ಬೆಂಗಳೂರು: ರಾಜ್ಯದ ಅಸಂಘಟಿತ ಕಾರ್ಮಿಕರ ಕಲ್ಯಾಣ ಯೋಜನೆಗಳಿಗೆ ಹಣವನ್ನು ಒದಗಿಸಲು ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್ ಮತ್ತು ಡೀಸೆಲ್‌ಗೆ ಹೆಚ್ಚುವರಿ ತೆರಿಗೆ ವಿಧಿಸುವ ಪ್ರಸ್ತಾವನೆಯನ್ನು ಕಾರ್ಮಿಕ ಇಲಾಖೆಯು ಸರ್ಕಾರಕ್ಕೆ ಸಲ್ಲಿಸಿದೆ.
ಈ ಹೆಚ್ಚುವರಿ ತೆರಿಗೆಯಿಂದ ಸಂಗ್ರಹವಾಗುವ ನಿಧಿಯನ್ನು ‘ಅಸಂಘಟಿತ ಕಾರ್ಮಿಕ ಕಲ್ಯಾಣ ನಿಧಿ’ಗೆ ಸೇರಿಸಲಾಗುವುದು. ಈ ನಿಧಿಯನ್ನು ಅಸಂಘಟಿತ ಕಾರ್ಮಿಕರ ಆರೋಗ್ಯ, ಶಿಕ್ಷಣ, ಅಪಘಾತ ಪರಿಹಾರ ಮತ್ತು ಅಂತ್ಯಕ್ರಿಯೆ ಸಹಾಯ ಸೇರಿದಂತೆ ಹಲವಾರು ಕಲ್ಯಾಣಕಾರಿ ಯೋಜನೆಗಳಿಗೆ ಬಳಸಲು ಉದ್ದೇಶಿಸಲಾಗಿದೆ.
ಯೋಜನೆಗಳ ಜಾರಿಗೆ ಹಣದ ಅಗತ್ಯ
ರಾಜ್ಯದಲ್ಲಿ ಲಕ್ಷಾಂತರ ಅಸಂಘಟಿತ ಕಾರ್ಮಿಕರಿದ್ದಾರೆ. ಅವರ ಒಟ್ಟಾರೆ ಕಲ್ಯಾಣವನ್ನು ಉನ್ನತಿಗೇರಿಸಲು ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಈ ಎಲ್ಲ ಯೋಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲು ಹೆಚ್ಚುವರಿ ಅನುದಾನದ ಅಗತ್ಯವಿದೆ ಎಂದು ಇಲಾಖೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ನಿರ್ದೇಶನದ ಮೇರೆಗೆ, ಹೆಚ್ಚುವರಿ ಹಣವನ್ನು ಸಂಗ್ರಹಿಸುವ ಉದ್ದೇಶದಿಂದ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಪ್ರಸ್ತಾವನೆ ಮಂಡಿಸಲಾಗಿದೆ. ಈ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ಮತ್ತು ವಾಣಿಜ್ಯ ತೆರಿಗೆ ಇಲಾಖೆಗೆ ಕಳುಹಿಸಲಾಗಿದೆ.
ಯಾವ ಯೋಜನೆಗಳಿಗೆ ಬಳಕೆ ?
ಈ ಹೆಚ್ಚುವರಿ ತೆರಿಗೆ ನಿಧಿಯಿಂದ ಈ ಕೆಳಗಿನ ಕಲ್ಯಾಣ ಯೋಜನೆಗಳನ್ನು ಬಲಪಡಿಸಲು ಉದ್ದೇಶಿಸಲಾಗಿದೆ:
-
ಆರೋಗ್ಯ ಸೌಲಭ್ಯ: ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಉನ್ನತ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವುದು.
-
ಅಪಘಾತ ಪರಿಹಾರ: ಕೆಲಸದ ಸಮಯದಲ್ಲಿ ಅಪಘಾತಕ್ಕೊಳಗಾದ ಕಾರ್ಮಿಕರಿಗೆ ಆರ್ಥಿಕ ಪರಿಹಾರ ನೀಡುವುದು.
-
ಶೈಕ್ಷಣಿಕ ಸಹಾಯಧನ: ಅಸಂಘಟಿತ ಕಾರ್ಮಿಕರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಗರಿಷ್ಠ ಇಬ್ಬರು ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ನೀಡುವುದು.
-
ಅಂತ್ಯಕ್ರಿಯೆ ಸಹಾಯಧನ: ಅಸಂಘಟಿತ ಕಾರ್ಮಿಕರು ಸಹಜ ಮರಣ ಹೊಂದಿದಾಗ, ಅವರ ಅಂತ್ಯಕ್ರಿಯೆ ವೆಚ್ಚಗಳಿಗೆ ಸಹಾಯಧನ ನೀಡುವುದು.
-
ಶಾಶ್ವತ ಅಂಗವೈಕಲ್ಯ ಪರಿಹಾರ: ಕೆಲಸದ ಸಮಯದಲ್ಲಿ ನಡೆದ ಅಪಘಾತದಿಂದ ಸಂಪೂರ್ಣ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದ ಕಾರ್ಮಿಕರಿಗೆ ಪರಿಹಾರ ನೀಡುವುದು.
ಈ ಪ್ರಸ್ತಾವನೆಯು ಪ್ರಸ್ತುತ ಆರ್ಥಿಕ ಮತ್ತು ವಾಣಿಜ್ಯ ತೆರಿಗೆ ಇಲಾಖೆಗಳ ಪರಿಶೀಲನೆಯಲ್ಲಿದೆ. ಇಲಾಖೆಗಳು ಈ ಪ್ರಸ್ತಾವನೆಯ ಸಾಧ್ಯತೆ ಮತ್ತು ತಾಂತ್ರಿಕ ಅಂಶಗಳನ್ನು ಅಧ್ಯಯನ ನಡೆಸಲಿವೆ. ಅನಂತರ, ಸರ್ಕಾರದ ಅಂತಿಮ ಅನುಮೋದನೆಗೆ ಇದನ್ನು ಮಂಡಿಸಲಾಗುವುದು. ಈ ಪ್ರಸ್ತಾವಿತ ತೆರಿಗೆಯನ್ನು ಜಾರಿಗೆ ತರಲಾಗುವುದೇ ಎನ್ನುವುದನ್ನ ಕಾದುನೋಡಬೇಕಿದೆ.
