SIR ಅಂತಿಮ ಮತದಾರರ ಪಟ್ಟಿ ಪ್ರಕಟ; ಬೆಂಗಳೂರಿನಲ್ಲಿ ಅರ್ಧಕ್ಕರ್ಧ ಮತದಾರರೇ ಡಿಲೀಟ್

Untitled Design 2026 10 27T161535.189

ಬೆಂಗಳೂರು: ರಾಜ್ಯದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡಿದೆ. ರಾಜ್ಯದಲ್ಲಿ ಒಟ್ಟು 4,55,00,011 ಮತದಾರರು ಇದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಅನ್ಬುಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಆಗಸ್ಟ್ 24ರ ಕರಡು ಪಟ್ಟಿಯಿಂದ ಅಂತಿಮ ಪಟ್ಟಿಗೆ

ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಿತ್ತು. ಈಗ ಅಂತಿಮ ಪಟ್ಟಿ ಹೊರಬಿದ್ದಿದ್ದು, ಒಟ್ಟು 4,55,00,011 ಮತದಾರರಿದ್ದಾರೆ. ಇವರಲ್ಲಿ ಮಹಿಳಾ ಮತದಾರರು 2,29,14,063 ಹಾಗೂ ಪುರುಷ ಮತದಾರರು 2,25,83,107 ಮಂದಿ ಇದ್ದಾರೆ ಎಂದು ಅನ್ಬುಕುಮಾರ್ ತಿಳಿಸಿದರು. ರಾಜ್ಯದಲ್ಲಿ ಮಹಿಳಾ ಮತದಾರರೇ ಮೇಲುಗೈ ಸಾಧಿಸಿದ್ದು, ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಅರ್ಧಕ್ಕರ್ಧ ಮತದಾರರಿಗೆ ಕೊಕ್

ಎಸ್‌ಐಆರ್‌ಗೂ ಮುನ್ನ ಬೆಂಗಳೂರಿನಲ್ಲಿ 1.3 ಕೋಟಿ ಮತದಾರರಿದ್ದರು. ಆದರೆ, SIR ಮುಗಿದ ಬಳಿಕ ಬೆಂಗಳೂರು ಮಹಾನಗರ ಪಾಲಿಕೆ (ಜಿಬಿಎ) ವ್ಯಾಪ್ತಿಯಲ್ಲಿ ಒಟ್ಟು 59,08,151 ಮತದಾರರಿದ್ದಾರೆ. ಡಿಲೀಟ್ ಆದ ಮತದಾರರ ಸಂಖ್ಯೆ 48,00,565 ಆಗಿದೆ. ಅಂದರೆ ಬೆಂಗಳೂರಿನಲ್ಲಿ ಅರ್ಧಕ್ಕರ್ಧ ಮತದಾರರಿಗೆ ಕೊಕ್ ನೀಡಲಾಗಿದೆ. ಬೆಂಗಳೂರಿನಲ್ಲಿ 28.67 ಲಕ್ಷ ಪುರುಷ ಹಾಗೂ 30.4 ಲಕ್ಷ ಮಹಿಳಾ ಮತದಾರರಿದ್ದು, ಇಲ್ಲಿಯೂ ಮಹಿಳೆಯರೇ ಮುಂದಿದ್ದಾರೆ.

ಒಟ್ಟು 99.80 ಲಕ್ಷ ಮತಗಳು ಡಿಲೀಟ್

SIRಗೂ ಮುನ್ನ ರಾಜ್ಯದಲ್ಲಿ 5,54,32,314 ಮತಗಳಿದ್ದವು. SIR ಬಳಿಕ 4.55 ಕೋಟಿ ಮತದಾರರಿದ್ದಾರೆ. ಒಟ್ಟು 99,80,625 ಮತಗಳು ಡಿಲೀಟ್ ಆಗಿವೆ. ಈ ಪೈಕಿ ಗೈರಾದವರ ಸಂಖ್ಯೆ 19,00,926, ಒಂದು ಕಡೆಯಿಂದ ಮತ್ತೊಂದು ಕಡೆ ಶಿಫ್ಟ್ ಆದವರು 65,45,679, ಸಾವಿಗೀಡಾಗಿದ್ದ ಮತದಾರರು 16,39,864 ಹಾಗೂ ಎರಡೆರಡು ಕಡೆ ಮತದಾನ ಹೊಂದಿದ್ದವರು 7,09,870 ಮಂದಿ ಇದ್ದಾರೆ.

ಫಾರ್ಮ್-6, ಫಾರ್ಮ್-7 ಅರ್ಜಿಗಳ ವಿವರ

SIR ಪ್ರಕ್ರಿಯೆಯಲ್ಲಿ ಒಟ್ಟು 10,62,336 ಫಾರ್ಮ್-6 ಅರ್ಜಿಗಳು ಬಂದಿದ್ದರೆ, ಸುಮಾರು 2 ಲಕ್ಷದಷ್ಟು ಫಾರ್ಮ್-7 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಅನ್ಬುಕುಮಾರ್ ತಿಳಿಸಿದರು.

ವರ್ಗವಾರು ಮತದಾರರ ವಿವರ

ರಾಜ್ಯದಲ್ಲಿ SIR ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಅಂತಿಮ ಪಟ್ಟಿಯಲ್ಲಿ 4.55 ಕೋಟಿ ಅರ್ಹ ಮತದಾರರಿದ್ದಾರೆ. ಬೆಂಗಳೂರಿನಲ್ಲಿ ಅರ್ಧಕ್ಕರ್ಧ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದ್ದು, ಇದು ಚರ್ಚೆಗೆ ಕಾರಣವಾಗಿದೆ. ಮಹಿಳಾ ಮತದಾರರೇ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಂತಿಮ ಪಟ್ಟಿ ಪ್ರಕಟಗೊಂಡ ಬಳಿಕವೂ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿ ಪ್ರಕ್ರಿಯೆಗಳು ಮುಂದುವರಿಯಲಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Exit mobile version