ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೋಮವಾರ ಸಂಜೆ ವರುಣನ ಆರ್ಭಟ ಜೋರಾಗಿದ್ದು, ಬಳ್ಳಾರಿ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ದಿನಗಳಿಂದ ಉರಿ ಬಿಸಿಲಿನಿಂದ ಬಳಲಿದ ಜನರಿಗೆ ಮಳೆ ತಂಪೆರೆದಿದೆ. ಕೆಲವೆಡೆ ಗಾಳಿ-ಮಳೆಯಿಂದ ಅವಾಂತರಗಳೂ ಸೃಷ್ಟಿಯಾಗಿವೆ.
ಗಣಿ ಜಿಲ್ಲೆ ಎಂದೇ ಪ್ರಸಿದ್ಧಿಯಾದ ಬಳ್ಳಾರಿಯಲ್ಲಿ ವರ್ಷದ ಮೊದಲ ಭಾರೀ ಮಳೆ ಸುರಿದಿದ್ದು, ಜನರಲ್ಲಿ ಸಂತಸ ಮನೆ ಮಾಡಿದೆ.. ಜಿಲ್ಲೆಯಾದ್ಯಂತ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಕಳೆದ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ರಸ್ತೆಗಳು ಜಲಾವೃತವಾಗಿವೆ. ಏಕಾಏಕಿ ಸುರಿದ ಮಳೆಯಿಂದ ವಾಹನ ಸವಾರರು ಪರದಾಡುವಂತಾಯಿತು.
ಇನ್ನೊಂದೆಡೆ ವಿಜಯಪುರ ನಗರದಲ್ಲೂ ಧಾರಾಕಾರ ಮಳೆಯಾಗಿದೆ. ಭಾರೀ ಗಾಳಿ ಮತ್ತು ಮಳೆಯಿಂದ ನಗರದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವು ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಬೀದಿ ಬದಿ ವ್ಯಾಪಾರಿಗಳು ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರೀ ಮಳೆಗೆ ಕೆಲಕಾಲ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು.
ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಸೋಮದೇವರಹಟ್ಟಿ ಸುತ್ತಮುತ್ತ ಆಲಿಕಲ್ಲು ಮಳೆಯೂ ಸುರಿದಿದೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ. ಬೇಸಿಗೆಯ ಉರಿ ಬಿಸಿಲಿನಿಂದ ಬಳಲುತ್ತಿದ್ದ ಜನರಿಗೆ ಮಳೆ ತಂಪಿನ ಅನುಭವ ನೀಡಿದರೂ, ಆಲಿಕಲ್ಲು ಮಳೆಯಿಂದ ದ್ರಾಕ್ಷಿ ಬೆಳೆಗಾರರಲ್ಲಿ ಆತಂಕ ಮೂಡಿದೆ. ದ್ರಾಕ್ಷಿ ತೋಟಗಳಿಗೆ ಹಾನಿಯಾಗುವ ಭೀತಿ ಎದುರಾಗಿದ್ದು, ರೈತರು ಚಿಂತೆಗೆ ಒಳಗಾಗಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿಯೂ ವರುಣನ ಆರ್ಭಟ ಜೋರಾಗಿತ್ತು. ರಾಯಚೂರು, ಮಸ್ಕಿ ಹಾಗೂ ಲಿಂಗಸುಗೂರು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಆದರೆ ಮಳೆಯ ಜೊತೆಗೆ ಬಂದ ಗುಡುಗು-ಸಿಡಿಲಿನಿಂದ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಎತ್ತುಗಳು ಹಾಗೂ ಎರಡು ಕೋಳಿಗಳು ಸಾವನ್ನಪ್ಪಿವೆ. ಸುರೇಶ್ ಎಂಬ ರೈತನಿಗೆ ಸೇರಿದ ಎತ್ತುಗಳು ಸಿಡಿಲಿನ ಹೊಡೆತಕ್ಕೆ ಬಲಿಯಾಗಿದೆ.
ಇದೇ ಗ್ರಾಮದ ರವಿ ಎಂಬುವವರ ಟಿನ್ ಶೆಡ್ ಮನೆಗೂ ಗಾಳಿ ಹಾನಿ ಮಾಡಿದ್ದು, ಬಿರುಗಾಳಿಯ ಹೊಡೆತಕ್ಕೆ ಮನೆಯ ಮೇಲ್ಛಾವಣಿಯ ಟಿನ್ ಶೀಟ್‌ಗಳು ಹಾರಿ ಹೋಗಿವೆ.
ಬೀದರ್‌ನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಜಿಲ್ಲೆಯ ಭಾಲ್ಕಿ, ಔರಾದ್‌ನ ಹಲವೆಡೆ ವ್ಯಾಪಕ ಮಳೆಯಾಗಿದೆ. ಬಿರುಗಾಳಿಗೆ ಮನೆಯ ಮೇಲ್ಛಾವಣಿ ಮುರಿದು ಬಿದ್ದಿದೆ. ಬೀದರ್-ಹುಮನಾಬಾದ್ ರಸ್ತೆಯಲ್ಲಿ ಬೀದರ್ ಮಹಾನಗರ ಪಾಲಿಕೆಯ ವೆಲ್‌ಕಮ್ ಬೋರ್ಡ್ ನೆಲಕ್ಕುರುಳಿದೆ.. ಕೆಲಹೊತ್ತು ಬೀದರ್-ಹುಮನಬಾದ್ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಒಟ್ಟಾರೆ ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಮಳೆರಾಯ ಭರ್ಜರಿ ಎಂಟ್ರಿ ಕೊಟ್ಟಿದ್ದು, ಉರಿ ಬಿಸಿಲಿನಿಂದ ಬೇಸತ್ತಿದ್ದ ಜನರಿಗೆ ತಂಪು ನೀಡಿದೆ. ಆದರೆ ಕೆಲವೆಡೆ ಸಿಡಿಲು, ಗಾಳಿ ಹಾಗೂ ಆಲಿಕಲ್ಲು ಮಳೆ ಅನಾಹುತಕ್ಕೂ ಕಾರಣವಾಗಿದೆ.
