ಒಂದು ತಿಂಗಳಲ್ಲಿ ಇ-ಕೆವೈಸಿ ಮಾಡದಿದ್ದರೆ ರೇಷನ್ ಕಾರ್ಡ್ ರದ್ದು: ಸಚಿವ ಕೆ.ಹೆಚ್. ಮುನಿಯಪ್ಪ

ರೇಷನ್ ಕಾರ್ಡ್ ಉಳಿಸಿಕೊಳ್ಳಲು ಇ-ಕೆವೈಸಿ ಕಡ್ಡಾಯ!

Untitled design (11)

ರಾಜ್ಯದ ಎಲ್ಲ ಪಡಿತರ ಚೀಟಿದಾರರಿಗೆ ಒಂದು ತಿಂಗಳ ಒಳಗೆ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು, ಈ ಅವಧಿಯಲ್ಲಿ ಇ-ಕೆವೈಸಿ ಮಾಡದಿದ್ದರೆ, ಸಂಬಂಧಪಟ್ಟ ಪಡಿತರ ಕಾರ್ಡ್‌ಗಳನ್ನು ರದ್ದುಗೊಳಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಹೇಳಿದ್ದಾರೆ.

ಮೈಸೂರು ವಿಭಾಗದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವ ಮುನಿಯಪ್ಪ, ಇ-ಕೆವೈಸಿ ಪ್ರಕ್ರಿಯೆಯನ್ನು ತ್ವರಿತವಾಗಿ ಜಾರಿಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು. “ಪಡಿತರ ಚೀಟಿದಾರರಿಗೆ ಇ-ಕೆವೈಸಿ ಪೂರ್ಣಗೊಳಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗುವುದು. ಈ ಅವಧಿಯಲ್ಲಿ ಪ್ರಕ್ರಿಯೆ ಪೂರ್ಣಗೊಳದಿದ್ದರೆ, ಕಾರ್ಡ್‌ಗಳನ್ನು ರದ್ದುಗೊಳಿಸಲಾಗುವುದು. ಜನರಿಗೆ ಈ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸಬೇಕು,” ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ADVERTISEMENT
ADVERTISEMENT

ಮುಂದುವರೆದು, “ಅನರ್ಹ ವ್ಯಕ್ತಿಗಳಿಗೆ ಪಡಿತರ ಕಾರ್ಡ್‌ಗಳು ವಿತರಣೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅನಗತ್ಯ ಕಾರ್ಡ್‌ಗಳು ವಿತರಣೆಯಾದರೆ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಎಚ್ಚರಿಕೆ ನೀಡಿದರು. ಜೊತೆಗೆ, ಕಾನೂನು ಮಾಪನ ಶಾಸ್ತ್ರ ಇಲಾಖೆಗೆ ಅಗತ್ಯವಿರುವ ವಾಹನ ಸೌಲಭ್ಯ ಮತ್ತು ಕಾನೂನು ಮಾಪನ ನಿರೀಕ್ಷಕರ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಆಹಾರ ಧಾನ್ಯಗಳ ಸಂರಕ್ಷಣೆ ಕುರಿತು ಮಾತನಾಡಿದ ಕೆ.ಹೆಚ್. ಮುನಿಯಪ್ಪ, “ಗೋದಾಮುಗಳಲ್ಲಿ ಆಹಾರ ಧಾನ್ಯಗಳು ಕೆಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಧಾನ್ಯಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿ, ಸಂರಕ್ಷಣೆ ಮಾಡಬೇಕು. ಯಾವುದೇ ಲೋಪದೋಷವಾದರೂ, ಸಂಬಂಧಪಟ್ಟ ಅಧಿಕಾರಿಗಳೇ ಜವಾಬ್ದಾರರಾಗಿರುತ್ತಾರೆ,” ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಮನೋಜ್ ಜೈನ್ ಮಾತನಾಡಿ, ಖಾಲಿ ಇರುವ ಆಹಾರ ನಿರೀಕ್ಷಕರ ಹುದ್ದೆಗಳಿಗೆ ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕರಿಗೆ ಹೆಚ್ಚುವರಿ ಪ್ರಭಾರ ನೀಡುವಂತೆ ಸೂಚಿಸಿದರು. “ಇಲಾಖೆಯ ಖಾಲಿ ಹುದ್ದೆಗಳಿಗೆ ತಕ್ಷಣವೇ ಇತರ ಅಧಿಕಾರಿಗಳಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಲಾಗುವುದು. ಇದರಿಂದ ಸೇವೆಯಲ್ಲಿ ವಿಳಂಬವಾಗದಂತೆ ಕ್ರಮ ಕೈಗೊಳ್ಳಲಾಗುವುದು,” ಎಂದು ಅವರು ತಿಳಿಸಿದರು.

ಸಭೆಯಲ್ಲಿ ಮೈಸೂರು ವಿಭಾಗದ ಜಿಲ್ಲೆಗಳ ಉಪಾಯುಕ್ತರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಆಹಾರ ಇಲಾಖೆಯ ಉಪನಿರ್ದೇಶಕರು ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version