ದೆಹಲಿ: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆಯ ನಂತರ ಡಿ.ಕೆ. ಶಿವಕುಮಾರ್ ಅವರ ಸಂಪುಟ ರಚನೆಯು ‘ಸರ್ಕಸ್‘ ತೀವ್ರ ಚರ್ಚೆಗೆ ಒಳಗಾಗಿದೆ. ಸಿದ್ದರಾಮಯ್ಯ ಅವರು ತಮ್ಮ ಆಪ್ತ ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ಮುಂದೆ ಬಲವಾದ ಬೇಡಿಕೆ ಇಟ್ಟಿರುವುದು ಈಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ ಅವರು ತಮ್ಮ ಲಿಸ್ಟ್ನಲ್ಲಿ ಕೆ.ಜೆ. ಜಾರ್ಜ್, ಯತೀಂದ್ರ ಸಿದ್ದರಾಮಯ್ಯ, ರಾಮಲಿಂಗ ರೆಡ್ಡಿ, ಎಂ.ಬಿ. ಪಾಟೀಲ್, ಶಿವರಾಮ ಹೆಬ್ಬಾರ್, ಗೋಪಾಲಕೃಷ್ಣ ಬೇಲೂರು ಮುಂತಾದ ಆಪ್ತರು ಮತ್ತು ಬೆಂಬಲಿಗರ ಹೆಸರುಗಳನ್ನು ಸೂಚಿಸಿದ್ದಾರೆ. ಡಿ.ಕೆ. ಶಿವಕುಮಾರ್ ಕ್ಯಾಬಿನೆಟ್ನಲ್ಲಿ ಈ ನಾಯಕರು ಸ್ಥಾನ ಪಡೆಯುವುದು ಸಾಧ್ಯವಿದೆಯೇ ಎಂಬುದು ಪ್ರಶ್ನೆಯಾಗಿದೆ. ಹೈಕಮಾಂಡ್ ಈ ಲಿಸ್ಟ್ಗೆ ಒಪ್ಪಿಗೆ ನೀಡುತ್ತದಾ ಅಥವಾ ಕೆಲವು ಬದಲಾವಣೆಗಳನ್ನು ಸೂಚಿಸುತ್ತದಾ ಎಂಬುದನ್ನು ಇಂದು ಅಥವಾ ನಾಳೆ ನಡೆಯುವ ಮೆಗಾ ಮೀಟಿಂಗ್ನಲ್ಲಿ ನಿರ್ಧರಿಸಲಾಗುವ ಸಾಧ್ಯತೆ ಇದೆ.
ಇನ್ನು ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ದೊಡ್ಡ ಸವಾಲಾಗಿದೆ. ಲಿಂಗಾಯತ, ಒಕ್ಕಲಿಗ, ದಲಿತ, ಪ್ರಬಲ ಹಿಂದುಳಿದ ವರ್ಗಗಳ ನಡುವಿನ ಸಮೀಕರಣವನ್ನು ಸರಿಯಾಗಿ ಹೊಂದಿಸಬೇಕಿದೆ. ಈಗಾಗಲೇ ಡಿ.ಕೆ. ಬೆಂಬಲಿಗ ಶಾಸಕರು ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸುತ್ತಿದ್ದಾರೆ.
ಇನ್ನೊಂದು ಮುಖ್ಯ ಚರ್ಚೆಯ ವಿಷಯವೆಂದರೆ, ಕೆ.ಪಿ.ಸಿ.ಸಿ. ಅಧ್ಯಕ್ಷ ಸ್ಥಾನ. ಸಿದ್ದರಾಮಯ್ಯ ಬೆಂಬಲಿಗರಾದ ಸಾಹುಕಾರ್ ಸತೀಶ್ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ನೀಡುವ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ಆದರೆ ಇದಕ್ಕೆ ಮತ್ತೊಂದು ಷರತ್ತು ಇದೆ ಎಂದು ಹೇಳಲಾಗುತ್ತಿದೆ. ಸಿದ್ದರಾಮಯ್ಯ ಅವರಿಗೆ ರಾಜ್ಯಸಭಾ ಸ್ಥಾನ ಅಥವಾ ಪಕ್ಷದಲ್ಲಿ ಗೌರವ ಸ್ಥಾನ ನೀಡುವಂತೆಯೂ ಬೇಡಿಕೆ ಇದೆ.
ಇಂದು ದೆಹಲಿಯಲ್ಲಿ ಮತ್ತೊಂದು ಮೆಗಾ ಮೀಟಿಂಗ್ ನಡೆಯುವ ಸಾಧ್ಯತೆ ಇದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೇವಾಲ ಅವರು ಈ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರೂ ಈ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.
ಡಿ.ಕೆ. ಸಂಪುಟ ರಚನೆಯು ಈಗಾಗಲೇ ‘ಸರ್ಕಸ್‘ ಎನಿಸುವಷ್ಟು ಜಟಿಲವಾಗಿದೆ. ಒಂದೆಡೆ ಸಿದ್ದು ಬೆಂಬಲಿಗರ ಒತ್ತಾಯ, ಇನ್ನೊಂದೆಡೆ ಡಿ.ಕೆ. ಬೆಂಬಲಿಗರ ಅಸಮಾಧಾನ. ಹೈಕಮಾಂಡ್ ಎಲ್ಲರನ್ನೂ ಸಮಾಧಾನಪಡಿಸಿ, ಸಂಪುಟದಲ್ಲಿ ಸರಿಯಾದ ಸಮತೋಲನ ಸಾಧಿಸುವುದು ಎಷ್ಟು ಸುಲಭ ಎಂಬುದು ಗಮನಿಸಬೇಕಾಗಿದೆ.
ಪ್ರಸ್ತುತ ಚರ್ಚೆಗಳು ಯಶಸ್ವಿಯಾದಲ್ಲಿ ಡಿ.ಕೆ. ಶಿವಕುಮಾರ್ ಅವರು ಶೀಘ್ರದಲ್ಲೇ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಆದರೆ ಸಂಪುಟದಲ್ಲಿ ಯಾರೆಲ್ಲಾ ಸ್ಥಾನ ಪಡೆಯುತ್ತಾರೆ ಎಂಬುದು ಇನ್ನೂ ರಹಸ್ಯವಾಗಿಯೇ ಉಳಿದಿದೆ.
