಧಪಡಿಸುವ ಜವಾಬ್ದಾರಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಮೇಲಿತ್ತು. ಆದರೆ ಕಳೆದ ಮೂರು ತಿಂಗಳಲ್ಲಿ ರಾಜ್ಯದಲ್ಲಿ ಮೂವರು ಪ್ರಧಾನ ಕಾರ್ಯದರ್ಶಿಗಳು ಬದಲಾದ ಕಾರಣ ಸಮಿತಿ ರಚನೆ ಮಾಡಿದೆ. ಈ ವಿಷಯ ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪವಾದಾಗ ಸಚಿವರೇ ಆಶ್ಚರ್ಯ ವ್ಯಕ್ತಪಡಿಸಿದರು. ಸಮಿತಿ ರಚನೆಯ ಕಡತಕ್ಕೆ ಸಹಿ ಬಿದ್ದಿದೆ, ಆದರೆ ಪ್ರಧಾನ ಕಾರ್ಯದರ್ಶಿ ಖುಷಿ ಗೋಯೆಲ್ ಚೌಧರಿ ಅವರ ಗಮನಕ್ಕೆ ಬಂದಿಲ್ಲ ಎನ್ನುವುದು ದುರದೃಷ್ಟಕರ ಎಂದು ಹೇಳಿ, ತಕ್ಷಣವೇ ಕ್ರಮ ಕೈಗೊಳ್ಳಲು ಸೂಚಿಸಿದರು.
ಈಗಿನ ಯೋಜನೆ ಪ್ರಕಾರ, ಮುಂದಿನ 48 ಗಂಟೆಗಳಲ್ಲೇ ಅಧಿಕಾರಿಗಳ ಸಮಿತಿ ರಚನೆಯಾಗಲಿದೆ. ಈ ಸಮಿತಿ ವರದಿಯ ಎಲ್ಲ ಅಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಎರಡು ತಿಂಗಳೊಳಗೆ ಸಂಪುಟಕ್ಕೆ ಸಲ್ಲಿಸಲಿದೆ. ನಂತರ ಸಾರ್ವಜನಿಕ ಚರ್ಚೆಗೆ ವರದಿಯನ್ನು ಮುಕ್ತಗೊಳಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
ಈಗಾಗಲೇ ಆಯೋಗದ ಮಧ್ಯಂತರ ವರದಿಯ ಶಿಫಾರಸುಗಳಲ್ಲಿ ಹಲವನ್ನು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಲಾಗಿದೆ. 2025-26ನೇ ಶೈಕ್ಷಣಿಕ ಸಾಲಿನಿಂದಲೇ ರಾಜ್ಯ ಶಿಕ್ಷಣ ನೀತಿಯನ್ನು ಆಂಶಿಕವಾಗಿ ಜಾರಿಗೊಳಿಸಲಾಗಿದೆ. ಕೇಂದ್ರದ ಬಿಜೆಪಿ ಸರ್ಕಾರ ಯಾವುದೇ ಪೂರ್ವತಯಾರಿ ಇಲ್ಲದೆ ತರಾತುರಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (NEP-2020) ಜಾರಿಗೆ ತಂದಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ರಾಜ್ಯ ಶಿಕ್ಷಣ ನೀತಿ ಆಯೋಗ ರಚಿಸಿ, ಸ್ವತಂತ್ರ ರಾಜ್ಯ ನೀತಿ ರೂಪಿಸುವ ಕೆಲಸ ಆರಂಭಿಸಿತು. ಈಗ ಅಂತಿಮ ವರದಿಯಲ್ಲಿ ಉಳಿದಿರುವ ಕೆಲವೇ ಅಂಶಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಡಾ. ಸುಧಾಕರ್ ತಿಳಿಸಿದರು.
ರಾಜ್ಯ ಶಿಕ್ಷಣ ನೀತಿಯು ಕರ್ನಾಟಕದ ಸಾಂಸ್ಕೃತಿಕ, ಭಾಷಿಕ ಹಾಗೂ ಆರ್ಥಿಕ ವೈಶಿಷ್ಟ್ಯಗಳಿಗೆ ಸಂಪೂರ್ಣ ಹೊಂದಿಕೊಳ್ಳುವಂತೆ ರೂಪಿತವಾಗಿದೆ ಎಂದು ಸಚಿವರು ಹೇಳಿಕೊಂಡರು. ಇದು ವಿದ್ಯಾರ್ಥಿಗಳ ಸ್ಥಳೀಯ ಭಾಷೆಯಲ್ಲಿ ಉನ್ನತ ಶಿಕ್ಷಣ, ಬಹುಭಾಷಾ ಆಯ್ಕೆ, ವೃತ್ತಿಶ 4-ವರ್ಷ ಪದವಿ ಕೋರ್ಸ್‌ಗಳಲ್ಲಿ ಹೊಸ ಅವಕಾಶಗಳು, ಸಂಶೋಧನೆಗೆ ಒತ್ತು ನೀಡುವುದು ಮುಂತಾದ ವಿಷಯಗಳನ್ನು ಒಳಗೊಂಡಿದೆ.
